ಕೂಡಿಗೆ, ಜೂ. 9: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಜೋಳವನ್ನು ಬೆಳೆಯುವುದು ಕಳೆದ 25ವರ್ಷಗಳಿಂದ ರೂಡಿಯಾಗಿದೆ ಅದರಂತೆ ಈ ವರ್ಷ ಮಾರ್ಚ್‍ನಲ್ಲಿ ಬಿದ್ದ ಮಳೆಗೆ ಭೂಮಿಯನ್ನು ಹದಮಾಡಲಾಗಿತ್ತು. ನಂತರ ಮೇ ಅಥವಾ ಜೂನ್ ತಿಂಗಳಲ್ಲಿ ಜೋಳ ಬಿತ್ತನೆ ಮಾಡಬೇಕಾಗುತ್ತದೆ. ಈ ವ್ಯಾಪ್ತಿಯ ಐದು ಗ್ರಾಮ ಪಂಚಾಯತಿಯ 23 ಉಪ ಗ್ರಾಮದ ರೈತರು ಸಹಕಾರ ಸಂಘಗಳಿಂದ ಜೋಳದ ಬಿತ್ತನೆ ಬೀಜಗಳನ್ನು ಖರೀದಿ ಮಾಡಿ ಬಿತ್ತನೆ ಮಾಡಿರು ತ್ತಾರೆ. ಆದರೆ ಈ ಭಾಗದಲ್ಲಿ ಮೋಡ ಕವಿದ ವಾತಾವರಣ ಇದ್ದರೂ ಸಹ ಸಣ್ಣ ಪ್ರಮಾಣದ ಮಳೆಯು ಸಹ ಬಾರದೆ ಜೋಳ ಹುಟ್ಟುತ್ತಿಲ್ಲ. ಈ ಭಾಗದ ರೈತರು ಜೋಳ ಬಿತ್ತನೆ ಮಾಡಿ ಆಕಾಶದತ್ತ ನೋಡುತ್ತ ಕುಳಿತಿದ್ದಾರೆ.