ವೀರಾಜಪೇಟೆ, ಜೂ. 8: ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗಿನಿಂದ ಇಂದು ಬೆಳಗಿನ ತನಕ 2.12 ಇಂಚುಗಳಷ್ಟು (52 ಮಿ.ಮೀ.) ಮಳೆ ಸುರಿದಿದೆ. ನಿನ್ನೆ ದಿನ ಅಪರಾಹ್ನ 3ಗಂಟೆಯಿಂದ ಸಂಜೆ 5ಗಂಟೆಯ ತನಕ ಗುಡುಗು ಸಿಡಿಲಿನೊಂದಿಗೆ ಮಳೆ ಸುರಿಯಿತು. ಈ ವಿಭಾಗದಲ್ಲಿ ಇಂದು ಬೆಳಗಿನಿಂದಲೇ ಮೋಡ ಕವಿದ ವಾತಾವರಣ ಮುಂದುವರೆದಿದೆ.

ನಿನ್ನೆ ಅಪರಾಹ್ನ ಸುರಿದ ಮಳೆಗೆ ಇಲ್ಲಿನ ಮಾಂಸ ಮಾರುಕಟ್ಟೆಯ ಜಂಕ್ಷನ್ ಬಳಿ ಒಂದೂವರೆ ಅಡಿಗೂ ಅಧಿಕ ರಸ್ತೆಯ ಮೇಲೆ ಮಳೆ ನೀರು ಹರಿದ ಪರಿಣಾಮವಾಗಿ ಕೆಲ ಹೊತ್ತಿನವರೆಗೆ ಈ ವಿಭಾಗದಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಭಾರೀ ಮಳೆಯಿಂದಾಗಿ ಮಾಂಸ ಮಾರುಕಟ್ಟೆ ಬಳಿಯಿರುವ ಮತ್ಸ್ಯಭವನ ಪೂರ್ತಿಯಾಗಿ ನೀರಿನಿಂದ ಆವೃತ್ತಗೊಂಡು ಮೀನು ವ್ಯಾಪಾರಕ್ಕೂ ಅಡಚಣೆಯಾಯಿತ್ತೆಂದು ಮೀನು ವ್ಯಾಪಾರಿಗಳು ದೂರಿದ್ದಾರೆ.