ಸಿದ್ದಾಪುರ, ಜೂ. 8: ಕಳೆದ ವರ್ಷದ ಪ್ರವಾಹಕ್ಕೆ ತುತ್ತಾಗಿ ಮನೆ ಕಳೆದು ಕೊಂಡ ಸಂತ್ರಸ್ತ ಕುಟುಂಬಗಳಿಗೆ ಯಾವುದೇ ವ್ಯವಸ್ಥೆ ಕಲ್ಪಿಸದೆ ಪ್ರಸಕ್ತ ವರ್ಷ ಮಳೆ ಪ್ರಾರಂಭಕ್ಕೂ ಮುನ್ನ ನದಿ ತಟದ ನಿವಾಸಿಗಳಿಗೆ ನೋಟೀಸ್ ಜಾರಿ ಮಾಡಿರುವ ಜಿಲ್ಲಾಡಳಿತದ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ನೆಲ್ಲಿಹುದಿಕೇರಿ ಸಂತ್ರಸ್ತ ಹೋರಾಟ ಸಮಿತಿ ಮುಖಂಡ ಪಿ.ಆರ್. ಭರತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದೆರೆಡು ವರ್ಷಗಳಿಂದ ನೆಲ್ಯಹುದಿಕೇರಿ ಗ್ರಾಮದ ಕುಂಬಾರಗುಂಡಿ, ಬೆಟ್ಟದಕಾಡು, ಬರಡಿ, ನಲ್ವತ್ತೇಕರೆ ಭಾಗದ 500ಕ್ಕೂ ಅಧಿಕ ಮನೆಗಳು ಪ್ರವಾಹಕ್ಕೆ ತುತ್ತಾಗಿದ್ದು, ನೂರಾರು ಮನೆಗಳು ಸಂಪೂರ್ಣ ನೆಲಸಮಗೊಂಡಿದೆ. ಸಂತ್ರಸ್ತ ಕುಟುಂಬಗಳಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಅರೆಕಾಡು ಗ್ರಾಮದಲ್ಲಿ 8ಎಕರೆ ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸಿ ಸಂತ್ರಸ್ತರಿಗೆ ಮೀಸಲಿಡಲಾಗಿತ್ತು.

ತೆರವುಗೊಳಿಸಿದ ಜಾಗವನ್ನು ಸಮತಟ್ಟು ಮಾಡುವ ಕೆಲಸವಾಗಲಿ. ನಿವೇಶನ ವಿಂಗಡಣೆ ಮಾಡುವುದಾಗಲೀ ಮಾಡಲಿಲ್ಲ. ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದರೆ ಇರಲು ಒಂದಿಂಚು ಭೂಮಿ ಕೂಡಾ ಇಲ್ಲದ ಬಡಪಾಯಿಗಳು ಯಾವ ಸುರಕ್ಷಿತ ಸ್ಥಳಕ್ಕೆ ತೆರಳುವುದು ಎಂದು ಭರತ್ ಪ್ರಶ್ನಿಸಿದರು. ಚೀಟಿ ಎತ್ತುವ ಮೂಲಕ ಹಂಚಿಕೆ ಮಾಡಿದ ಪ್ರದೇಶದಲ್ಲಿ ಗುಡಿಸಲು ಕಟ್ಟಲು ಅನುಮತಿ ಕೇಳಿದರೆ ಅದಕ್ಕೂ ಜಿಲ್ಲಾಡಳಿತ ಒಪ್ಪುತ್ತಿಲ್ಲ. ಹಾಗಾಗಿ ನದಿತೀರದ ನಿವಾಸಿಗಳು ಸರ್ಕಾರ ಸುರಕ್ಷಿತ ವ್ಯವಸ್ಥೆ ಕಲ್ಪಿಸದೆ ಯಾವುದೇ ಕಾರಣಕ್ಕೂ ಎಲ್ಲಿಗೂ ತೆರಳುವುದಿಲ್ಲ. ಬಲತ್ಕಾರವಾಗಿ ತೆರವುಗೊಳಿಸಲು ಮುಂದಾದರೆ ಅದರಿಂದಾಗುವ ಪರಿಣಾಮಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದರು.

ತಾ. 12ರಂದು ನಿವೇಶನ ಹೋರಾಟ ಸಮಿತಿ ವತಿಯಿಂದ ನೆಲ್ಲಿಹುದಿಕೇರಿ ಗ್ರಾ.ಪಂ. ಎದುರು ಕಾನೂನಾತ್ಮಕ ಹೋರಾಟದ ಮೂಲಕ ಮನವಿ ಸಲ್ಲಿಸಲಿದೆ. ಆದಾದ ಬಳಿಕ ಡಿ.ಸಿ ಕಚೇರಿಗೆ ತೆರಳಿ ಅಹವಾಲುಗಳನ್ನು ತಿಳಿಸಲಿದ್ದೇವೆ ಎಂದರು. ಈ ಸಂದರ್ಭ ನಿರಾಶ್ರಿತರ ಹೋರಾಟ ಸಮಿತಿ ಪ್ರಮುಖರಾದ ಮಣಿ ಮಾಸ್ಟರ್, ಅನ್ನಮ್ಮ, ಸಫಿಯಾ, ಸಾಬು ವರ್ಗಿಸ್, ಬ್ರಿಜೆಟ್ ಲಿಲ್ಲಿ, ಸಂಗೀತಾ, ರಮ್ಲತ್ ಇತರರಿದ್ದರು.