ಮಡಿಕೇರಿ, ಜೂ. 8: ಜಿಲ್ಲೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವ ಹಿಸುತ್ತಿರುವ ಹೋಂಸ್ಟೇಗಳನ್ನು ಪತ್ತೆ ಹಚ್ಚಿ ಅವುಗಳಿಗೆ ಬೀಗ ಮುದ್ರೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಪ್ರಮುಖರೊಂದಿಗೆ ಮಾರ್ಗಸೂಚಿ ಪಾಲನೆ ಕುರಿತು ಕರೆದಿದ್ದ ಸಭೆಯಲ್ಲಿ ಇಬ್ಬರು ಅಧಿಕಾರಿಗಳು ಕೂಡ ಈ ಬಗ್ಗೆ ಕಠಿಣ ಕ್ರಮಕೈಗೊಳ್ಳುವ ಸುಳಿವು ನೀಡಿದರು. ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಣೆಗೊಂಡ ಹೋಂ ಸ್ಟೇಗಳು ಮಾತ್ರ ಕಾರ್ಯನಿರ್ವಹಿಸಬೇಕು. ಬಾಡಿಗೆ ಆಧಾರ ಅಥವಾ ಕೇವಲ ಪಂಚಾಯಿತಿಯ ನಿರಾಕ್ಷೇಪಣಾ ಪತ್ರ ಪಡೆದು ಈ ವೃತ್ತಿಯಲ್ಲಿ ತೊಡಗಿದ್ದರೆ, ಅಂತಹವರನ್ನು ಪತ್ತೆ ಹಚ್ಚಿ ಹೋಂ ಸ್ಟೇಗಳಿಗೆ ಬೀಗ ಜಡಿಯಲಾಗು ವುದೆಂದೂ, ಇದಕ್ಕೆ ಆಯಾ ತಾಲೂಕಿನ ಉಪತಹಶೀಲ್ದಾರ್‍ರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಮಾಹಿತಿಯಿತ್ತರು.

ಮಾರ್ಗಸೂಚಿ ಬಗ್ಗೆ ವಿವರಣೆ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಹೋಂ ಸ್ಟೇ, ಹೊಟೇಲ್, ಲಾಡ್ಜ್, ರೆಸಾರ್ಟ್‍ಗಳನ್ನು ತೆರೆಯಲು ಕೇಂದ್ರ ಹಾಗೂ ರಾಜ್ಯ ಸರಕಾರಗಳೇ ಅನುಮತಿ ನೀಡಿದ್ದು, ಈ ಕಾರಣದಿಂದ ಹಲವರ ಬೇಡಿಕೆಯಂತೆ ಪ್ರವಾಸೋದ್ಯಮ ಕ್ಷೇತ್ರವನ್ನು ತೆರೆಯದಂತೆ ಆದೇಶ ನೀಡಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು. ಆದರೂ ಅತಿಥಿಗಳಿಗೆ ಆಶ್ರಯ ನೀಡುವಾಗ ಆಯಾ ಸಂಸ್ಥೆಗಳು ಮಾರ್ಗಸೂಚಿ ಪಾಲಿಸದಿದ್ದಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳುವುದಾಗಿಯೂ ಡಿಸಿ ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿದರು.

ವೈದ್ಯಕೀಯ ಹಾಗೂ ಅನಿವಾರ್ಯ ಕಾರಣಗಳಿಂದ ಮಾತ್ರ 65 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷ ಕೆಳಗಿನವರಿಗೆ ಪ್ರವೇಶ ನೀಡಬಾರದು, ಕೊರೊನಾ ಪಾಸಿಟಿವ್ ವ್ಯಕ್ತಿಗಳಿದ್ದಲ್ಲಿ

(ಮೊದಲ ಪುಟದಿಂದ) ಅಂತಹ ಸಂಸ್ಥೆಯನ್ನು ಕ್ವಾರಂಟೈನ್ ಪ್ರದೇಶವೆಂದು ಘೋಷಿಸಿ ಸಂಸ್ಥೆಯ ಮಾಲೀಕರು ಮತ್ತು ನೌಕರರನ್ನು ಕ್ವಾರಂಟೈನ್‍ಗೆ ಕಳುಹಿಸಲಾಗುವುದು ಎಂದ ಜಿಲ್ಲಾಧಿಕಾರಿಗಳು, ಹೊರ ರಾಜ್ಯಗಳಿಂದ ಬಂದ ವ್ಯಕ್ತಿಗಳು 21 ದಿನಗಳ ಸಾಂಸ್ಥಿಕ ಬಂಧನ ಹಾಗೂ ವಿದೇಶದಿಂದ ಬಂದವರಿಗೆ 28 ದಿನಗಳ ಗೃಹ ಸಂಪರ್ಕ ತಡೆ ಪೂರ್ಣಗೊಳಿಸಿದಲ್ಲಿ ಮಾತ್ರ ಅಂತಹವರನ್ನು ಅತಿಥಿಗಳೆಂದು ಪರಿಗಣಿಸಬೇಕೆಂದರು. ಅತಿಥಿಗಳ ಪೂರ್ಣ ಮಾಹಿತಿ, ಪ್ರಯಾಣದ ವಿವರ ಇವುಗಳನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು. ಜಿಲ್ಲೆಯ ಜನತೆ ಹಾಗೂ ಅಧಿಕಾರಿ ವರ್ಗ ಕಳೆದ 3-4 ತಿಂಗಳುಗಳಿಂದ ಪಟ್ಟಿರುವ ಪರಿಶ್ರಮಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರವಾಸೋದ್ಯಮ ಕ್ಷೇತ್ರದವರ ಮೇಲಿದೆ ಎಂದು ಬೊಟ್ಟು ಮಾಡಿದ ಅನೀಸ್, ಈ ಕ್ಷೇತ್ರದಲ್ಲಿರುವವರು ಎಚ್ಚರಿಕೆಯ ಹೆಜ್ಜೆ ಇಡದಿದ್ದಲ್ಲಿ ಹಾಗೂ ಜವಾಬ್ದಾರಿ ವಹಿಸದಿದ್ದಲ್ಲಿ ಜನತೆಗೆ ಅವರೇ ಉತ್ತರ ನೀಡಬೇಕಾಗುತ್ತದೆ ಎಂದು ಕಟು ಸಂದೇಶ ನೀಡಿದರು.

ಜುಲೈ ನಂತರವಷ್ಟೇ ಪ್ರವಾಸಿ ತಾಣಗಳನ್ನು ತೆರೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದೆಂದು ಡಿಸಿ ಅವರು ಸ್ಪಷ್ಟಪಡಿಸಿದಾಗ ತಾಣಗಳನ್ನು ತೆರೆಯುವ ಬಗ್ಗೆ ರಾಜ್ಯ ಸರ್ಕಾರ ಸೂಚನೆ ನೀಡಿರುವುದನ್ನು ಹಲವರು ಅವರ ಗಮನಕ್ಕೆ ತಂದರು. ಈ ಬಗ್ಗೆ ಮಾಹಿತಿ ಸಂಗ್ರಹಿಸುವುದಾಗಿ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

ಸರಕಾರದ ಆದೇಶದಂತೆ ಪ್ರವಾಸಿ ಕೇಂದ್ರಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಅವರು ಸಭೆಯ ಗಮನಕ್ಕೆ ತಂದರು. ಮುಂದಿನ ಮಾರ್ಗಸೂಚಿಯಲ್ಲಿ ಈ ಬಗ್ಗೆ ಸ್ಪಷ್ಟ ವಿವರ ದೊರಕಬಹುದು ಎಂದರು. ಮಾರ್ಗಸೂಚಿಯ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕುರಿತು ವಿವರಣೆ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್, ಪ್ರವಾಸಿಗರು ಆಗಮಿಸುವ ಸಂದರ್ಭದಲ್ಲಿ ಸಂಪೂರ್ಣ ವಿವರ ಪಡೆಯಬೇಕಾಗಿದ್ದು, ಯಾವುದೇ ತಪ್ಪು ಮಾಹಿತಿ ನೀಡಿದಲ್ಲಿ ಸಂಸ್ಥೆಯ ಮಾಲೀಕರನ್ನೇ ಜವಾಬ್ದಾರಿ ಮಾಡಲಾಗುವುದು ಎಂದರು.

ರೆಸಾರ್ಟ್ ಅಸೋಸಿಯೇಶನ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಹೋಂ ಸ್ಟೇ ಅಸೋಸಿಯೇಶನ್ ಅಧ್ಯಕ್ಷ ಬಿ.ಜಿ. ಅನಂತಶಯನ, ಟೂರ್ಸ್ ಎಂಡ್ ಟ್ರಾವಲ್ ಅಸೋಸಿಯೇಶನ್ ಅಧ್ಯಕ್ಷ ಚೆಯ್ಯಂಡ ಸತ್ಯ, ಗೌರವ ಸಲಹೆಗಾರ ಜಿ. ಚಿದ್ವಿಲಾಸ್ ವಿವಿಧ ಸಂಸ್ಥೆಯ ಪದಾಧಿಕಾರಿಗಳಾದ ಅಂಬೆಕಲ್ ನವೀನ್, ಸಾಗರ್ ಗಣಪತಿ, ಕೆ.ಎಂ. ಕರುಂಬಯ್ಯ, ಡಿ.ಕೆ. ಮಂಜುನಾಥ್, ಕೆ.ಕೆ. ಭಾಸ್ಕರ್, ಬಿ.ಸಿ. ಮಂಜುನಾಥ್, ಮಹೀಂದ್ರ ರೆಸಾರ್ಟ್ ಮುಖ್ಯಸ್ಥ ವಿಜಯ್‍ಮೋಹನ್ ಹಾಗೂ ಇತರ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ ಇದ್ದರು.