ಗಡಿ ಸಮಸ್ಯೆಗೆ ಶಾಂತಿಯುತ ಪರಿಹಾರ

ಬೀಜಿಂಗ್, ಜೂ.8 : ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ, ಪರಸ್ಪರ ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಲು ಭಾರತ- ಚೀನಾ ಒಪ್ಪಿದ್ದು, ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಪರಿವರ್ತನೆ ಆಗಬಾರದು ಎಂದು ಈ ಹಿಂದೆ ಉಭಯ ದೇಶಗಳ ನಾಯಕರು ತೆಗೆದುಕೊಂಡಿದ್ದ ಒಮ್ಮತದ ನಿರ್ಧಾರವನ್ನು ಅನುಷ್ಠಾನಗೊಳಿಸುವ ಅಗತ್ಯ ಇದೆ ಎಂದು ಸೋಮವಾರ ಚೀನಾ ಹೇಳಿದೆ. ಭಾರತ-ಚೀನಾ ಗಡಿ ಸಮಸ್ಯೆ ಕುರಿತು ಉಭಯ ದೇಶಗಳ ನಡುವೆ ನಡೆದ ಉನ್ನತ ಸೇನಾ ಕಮಾಂಡರ್ ಸಭೆಯ ನಂತರ ಚೀನಾ ದೇಶಾಂಗ ಸಚಿವಾಲಯದ ವಕ್ತಾರೆ ಹು ಚುನ್ಯಿಂಗ್ ಅವರು ಈ ಹೇಳಿಕೆ ನೀಡಿದ್ದಾರೆ. ನೈಜ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‍ಎಸಿ) ಶಾಂತಿ ಕಾಪಾಡಲು ಮತ್ತು ಮಾತುಕತೆಯ ಮೂಲಕ ಗಡಿ ವಿವಾದವನ್ನು ಪರಿಹರಿಸಿಕೊಳ್ಳಲು ಚೀನಾ ಮತ್ತು ಭಾರತ ಒಪ್ಪಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ. ಜೂನ್ 6ರಂದು ಚುಸುಲ್ ಮೊಲ್ಡೊ ಪ್ರದೇಶದಲ್ಲಿ ಎರಡೂ ದೇಶಗಳ ಕಮಾಂಡರ್‍ಗಳ ನಡುವೆ ಮಾತುಕತೆ ನಡೆಯಿತು. ಗಡಿಯಲ್ಲಿನ ಪರಿಸ್ಥಿತಿ ಚರ್ಚಿಸಲು ಎರಡೂ ಕಡೆಯ ರಾಜತಾಂತ್ರಿಕ ಹಾಗೂ ಸೇನಾ ಪ್ರಮುಖರು ನಿಕಟ ಸಂಪರ್ಕದಲ್ಲಿ ಇದ್ದಾರೆ ಎಂದು ಹು ಹೇಳಿದ್ದಾರೆ.

ಸಧ್ಯದಲ್ಲೇ ಅಂತರ್ ರಾಜ್ಯ ಬಸ್ ಸೇವೆ

ಕಲಬುರಗಿ, ಜೂ.8 : ಮೂರ್ನಾಲ್ಕು ದಿನಗಳ ಬಳಿಕ ಅಂತರ್ ರಾಜ್ಯ ಬಸ್ ಸೇವೆಯನ್ನು ಪುನರ್ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ. ಮಹಾರಾಷ್ಟ್ರ ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳಿಗೂ ಬಸ್ ಸಂಚಾರ ಆರಂಭಿಸಲು ಚಿಂತನೆ ನಡೆದಿದೆ. ಈಗಾಗಲೇ ಆಂಧ್ರಪ್ರದೇಶ, ತೆಲಂಗಾಣ , ಗೋವಾ ಮತ್ತಿತರ ರಾಜ್ಯಗಳಿಗೆ ಪತ್ರ ಬರೆಯಾಗಿದೆ, ಅಲ್ಲಿಂದ ಒಪ್ಪಿಗೆ ಬಂದರೆ ಸಂಚಾರ ಆರಂಭಿಸಲಾಗುವುದು ಎಂದು ತಿಳಿಸಿದರು. ರಾಜ್ಯದೊಳಗೆ ಹವಾನಿಯಂತ್ರಿತ ಸ್ಲೀಪರ್ ಕೋಚ್ ಬಸ್ ಗಳ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿದೆ. ಹೊರ ರಾಜ್ಯ ಪ್ರವಾಸ ಮಾಡುವವರಿಂದ ಕೂಡಾ ಬೇಡಿಕೆ ಬರುತ್ತಿದೆ ಎಂದರು. ಲಾಕ್ ಡೌನ್ ಕಾರಣ ಸಾರಿಗೆ ಇಲಾಖೆಗೆ 2,200 ಕೋಟಿ ನಷ್ಟ ಸಂಭವಿಸಿದೆ. ಇದನ್ನು ಸರಿದೂಗಿಸಲು ಬಸ್ ಪ್ರಯಾಣ ದರ ಏರಿಸುವುದಿಲ್ಲ, ಸಿಬ್ಬಂದಿ ಕಡಿತ, ರಜೆ ಮೇಲೆ ಕಳುಹಿಸುವ ಕ್ರಮ ಅನುಸರಿಸುವುದಿಲ್ಲ, ಬದಲಾಗಿ ಸೋರಿಕೆ ತಡೆ, ಕಾರ್ಯಕ್ಷಮತೆ ವೃದ್ಧಿ ಸೇರಿದಂತೆ ಇತರ ಪರ್ಯಾಯ ಮಾರ್ಗ ಕಂಡುಕೊಳ್ಳುತ್ತೇವೆ ಎಂದು ಹೇಳಿದರು.

ಬಾಣಂತಿಯರಿಗೆ ನಗದು ಸೌಲಭ್ಯ

ಬೆಂಗಳೂರು, ಜೂ.8 : ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಮೂರು ಕಂತುಗಳಲ್ಲಿ ಒಟ್ಟು 5,000 ರೂ ಧನ ಸಹಾಯವನ್ನು ನೇರ ನಗದು ವರ್ಗಾವಣೆಯ ಮೂಲಕ ಒದಗಿಸುವ ಯೋಜನೆ ಜಾರಿಯಲ್ಲಿದ್ದು, ಮೊದಲ ಜೀವಂತ ಹೆರಿಗೆಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ. ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಪರ್ಕ ಹೊಂದಿರುವ ಉಳಿತಾಯ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಈಗಾಗಲೇ ನಮೂನೆ 1-ಎ ಮತ್ತು 1-ಬಿ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳು ನಮೂನೆ 1-ಸಿ ಅರ್ಜಿಯನ್ನೂ ಸಹ ಫಲಾನುಭವಿ ಮತ್ತು ಪತಿಯ ಆಧಾರ್ ಕಾರ್ಡ್ ಪ್ರತಿ, ತಾಯಿಕಾರ್ಡ್ ಪ್ರತಿ, ಆಧಾರ್ ಲಿಂಕ್ ಬ್ಯಾಂಕ್‍ನ ಉಳಿತಾಯ ಖಾತೆ ಪ್ರತಿಗಳೊಂದಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ನಿಗಧಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಕೊರೊನಾಗೆ ಮತ್ತೆ ಮೂವರ ಬಲಿ

ಬೆಂಗಳೂರು, ಜೂ.8 : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ಸೋಮವಾರ ಮತ್ತೆ ಬರೋಬ್ಬರಿ 308 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5760ಕ್ಕೆ ಏರಿಕೆಯಾಗಿದೆ. ಅಲ್ಲದೆ ಇಂದು 387 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 308 ಸೋಂಕಿತರ ಪೈಕಿ 277 ಮಂದಿ ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಓರ್ವ ವ್ಯಕ್ತಿ ಅಂತಾರಾಷ್ಟ್ರೀಯ ಪ್ರಯಾಣದಿಂದ ಮರಳಿದ್ದಾರೆ. ಜೊತೆಗೆ, ಒಂದೇ ದಿನ ಬೆಂಗಳೂರು ನಗರವೊಂದರಲ್ಲೇ ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. ಇದರಿಂದ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 64ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ 2519 ಮಂದಿ ಗುಣಮುಖರಾಗಿದ್ದು, 3175 ಸಕ್ರಿಯ ಪ್ರಕರಣಗಳಿವೆ. ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 67 ವರ್ಷದ ವ್ಯಕ್ತಿ ಸೋಮವಾರ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆ, ಜ್ವರ ಮತ್ತು ನಿಶ್ಯಕ್ತಿಯಿಂದ ಆಸ್ಪತ್ರೆಗೆ ದಾಖಲಾಗಿರುವ 48 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ.

ಆಧಾರ್ ನೋಂದಣಿ ಜನಸೇವಕ ವ್ಯಾಪ್ತಿಗೆ

ಬೆಂಗಳೂರು, ಜೂ.8 : ಆಧಾರ್ ನೋಂದಣಿ, ಎಪಿಎಲ್ ಪಡಿತರ ಚೀಟಿ ಮತ್ತು ಮತದಾರ ಯಾದಿಗೆ ಹೆಸರು, ನೋಂದಣಿ ಸೇವೆಗಳನ್ನು ಸಕಾಲ ಸ್ಕೀಂನ ಜನಸೇವಕ ಯೋಜನೆಯಡಿ ಒದಗಿಸಲು ಸಂಬಂಧಿಸಿದ ಇಲಾಖೆಗಳು ಸಹಮತ ವ್ಯಕ್ತಪಡಿಸಿದ್ದು, ಇಷ್ಟರಲ್ಲಿಯೇ ಈ ಸೇವೆಗಳನ್ನು ಜನಸೇವಕ ವ್ಯಾಪ್ತಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ತಾತ್ಕಾಲಿಕ ಸ್ಥಗಿತವಾಗಿದ್ದ ನಾಗರೀಕರ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವ ಜನಸೇವಕ ಯೋಜನೆಯನ್ನು ಪುನರಾರಂಭಗೊಳಿಸುವ ನಿಟ್ಟಿನಲ್ಲಿ ವಿಧಾನಸೌಧದದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಹಾಗೂ ಬೆಂಗಳೂರಿನ ಸಂಬಂಧಿಸಿದ ವಿಧಾನಸಭಾ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಈ ಯೋಜನೆಯನ್ನು ಶೀಘ್ರದಲ್ಲೇ ಪುನರಾರಂಭಿಸಲಾಗುವುದು ಎಂದರು.

ಪಾಕ್ ಹನಿಟ್ರ್ಯಾಪ್ : ಇಬ್ಬರ ಬಂಧನ

ನವದೆಹಲಿ ಜೂ.8 : ಪಾಕಿಸ್ತಾನದ ಹನಿಟ್ರ್ಯಾಪ್‍ಗೆ ಸಿಲುಕಿ ಗೌಪ್ಯ ಮಾಹಿತಿ ರವಾನಿಸುತ್ತಿದ್ದ ಇಬ್ಬರು ಭಾರತೀಯರನ್ನು ಮಿಲಿಟರಿ ಇಂಟೆಲಿಜೆನ್ಸ್ ಮತ್ತು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪಾಕಿಸ್ತಾನಿ ಐಎಸ್‍ಐ ಮೂಲದ ಯುವತಿಯ ಹನಿಟ್ರ್ಯಾಪ್ ಗೆ ಸಿಲುಕಿ ಗೌಪ್ಯ ಮಾಹಿತಿಯನ್ನು ರವಾನಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಸೇನಾ ಯುದ್ಧಸಾಮಗ್ರಿ ಡಿಪೋದಲ್ಲಿ ನಾಗರಿಕ ರಕ್ಷಣಾ ಉದ್ಯೋಗಿ ವಿಕಾಸ್ ಕುಮಾರ್(29) ಮತ್ತು ಸೇನೆಯ ನಾಗರಿಕ ಗುತ್ತಿಗೆ ಉದ್ಯೋಗಿ ಚಿಮನ್ ಲಾಲ್ (22) ಅವರನ್ನು ಬಂಧಿಸಿದ್ದಾರೆ. ಅಧಿಕೃತ ಮೂಲಗಳು ಹೇಳುವಂತೆ, ಲಖನೌ ಮೂಲದ ಮಿಲಿಟರಿ ಇಂಟೆಲಿಜೆನ್ಸ್ (ಎಂಐ) ಒದಗಿಸಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್(ಐಎಸ್‍ಐ) ನ ಗೂಢಚಾರರಾಗಿ ಕೆಲಸ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ಶ್ರೀ ಗಂಗನಗರದಲ್ಲಿನ ಮದ್ದುಗುಂಡು ಡಿಪೋ ಮತ್ತು ಬಿಕಾನೇರ್‍ನಲ್ಲಿನ ಎಂಎಂಎಫ್‍ಆರ್ ಎರಡೂ ಭಾರತದ ಪಶ್ಚಿಮ ಭಾಗದಲ್ಲಿ ಆಯಕಟ್ಟಿನ ಪ್ರಮುಖ ಮಿಲಿಟರಿ ಕೇಂದ್ರಗಳಾಗಿವೆ.