ಮಡಿಕೇರಿ, ಜೂ. 8: ಲಾಕ್‍ಡೌನ್ ಸಡಿಲಿಕೆ ನಡುವೆ ಇಂದು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಎಲ್ಲೆಡೆ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಂಡರಲ್ಲದೆ, ವಾಹನ ದಟ್ಟಣೆ ಹೆಚ್ಚಾಗಿ ಕಾಣುವಂತಾಯಿತು. ಹೀಗಾಗಿ ಇಳಿವಯಸ್ಸಿನ ಹಿರಿಯರಿಂದ ಪುಟ್ಟ ಮಕ್ಕಳೊಂದಿಗೆ (ಮೊದಲ ಪುಟದಿಂದ) ಓಡಾಡುತ್ತಿದ್ದ ಮಂದಿಯನ್ನು ಕಂಡು ಅನೇಕರು ಕೊರೊನಾ ಸೋಂಕು ಹೆಚ್ಚಾಗುವ ಆತಂಕ ವ್ಯಕ್ತಪಡಿಸುತ್ತಿದ್ದರು.65 ವರ್ಷ ಮೇಲ್ಪಟ್ಟ ಹಿರಿಯರು ಮತ್ತು 10 ವಯಸ್ಸಿನ ಒಳಗಿನ ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸದಂತೆ ಸರಕಾರ ಕಳಕಳಿ ವ್ಯಕ್ತಪಡಿಸುತ್ತಿದೆ. ಹೀಗಿದ್ದರೂ ಇಂದು ದೇವಾಲಯ, ಬಸ್ ನಿಲ್ದಾಣ, ಹೊಟೇಲ್‍ಗಳಲ್ಲಿ ಪೋಷಕರು ಪುಟ್ಟ ಮಕ್ಕಳೊಂದಿಗೆ ಸುಳಿದಾಡುತ್ತಿದ್ದ ಸನ್ನಿವೇಶ ಎದುರಾಯಿತು. ಈ ಬಗ್ಗೆ ಪೋಷಕರೊಬ್ಬರು ಪ್ರತಿಕ್ರಿಯಿಸುತ್ತಾ, ಸಣ್ಣ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬರುವುದು ಹೇಗೆ ಎಂದು ಅಸಮಾಧಾನದಿಂದಲೇ ಪ್ರಶ್ನಿಸಿದರು. ಹಿರಿಯರು ಕೂಡ ಮನೆಯೊಳಗೆ ಕುಳಿತು ಇಷ್ಟು ಸಮಯ ಸಾಕಾಗಿ ಹೋಗಿದೆ ಎಂದು ಉದ್ಗರಿಸುತ್ತಿದ್ದರು.

ಬಸ್ ಸಂಚಾರ: ಇಂದು ಬೆಳಿಗ್ಗೆಯಿಂದ ಅಪರಾಹ್ನ ಹೊತ್ತಿಗೆ ಮಡಿಕೇರಿಯಿಂದ ಬೆಂಗಳೂರು, ಮೈಸೂರು, ಮಂಗಳೂರು ಕಡೆಗೆ ಮುನ್ನೂರಕ್ಕೂ ಅಧಿಕ ಪ್ರಯಾಣಿಕರು ತೆರಳಿದ ಮಾಹಿತಿ ಲಭಿಸಿತು. ಬೆಂಗಳೂರು ಮಾರ್ಗವಾಗಿ 15 ರಾಜ್ಯ ಸಾರಿಗೆ ಬಸ್‍ಗಳು, ಮೈಸೂರು-ಮಡಿಕೇರಿ ನಡುವೆ 14, ಸುಳ್ಯ, ಪುತ್ತೂರು ಮಾರ್ಗವಾಗಿ ಮಂಗಳೂರಿಗೆ 15 ಬಸ್‍ಗಳು, ಹಾಸನ-ಕೊಣನೂರು ಮಾರ್ಗವಾಗಿ 5 ಬಸ್‍ಗಳು ತೆರಳಿರುವ ಮಾಹಿತಿ ಸಿಕ್ಕಿತು. ಜಿಲ್ಲೆಯೊಳಗೆ ಕುಶಾಲನಗರ-ಮಡಿಕೇರಿ ನಡುವೆ 15, ವೀರಾಜಪೇಟೆ ಮಾರ್ಗದಲ್ಲಿ 9, ಸೋಮವಾರಪೇಟೆ ಮಾರ್ಗ 5, ಭಾಗಮಂಡಲ 5 ಹಾಗೂ ನಾಪೋಕ್ಲುವಿಗೆ 1 ಬಸ್ ತೆರಳಿತು.

ಇನ್ನು ನಾಲ್ಕಾರು ಖಾಸಗಿ ಬಸ್‍ಗಳ ಸಂಚಾರ ನಡುವೆ, ಹೆಚ್ಚಿನ ಸಂಖ್ಯೆಯಲ್ಲಿ ಇತರ ವಾಹನಗಳಿಂದ ನಗರದ ಬಹುತೇಕ ಕಡೆಗಳಲ್ಲಿ ಕಿಕ್ಕಿರಿದ ವಾಹನ ದಟ್ಟಣೆ ಕಂಡುಬಂತು. ಸಾರ್ವಜನಿಕ ವಾಹನಗಳ ನಿಲುಗಡೆಗೆ ಅನೇಕರು ಪರದಾಡುತ್ತಿದ್ದು, ಪೊಲೀಸರು ಶ್ರಮಪಡುವಂತಾಯಿತು.