ಮಡಿಕೇರಿ, ಜೂ. 8: ಮಳೆಗಾಲದ ಸಂದರ್ಭ ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಿರುವಂತೆ ರಕ್ಷಣಾ ಪಡೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಸೂಚನೆ ನೀಡಿದರು.ಮಳೆಗಾಲದ ವೇಳೆ ಪ್ರಾಕೃತಿಕ ವಿಕೋಪ ಸಂಭವಿಸಿದರೆ ಅದನ್ನು ಸಮರ್ಪಕವಾಗಿ ನಿಭಾಯಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಜಂಟಿಯಾಗಿ ಗೃಹರಕ್ಷಕ ದಳ ಹಾಗೂ ಅಗ್ನಿಶಾಮಕ ದಳದ ಸಹಕಾರದೊಂದಿಗೆ ಸಜ್ಜಾಗುವ ನಿಟ್ಟಿನಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಲಾಗಿರುವ ತರಬೇತಿ ಕಾರ್ಯಾಗಾರಕ್ಕೆ ಪೊಲೀಸ್ ಕ್ಯಾಂಟೀನ್ ಕಟ್ಟಡದಲ್ಲಿ ಇಂದು ಚಾಲನೆ ನೀಡಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸುಮನ್ ಮಾತನಾಡಿದರು.

ಪ್ರಾಕೃತಿಕ ವಿಕೋಪವನ್ನು ಎದುರಿಸಲು ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿದ್ಧವಾಗಿದೆ. ಇದರೊಂದಿಗೆ ಪೊಲೀಸ್ ಇಲಾಖೆ ಯಿಂದಲೂ ನಾಲ್ಕು ರಕ್ಷಣಾ ಪಡೆಗಳನ್ನು ರಚಿಸಲಾಗಿದೆ.

(ಮೊದಲ ಪುಟದಿಂದ) ಪ್ರತಿಯೊಂದು ತಂಡದಲ್ಲಿ ಪಿಎಸ್‍ಐ ಒಳಗೊಂಡಂತೆ 16 ಮಂದಿ ಇರುತ್ತಾರೆ. 30 ರಿಂದ 35 ವರ್ಷದೊಳಗಿನ ಈಜು ಕಲಿತಿರುವ, ದೈಹಿಕವಾಗಿ ಸಮರ್ಥರಾಗಿರುವುದರ ಜೊತೆಗೆ ಸ್ಥಳೀಯ ಪ್ರದೇಶಗಳ ಬಗ್ಗೆ ಸ್ಪಷ್ಟ ಮಾಹಿತಿ ಇರುವವರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ.

ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ಉಪ ವಿಭಾಗ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿವೆ. ರ್ಯಾಫ್ಟ್, ಬೋಟ್‍ಗಳು ಸೇರಿದಂತೆ ಅಗತ್ಯ ಸಲಕರಣೆಗಳನ್ನು ಕೂಡ ಈಗಾಗಲೇ ಸಿದ್ಧಗೊಳಿಸಲಾಗಿದೆ. ಮಳೆಗಾಲದಲ್ಲಿ ಅಪಾಯ ಎದುರಾದ ಬಗ್ಗೆ ಬರುವ ಯಾವುದೇ ಮಾಹಿತಿಗಳನ್ನು ಕಡೆಗಣಿಸದೆ ಜನರ ಪ್ರಾಣರಕ್ಷಣೆಯ ಕಾರ್ಯವನ್ನು ಬದ್ಧತೆಯಿಂದ ನಿರ್ವಹಿಸುವಂತಾಗಬೇಕೆಂದು ರಕ್ಷಣಾ ಪಡೆಗಳಿಗೆ ಕಿವಿಮಾತು ಹೇಳಿದ ಎಸ್ಪಿ, ಜನರ ರಕ್ಷಣೆಯೊಂದಿಗೆ ತಮ್ಮ ತಮ್ಮ ಸುರಕ್ಷತೆಯ ಬಗ್ಗೆಯೂ ಎಚ್ಚರವಹಿಸುವಂತೆ ಸಿಬ್ಬಂದಿಗೆ ಸಲಹೆಯಿತ್ತರು.

ವಿಪತ್ತು ನಿರ್ವಹಣಾ ಪಡೆಯ ಜಿಲ್ಲಾ ಅಧಿಕಾರಿ ಅನನ್ಯ ವಾಸುದೇವ್ ಮಾತನಾಡಿ, ಎನ್‍ಡಿಆರ್‍ಎಫ್‍ನಿಂದ ಈಗಾಗಲೇ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ 50 ಸಾವಿರ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಮಳೆಗಾಲದ ಸಂದರ್ಭ ಮರ ಬೀಳುವುದು ಇತ್ಯಾದಿ ಅನಾಹುತಗಳು ಸಂಭವಿಸಿದಲ್ಲಿ ಅವುಗಳ ನಿರ್ವಹಣೆಗೆ ಆ ಹಣವನ್ನು ಪಂಚಾಯಿತಿಗಳು ಬಳಸಿಕೊಳ್ಳಬಹುದಾಗಿದೆ. ವಿಪತ್ತು ನಿರ್ವಹಣೆಗಾಗಿ ಪ್ರತಿ ಹೋಬಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಎಲ್ಲಾ ಇಲಾಖೆಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವಂತಾಗಬೇಕು ಎಂದು ಹೇಳಿದರು.

ಎನ್‍ಡಿಆರ್‍ಎಫ್‍ನ ಟೀಂ ಕಮಾಂಡೆಂಟ್ ಉಪಾಧ್ಯಾಯ ಮಾತನಾಡಿ, ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ತರಬೇತಿ ಅತಿ ಮುಖ್ಯವಾಗಿದ್ದು, ವಿಪತ್ತು ಎದುರಾದ ಸಂದರ್ಭ ಅವುಗಳನ್ನು ಎದುರಿಸುವುದು ಸುಲಭದ ಮಾತಲ್ಲ. ಯಾವುದೇ ನಿರ್ಲಕ್ಷ್ಯ ತಾಳದೆ ಪ್ರಾಮಾಣಿಕವಾಗಿ ರಕ್ಷಣಾ ಕಾರ್ಯಗಳಲ್ಲಿ ತಂಡಗಳು ತೊಡಗಿಸಿಕೊಳ್ಳುವಂತಾಗಬೇಕು ಎಂದು ನುಡಿದರು.

ನಾಲ್ಕು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ವೈದ್ಯಕೀಯ ತರಬೇತಿ, ಹಗ್ಗ ಬಳಸಿ ರಕ್ಷಣಾ ಕಾರ್ಯ, ರ್ಯಾಫ್ಟಿಂಡ್ ಬೋಟ್ ಬಳಸಿ ಕಾರ್ಯಾಚರಣೆಗಳನ್ನು ನಡೆಸಲು ಅಣಕು ಪ್ರದರ್ಶನದ ಮೂಲಕ ತರಬೇತಿಗಳನ್ನು ಹಾರಂಗಿ ಹಿನ್ನೀರು ಸೇರಿದಂತೆ ಹಲವೆಡೆ ನೀಡಲಾಗುತ್ತದೆ.

ವೇದಿಕೆಯಲ್ಲಿ ಮಡಿಕೇರಿ ಡಿವೈಎಸ್ಪಿ ದಿನೇಶ್ ಕುಮಾರ್, ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್, ಸೋಮವಾರಪೇಟೆ ಡಿವೈಎಸ್ಪಿ ಶೈಲೇಂದ್ರ ಉಪಸ್ಥಿತರಿದ್ದರು.

ಸೋಮವಾರಪೇಟೆ ಠಾಣಾಧಿಕಾರಿ ಶಿವಶಂಕರ್ ನಿರೂಪಿಸಿ, ವೃತ್ತ ನಿರೀಕ್ಷಕ ಜಯರಾಂ ಸ್ವಾಗತಿಸಿದರು. ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ವಂದಿಸಿದರು.