ಕೂಡಿಗೆ ಜೂ. 6: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ವಸಾಹತು ಕಾಲೋನಿಯಲ್ಲಿ ಕಾವೇರಿ ನೀರಾವರಿ ನಿಗಮದ ಜಾಗದಲ್ಲಿರುವ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಬಾಸ್ಕರ್ ನಾಯಕ್ ಮತ್ತು ಗ್ರಾಮಸ್ಥರು ಮನವಿಯನ್ನು ಸಲ್ಲಿಸಿದ ಮೇರೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಅರಿತು ಬದಲ್ಲಿ ಜಾಗದಲ್ಲಿ ನೂತನ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಕಳುಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು

ಸಚಿವರು ಈಗಿನ ಆಸ್ಪತ್ರೆಯ ಕಟ್ಟಡವನ್ನು ಪರಿಶೀಲನೆ ಮಾಡಿ ಇದರಲ್ಲಿ ಈಗ ನಡೆಯುತ್ತಿರುವುದರ ಜೊತೆಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು. ಅಲ್ಲದೆ ಮುಂದಿನ ದಿನಗಳಲ್ಲಿ ನೂತನ ಕಟ್ಟಡಕ್ಕೆ ಹಣವನ್ನು ಒದಗಿಸಲಾಗು ವುದು. ಕ್ಷೇತ್ರದ ಶಾಸಕರ ಒಪ್ಪಿಗೆ ಅನುಗುಣವಾಗಿ ಭೂಮಿ ಪೂಜೆ ನೆರವೇರಿಸಿ ನಂತರ ಕಟ್ಟಡ ನಿರ್ಮಾಣದ ಕಾಮಗಾರಿ ಪ್ರಾರಂಭಿಸಲು ಸಿದ್ದರಾಗಬೇಕು ಎಂದು ಸೂಚನೆ ನೀಡಿದರು.

ಇದೆ ಸಂದರ್ಭದಲ್ಲಿ ಹಾಜರಿದ್ದ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸ್ಥಳದ ವರ್ಗಾವಣೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ, ಮೋಹನ್, ಬಿಜೆಪಿಯ ಬಿ.ಬಿ. ಭಾರತೀಶ್, ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಭಾಸ್ಕರ್ ನಾಯಕ್, ಕಾವೇರಿ ನೀರಾವರಿ ಇಲಾಖೆಯ ಸಹಾಯಕ ಪಾಲಕ ಅಭಿಯಂತರ ಇಂಜಿನಿಯರ್ ಮಹೇಂದ್ರ ಕುಮಾರ್, ಸಹಾಯಕ ಇಂಜಿನಿಯರ್ ನಾಗರಾಜ್, ಇಂಜಿನಿಯರ್ ಕಿರಣ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.