ಸಿದ್ದಾಪುರ, ಜೂ. 5 : ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ನದಿ ತೀರದ ನಿವಾಸಿಗಳಿಗೆ ಹಾಗೂ ಸಂತ್ರಸ್ತರಿಗೆ ಶಾಶ್ವತ ಸೂರನ್ನು ಕೂಡಲೇ ಒದಗಿಸಬೇಕಾಗಿ ಒತ್ತಾಯಿಸಿ ನೆಲ್ಯಹುದಿಕೇರಿ ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಸಿಪಿಐ(ಎಂ) ಪಕ್ಷದ ಮುಖಂಡ ಪಿ.ಆರ್. ಭರತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಸುರಿದ ಮಹಾ ಮಳೆಗೆ ಕಾವೇರಿ ನದಿಯಲ್ಲಿ ಪ್ರವಾಹಕ್ಕೆ ಸಿಲುಕಿ ನೆಲ್ಯಹುದಿಕೇರಿ ಗ್ರಾಮದ ನದಿ ತೀರದ ನೂರಾರು ಮನೆಗಳು ಹಾನಿಗೊಳಗಾಗಿವೆ. ಈ ಕುಟುಂಬಗಳಿಗೆ ಶಾಶ್ವತ ಸೂರು ಒದಗಿಸಿಕೊಡುವ ನಿಟ್ಟಿನಲ್ಲಿ ಅರೆಕಾಡು ಗ್ರಾಮದಲ್ಲಿ ಒತ್ತುವರಿ ಭೂಮಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿತ್ತು. ಆ ಜಾಗದಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಶಾಸಕರ ಸಮ್ಮುಖದಲ್ಲಿ ಫಲಾನುಭವಿಗಳ ಪಟ್ಟಿಗಳನ್ನು ತಯಾರಿಸಲಾಗಿತ್ತು. ನಂತರ ಫಲಾನುಭವಿಗಳ ಹೆಸರುಗಳನ್ನು ಲಾಟರಿ ಮುಖಾಂತರ ಆಯ್ಕೆಗೊಳಿಸಲಾಗಿತ್ತು.

ಆದರೆ ಈವರೆಗೂ ಜಿಲ್ಲಾಡಳಿತ ವಶಪಡಿಸಿಕೊಂಡಿರುವ 8 ಏಕರೆ ಒತ್ತುವರಿ ಜಾಗದಲ್ಲಿ ಪುನರ್ವಸತಿಗೆ ಸಂಬಂಧಿಸಿದ ಕಾಮಗಾರಿಗಳನ್ನು ನಡೆಸದೇ ಜಿಲ್ಲಾಡಳಿತವು ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಭರತ್ ಆರೋಪಿಸಿದರು. ಇದೀಗ ಮುಂಗಾರು ಮಳೆ ಪ್ರಾರಂಭವಾಗಿದ್ದು, ಸಂತ್ರಸ್ತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸಂತ್ರಸ್ತರಿಗೆ ಶಾಶ್ವತ ಸೂರನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ಪಕ್ಷವು ತಾ. 3 ರಂದು ಗ್ರಾ.ಪಂ ಕಚೇರಿ ಎದುರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಗೋಷ್ಠಿಯಲ್ಲಿ ಎಂ.ಜಿ. ಜೋಸ್ ಮತ್ತು ವೈ.ಆರ್ ರವಿ ಹಾಜರಿದ್ದರು.