ಮಡಿಕೇರಿ, ಜೂ.6 : ದೇಶಿ ಪ್ರವಾಸಿಗರನ್ನು ಕೊಡಗಿನತ್ತ ಸೆಳೆಯುವ ನಿಟ್ಟಿನಲ್ಲಿ “ಬನ್ನಿ ಕೊಡಗಿನಲ್ಲಿ ಮಳೆಗಾಲ ಆನಂದಿಸಿ” ಎಂಬ ಸಂದೇಶದೊಂದಿಗೆ ಕೊಡಗನ್ನು ಮತ್ತೆ ಕರಾಳವನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿರುವ ಮಡಿಕೇರಿ ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ, ಡಿಸೆಂಬರ್ ಅಂತ್ಯದವರೆಗೆ ಹೋಂಸ್ಟೇಗಳನ್ನು ತೆರೆಯಲು ಅವಕಾಶ ನೀಡಬಾರದೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊರೊನಾ ಲಾಕ್ ಡೌನ್ ನಿಂದಾಗಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಜನರು ಮನೆಯಲ್ಲಿಯೇ ಕುಳಿತು ಕಾರ್ಯ ನಿರ್ವಹಿಸು ವಂತಾಗಿತ್ತು. ಆದರೆ ಇದೀಗ ಲಾಕ್ಡೌನ್ ಸಡಿಲಿಕೆ ಯಿಂದಾಗಿ ಜನರು ಪ್ರವಾಸಿತಾಣವನ್ನು ಬಯಸುವ ಸಾಧ್ಯತೆಯಿದ್ದು, ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೊಡಗಿನಲ್ಲಿರುವ ಅನಧಿಕೃತ ಹೋಂ ಸ್ಟೇಗಳು ಸಾವಿರಾರು ರೂಪಾಯಿ ಖರ್ಚು ಮಾಡಿ ಥರ್ಮಲ್ ಟೆಂಪರೇಚರ್ ಪರೀಕ್ಷಾ ಯಂತ್ರವನ್ನು ಖರೀದಿಸಲು ಸಾಧ್ಯವೇ ಎಂದು ಪ್ರಶ್ನಿಸಿರುವ ಪವನ್ ಪೆಮ್ಮಯ್ಯ, ಅವರು ನಿರ್ಲಕ್ಷ್ಯ ವಹಿಸಿದರೆ ಇಡೀ ಕೊಡಗಿಗೆ ಸೋಂಕು ಹಬ್ಬುವÀ ಸಾಧ್ಯತೆಗಳಿದೆ ಎಂದು ಹೇಳಿದ್ದಾರೆ.
ಕೊಡಗಿನ ಎಲ್ಲಾ ಹೋಂಸ್ಟೇಗಳನ್ನು ಡಿಸೆಂಬರ್ ಅಂತ್ಯದವರೆಗೆ ಮುಚ್ಚಬೇಕೆಂದು ಒತ್ತಾಯಿಸಿರುವ ಪವನ್ ಪೆಮ್ಮಯ್ಯ, ಅತ್ಯಂತ ಸೂಕ್ಷ್ಮ ಕಾಲದಲ್ಲಿ ಆರ್ಥಿಕ ಲಾಭದ ದುರುದ್ದೇಶದಿಂದ ಪ್ರವಾಸಿಗರನ್ನು ಕೊಡಗಿಗೆ ಆಹ್ವಾನಿಸಿದರೆ ಆರೋಗ್ಯ ಕ್ಷೇತ್ರ ಗಂಭೀರ ಪರಿಣಾಮವನ್ನು ಎದುರು ನೋಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.