ಮಡಿಕೇರಿ, ಜೂ. 6: ನೈಋತ್ಯ ಮುಂಗಾರು ಈಗಾಗಲೇ ರಾಜ್ಯದ ದಕ್ಷಿಣ ಭಾಗಗಳಿಗೆ ಪ್ರವೇಶಿಸಿದ್ದು, ಇದರ ಪರಿಣಾಮ ರಾಜ್ಯದ ಚಾಮರಾಜನಗರ, ಕಾರವಾರಗಳಲ್ಲಿ ಮಳೆ ಸುರಿದಿದೆ. ತಾ.12ರ ಒಳಗೆ ಪೂರ್ತಿ ರಾಜ್ಯವನ್ನು ಆವರಿಸಲಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ. ಈ ಕೇಂದ್ರದ ಪ್ರಮುಖರ ಪ್ರಕಾರ ತಾ.4 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದೆ. ‘ಬೇ ಆಫ್ ಬೆಂಗಾಲ್’ ಬಳಿ ವಾಯುಭಾರ ಕುಸಿತವಾಗಿದ್ದು ತಾ.10 ರೊಳಗೆ ಕುಸಿತ ಇನ್ನಷ್ಟು ತೀವ್ರಗೊಳ್ಳಲಿದೆ. ಇದರ ಪರಿಣಾಮ ರಾಜ್ಯಾದ್ಯಂತ ಮಳೆ ಸಂಭವಿಸಲಿದ್ದು, ತಾ.12 ರಂದು ಇಡೀ ರಾಜ್ಯವನ್ನು ಮುಂಗಾರು ಆವರಿಸಲಿದೆ ಎಂದು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಹವಾಮಾನ ಇಲಾಖೆಯ ಪ್ರಕಾರ ರಾಜ್ಯದ ಜಿಲ್ಲೆಗಳಾದ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ಎಲ್ಲ ಕರಾವಳಿ ಪ್ರದೇಶಗಳಲ್ಲಿ ಮುಂಗಾರಿನ ತೀವ್ರತೆ ಹೆಚ್ಚಿರಲಿದ್ದು, ಈ ಜಾಗಗಳಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯಲಿದೆ.