ಮಡಿಕೇರಿ, ಜೂ. 6: ಮಡಿಕೇರಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮುಂದಿನ 20 ತಿಂಗಳ ಕಡೆಯ ಅವಧಿಗೆ ಅಧ್ಯಕ್ಷರಾಗಿ ಬೆಪ್ಪುರನ ಮೇದಪ್ಪ ಹಾಗೂ ಉಪಾಧ್ಯಕ್ಷರಾಗಿ ವಾಂಚಿರ ಜಯನಂಜಪ್ಪ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇಂದು ಹಗಲು 11 ಗಂಟೆಗೆ ಮಡಿಕೇರಿ ತಹಶೀಲ್ದಾರ್ ಪಿ.ಎಸ್. ಮಹೇಶ್ ಅವರು ಚುನಾವಣಾಧಿಕಾರಿಯಾಗಿ ಪ್ರಕ್ರಿಯೆ ನಿರ್ವಹಿಸಿದರು.ಉಭಯ ಸ್ಥಾನಗಳಿಗೆ ಅವರಿಬ್ಬರು ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದ ರಿಂದ ನಿಗದಿತ 12 ಗಂಟೆಯ ಬಳಿಕ ಚುನಾವಣಾಧಿಕಾರಿಗಳು ಉಭಯ ಸ್ಥಾನಗಳಿಗೆ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಈ ವೇಳೆ ನಿರ್ಗಮಿತ ಅಧ್ಯಕ್ಷ ಅಂಬಿ ಕಾರ್ಯಪ್ಪ ಹಾಗೂ ಉಪಾಧ್ಯಕ್ಷ ಅನಂತೇಶ್ವರ ಸೇರಿದಂತೆ ಎಪಿಎಂಸಿ ಸದಸ್ಯರು, ಇತರರು ಹಾಜರಿದ್ದು ನೂತನ ಸಾಲಿನ ಪದಾಧಿಕಾರಿಗಳಿಗೆ ಶುಭ ಕೋರಿದರು.ಮಾಜಿ ಅಧ್ಯಕ್ಷ ಕಾಂಗೀರ ಸತೀಶ್, ಸದಸ್ಯರುಗಳಾದ ಮುಂಡಂಡ ಕುಟ್ಟಪ್ಪ, ಸಿ.ಈ. ಗಿರೀಶ್ ಪೂಣಚ್ಚ, ಹೇಮಲತಾ ಜಗದೀಶ್, ನಿರ್ಮಲ ನಂಜಪ್ಪ, ಎ.ಬಿ. ತಮ್ಮಯ್ಯ, ಕೆ.ಕೆ. ದೇವಪ್ಪ, ಅನಿಲ್ ಕುಮಾರ್, ಕಾವೇರಪ್ಪ ಸೇರಿದಂತೆ ಬಿಜೆಪಿ ಪ್ರಮುಖರು, ಚುನಾಯಿತ ಪ್ರತಿನಿಧಿಗಳು ಹಾಜರಿದ್ದು, ಶುಭ ಹಾರೈಸಿದರು. ಎಪಿಎಂಸಿ ಕಾರ್ಯದರ್ಶಿ ಸಂಜಯ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಈ ವೇಳೆ ಅನಿಸಿಕೆ ಹಂಚಿಕೊಂಡ ಮೇದಪ್ಪ ಹಾಗೂ ನಂಜಪ್ಪ ಅವರುಗಳು ಮಡಿಕೇರಿ ಎಪಿಎಂಸಿ ವ್ಯವಸ್ಥೆಯಲ್ಲಿ ಆಡಳಿತಾತ್ಮಕ ಸುಧಾರಣೆ ಯೊಂದಿಗೆ ರೈತರಿಗೆ ಪೂರಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಶ್ರಮಿಸುವುದಾಗಿ ಭರವಸೆಯ ನುಡಿಯಾಡಿದರು. ಅಧ್ಯಕ್ಷ ಮೇದಪ್ಪ ಅವರ ಕುಟುಂಬಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.