ಪೊನ್ನಂಪೇಟೆ, ಜೂ. 4: ‘‘ಕುಂದತ್ ಬೊಪ್ಪಲ್ ನೇಂದ ಕುದುರೆ... ಪಾರಣ ಮಾನಿಲ್ ಅಳ್‍ಂಜ ಕುದುರೆ’’ ನಾಣ್ಣುಡಿಯಂತೆ ಕೊಡಗಿನಲ್ಲಿ ಬೇಡುಹಬ್ಬ (ಬೋಡ್‍ನಮ್ಮೆ) ನಡೆಯುತ್ತಿದೆ. ಜೂನ್ 1ರಂದು ಪಾರಣ ಹಬ್ಬದೊಂದಿಗೆ ಇದು ಕೊನೆಯಾಗುವುದು ಆಯಾ ವರ್ಷದ ವಿಶೇಷ... ಆದರೆ ಈ ಬಾರಿ ಕೊಡಗಿನ ಕೊನೆಯ ಬೇಡುಹಬ್ಬವಾದ ಪಾರಣ ನಮ್ಮೆ ಕೊರೊನಾ ಕಾರಣದಿಂದಾಗಿ ಆಚರಿಸಲ್ಪಡದೆ ಸರಿದು ಹೋಗಿದೆ.

ದಕ್ಷಿಣ ಕೊಡಗಿನ ಕೊನೆಯ ಬೇಡು ಹಬ್ಬವಾಗಿ ಪ್ರತಿ ವರ್ಷ ಜೂನ್ 1ರಂದು ಜರುಗುವ ಇತಿಹಾಸ ಪ್ರಸಿದ್ಧ ‘ಪಾರಣ ಮಾನಿ’ ಹಬ್ಬ ಈ ಬಾರಿ ಕೋವಿಡ್-19ರ ಭೀತಿಯಿಂದಾಗಿ ನಡೆಯಲಿಲ್ಲ. ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಯುವ ಪಾರಣ ಮಾನಿ ಬೇಡು ಹಬ್ಬವನ್ನು ನಡೆಸದಿರಲು ಗ್ರಾಮಸ್ಥರೇ ತೀರ್ಮಾನ ಕೈಗೊಂಡಿದ್ದರು. ಇದರಿಂದಾಗಿ ಪಾರಣ ಹಬ್ಬ ನಡೆಯದೆ ಈ ವರ್ಷ ಸರಿದು ಹೋದಂತಾಗಿದೆ.

ಪಾರಣ ಮಾನಿ ಹಬ್ಬವನ್ನು ಆಚರಿಸದೆ ಬೇರಳಿನಾಡಿನ ಜನತೆ ಸಹಕಾರ ನೀಡುವುದು ಅನಿವಾರ್ಯವಾಯಿತು. ಜನರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿದ ಈ ಮಹಾಮಾರಿ ಸೋಂಕಿನ ನಿರ್ಮೂಲನೆಗಾಗಿ ಕೈಜೋಡಿಸುವುದೇ ಇದರ ಉದ್ದೇಶವಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿರುವ ಗ್ರಾಮಸ್ಥರು, ಮುಂದಿನ ವರ್ಷ ಕೊರೊನಾ ಮುಕ್ತ ವಾತಾವರಣದಲ್ಲಿ ಐತಿಹಾಸಿಕ ಪಾರಣ ಹಬ್ಬವನ್ನು ಆಚರಿಸಲು ಅವಕಾಶವಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಪ್ರತಿವರ್ಷ ಈ ಐತಿಹಾಸಿಕ ಪಾರಣ ಹಬ್ಬವು ಮೇ 31 ಮತ್ತು ಜೂನ್ 1ರಂದು ಬೇರಳಿ ನಾಡಿನಾದ್ಯಂತ ಅದ್ಧೂರಿಯಾಗಿ ಸಾವಿರಾರು ಮಂದಿಯ ಪಾಲ್ಗೊಳ್ಳುವಿಕೆ ಯೊಂದಿಗೆ ನಡೆಯುತ್ತದೆ. ಬೇರಳಿನಾಡಿನ ಜನತೆ ದೇಶದ ಯಾವುದೇ ಮೂಲೆಯಲ್ಲಿ ನೆಲೆಸಿದ್ದರೂ ಈ ದಿನದಂದು ತಮ್ಮ ಊರಿಗೆ ಮರಳಿ ಈ ಪಾರಣ ಹಬ್ಬದ ಸಂಭ್ರಮದಲ್ಲಿ ಉತ್ಸಾಹದಿಂದ ಭಾಗವಹಿಸುವುದು ಹಿಂದಿನಿಂದಲೂ ನಡೆದುಬಂದ ಸಂಪ್ರದಾಯ. ದಕ್ಷಿಣ ಕೊಡಗಿನಲ್ಲಿ ನಡೆಯುವ ಕೊನೆಯ ಬೇಡು ಹಬ್ಬವಾದ ಪಾರಣ ಮಾನಿ ಹಬ್ಬಕ್ಕೆ ತನ್ನದೇ ಆದ ಪೌರಾಣಿಕ ಹಿನ್ನೆಲೆಯಿದೆ. ಈ ಕಾರಣದಿಂದ ಬೇರಳಿನಾಡಿನ ಜನತೆ ವಯಸ್ಸಿನ ಮಿತಿಯಿಲ್ಲದೆ ಈ ಉತ್ಸವದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಆದರೆ ಈ ವರ್ಷ ಪಾರಣದ ಸಂಭ್ರಮ ಇಲ್ಲದಿರುವುದು ಈ ಭಾಗದ ಜನತೆಗೆ ತೀವ್ರ ನಿರಾಸೆ ತಂದಿದೆ. ಜೂನ್ 1 ರಂದು ಬೇರಳಿನಾಡಿನ ಯಾವುದೇ ಪ್ರದೇಶದಲ್ಲಿ ನೋಡಿದರೂ ಪಾರಣ ನಮ್ಮೆಯ (ಹಬ್ಬದ) ವೇಷಧಾರಿಗಳ ಸಾಂಪ್ರದಾಯಿಕ ನೃತ್ಯ ಸಾಮಾನ್ಯವಾಗಿರುತಿತ್ತು. ಪಾರಂಪಾರಿಕ ಹಾಡುಗಳನ್ನು ಹಾಡುತ್ತಾ ಗ್ರಾಮದ ಪುರಾತನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಅದನ್ನು ಜೀವಂತವಾಗಿರಿಸುವ ಪ್ರಯತ್ನದಲ್ಲಿ ಬೇರಳಿನಾಡಿನ ಜನತೆ ಮಗ್ನರಾಗಿರುತ್ತಾರೆ. ವೈಶಿಷ್ಟ್ಯಪೂರ್ಣ ಜನಪದೀಯ ಸೊಗಡಿನ ಪಾರಣ ಹಬ್ಬದ ಕಲರವದಿಂದಾಗಿ ಬೇಡು ಹಬ್ಬಕ್ಕೆ ವಿಶೇಷ ಕಳೆ ಬರುತ್ತಿತ್ತು.

ಪಾರಣ ಹಬ್ಬ ಎಂದಿನಂತೆ ನಡೆದಿದ್ದರೆ ಇಂದು ಸಂಜೆ ಅದಕ್ಕೆ ವರ್ಣರಂಜಿತವಾದ ತೆರೆ ಬೀಳಬೇಕಿತ್ತು. ಇತಿಹಾಸ ಪ್ರಸಿದ್ಧ ಪಾರಣ ಮಾನಿ ಬೇಡು ಹಬ್ಬದಲ್ಲಿ ಎರಡು ದಿನಗಳ ಕಾಲ ಸಂಭ್ರಮಿಸುವ ಗ್ರಾಮಸ್ಥರು ಕೊನೆಯ ದಿನದ ಸಂಜೆ ದಕ್ಷಿಣ ಕೊಡಗಿನ ಕೊನೆಯ ಬೇಡು ಹಬ್ಬವನ್ನು ವಿಶಿಷ್ಟವಾಗಿ ಬೀಳ್ಕೊಡುತ್ತಾರೆ. ‘ಕುಂದತ್ ಬೊಟ್ಟಲ್ ನೇಂದ ಕುದುರೆ, ಪಾರಾಣ ಮಾನಿಲ್ ಅಳಂಜ ಕುದುರೆ’ ಎಂಬುವುದು ಕೊಡವರ ಪ್ರಸಿದ್ಧ ನಾಣ್ಣುಡಿ. ತುಲಾ ಸಂಕ್ರಮಣ ಬಳಿಕ ಪಾರಣ ಕುಂದ ಬೆಟ್ಟದಲ್ಲಿ ಆರಂಭಗೊಂಡ ಬೇಡು ಹಬ್ಬ ಪಾರಣ ಮಾನಿಯಲ್ಲಿ ಮುಕ್ತಾಯ ಗೊಂಡಂತಾಗುತ್ತಿತ್ತು.

ಪಾರಣ ಬೇಡು ಹಬ್ಬದಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾದ ಕುದುರೆಯಾಕೃತಿಯನ್ನು ಕಡಿಯುವ ಮೂಲಕ ಬೇಡು ಹಬ್ಬಕ್ಕೆ ಮಂಗಳ ಹಾಡಲಾಗುತ್ತಿತ್ತು. ಈ ಪ್ರಸಿದ್ಧ ಹಬ್ಬ ಮುಗಿದ ನಂತರ ಈ ಭಾಗದ ಜನರು ತಮ್ಮ ಕೃಷಿ ಚಟುವಟಿಕೆಗಳನ್ನು ಆರಂಭಿಸುವುದು ವಾಡಿಕೆ.

ಬಿಟ್ಟಂಗಾಲ ಗ್ರಾಮ ಪಂಚಾಯಿತಿಗೆ ಒಳಪಟ್ಟ 9 ಕೇರಿಗಳನ್ನು ಒಳಗೊಂಡಿರುವ ಬೇರಳಿನಾಡಿನಲ್ಲಿ ಪ್ರತಿವರ್ಷ ಮೇ 31 ಮತ್ತು ಜೂನ್ 1ರಂದು ಈ ಸಾಂಪ್ರದಾಯಿಕ ಹಬ್ಬ ಅದ್ಧೂರಿಯಾಗಿ ಜರುಗುತ್ತದೆ. ಈ 9 ಕೇರಿಗಳಲ್ಲಿ ಪಾರಣ ಹಬ್ಬದ ಪ್ರತೀಕವಾಗಿ ವಿವಿಧ ವೇಷಧಾರಿಗಳು ಅಲ್ಲೇ ಗುಂಪಾಗಿ ಮನೆಮನೆಗೆ ಸಂಚರಿಸುತ್ತಿದ್ದರು. ಕೆಲವು ಗುಂಪುಗಳಲ್ಲಿ ಮಹಿಳೆಯರಂತೆ ವೇಷಧರಿಸಿದ ವೇಷದಾರಿಗಳು ವಿಶೇಷವಾಗಿ ಗಮನ ಸೆಳೆಯುತ್ತಿದ್ದರು. ಕೆಲ ಜಾಗಗಳಲ್ಲಿ ಕೆಲವೇ ಕೆಲವು ಗ್ರಾಮಸ್ಥರು ಸೇರಿಕೊಂಡು ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ಮಾತ್ರ ಪೂರೈಸಿ ಮನೆಗೆ ಮರಳಿದರು.

ಹಿರಿಯರು, ತಮ್ಮ ಜೀವಿತಾವಧಿಯ ಅನುಭವದಲ್ಲಾಗಲಿ, ನಮ್ಮ ಪೂರ್ವಜರ ಅನುಭವದಲ್ಲಾಗಲಿ ಪಾರಣ ಬೇಡು ಹಬ್ಬ ಸ್ಥಗಿತ ಗೊಂಡಿರುವ ಬಗ್ಗೆ ನಮಗೆ ಯಾವುದೇ ಉಲ್ಲೇಖದ ನೆನಪಿಲ್ಲ. ಇದೇ ಮೊದಲ ಬಾರಿಗೆ ನೂರಾರು ವರ್ಷದ ಇತಿಹಾಸವಿರುವ ಬೇಡು ಹಬ್ಬ ನಡೆಯದಿರುವುದು ಮುಂದಿನ ಪೀಳಿಗೆ ನೆನಪಿಟ್ಟುಕೊಳ್ಳುವಂತೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

-ರಫೀಕ್ ತೂಚಮಕೇರಿ