ಸಿದ್ದಾಪುರ, ಜೂ. 4 : ಕೊರೊನಾ ಲಾಕ್‍ಡೌನ್ ನಡುವೆ ವಿದ್ಯಾರ್ಥಿ ಸಮೂಹ ತಮ್ಮ ಮುಂದಿನ ಶೈಕ್ಷಣಿಕ ಬದುಕಿನ ಬಗ್ಗೆ ಚಿಂತಿತರಾಗಿರುವ ನಡುವೆಯೇ ಸಿದ್ದಾಪುರದ ಶ್ರೀಕೃಷ್ಣ ವಿದ್ಯಾ ಮಂದಿರದ ಸ್ಥಾಪಕರು ಹಾಗೂ ಶಿಕ್ಷಕ ವೃಂದ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಮನೆಮನೆ ಪಾಠವನ್ನು ಆರಂಭಿಸಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿರುವ ಶ್ರೀ ಕೃಷ್ಣ ವಿದ್ಯಾಮಂದಿರದ ಸ್ಥಾಪಕ ರಶೀದ ರಾಜೀವ ಹಾಗೂ ಶಿಕ್ಷಕರುಗಳು ತಮ್ಮ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶೇ. 100 ರಷ್ಟು ಸಾಧನೆ ಮಾಡಬೇಕೆನ್ನುವ ಉದ್ದೇಶದೊಂದಿಗೆ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಠ್ಯಗಳನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ.

ಶಾಲೆಯಲ್ಲಿ ಒಟ್ಟು 38 ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದೆ. ಶ್ರೀಕೃಷ್ಣ ವಿದ್ಯಾಮಂದಿರುವು ರಶೀದ ಅವರ ಕನಸಿನ ಶಿಕ್ಷಣ ಮಂದಿರವಾಗಿದ್ದು, ಸಣ್ಣ ಮನೆಯಲ್ಲಿ ಒಂದನೇ ತರಗತಿ ಆರಂಭಿಸಿದ ಅವರು ಇಂದು ಸುಸಜ್ಜಿತ ಕಟ್ಟಡದ ಮೂಲಕ ಹತ್ತನೇ ತರಗತಿವರೆಗೆ ಶಿಕ್ಷಣ ಸಂಸ್ಥೆಯನ್ನು ಬೆಳೆಸಿದ್ದಾರೆ. ಪಠ್ಯ ಚಟುವಟಿಕೆ ಮಾತ್ರವಲ್ಲದೇ ಕಲೆ, ಸಾಹಿತ್ಯ, ಸಂಸ್ಕøತಿ, ಕ್ರೀಡೆಗೂ ಉತ್ತೇಜನವನ್ನು ಇಲ್ಲಿ ನೀಡಲಾಗುತ್ತಿದೆ.

-ಅಂಚೆಮನೆ ಸುಧಿ