ಗೋಣಿಕೊಪ್ಪ, ಜೂ. 3: ಆಹಾರ ಪದಾರ್ಥ ಮಾರಾಟ ಮಳಿಗೆಗಳಲ್ಲಿ ಕೀಟ ನಾಶಕ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಪೊನ್ನಂಪೇಟೆ ಕೃಷಿ ಅಧಿಕಾರಿ ರೀನಾ ಎಚ್ಚರಿಕೆ ನೀಡಿದ್ದಾರೆ.

ಹೇಳಿಕೆಯಲ್ಲಿ ತಿಳಿಸಿರುವ ಅವರು, ಪರವಾನಿಗೆ ಪತ್ರವಿಲ್ಲದೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಪೊನ್ನಂಪೇಟೆ, ಗೋಣಿಕೊಪ್ಪ ಸೇರಿದಂತೆ ಸಾಕಷ್ಟು ಪಟ್ಟಣಗಳಲ್ಲಿ ಈ ರೀತಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.

ಆಹಾರದೊಂದಿಗೆ ವಿಷ ವಸ್ತು ಕೂಡ ಆರೋಗ್ಯ ಸೇರುವುದರಿಂದ ಆಗುವ ದುಷ್ಪರಿಣಾಮದ ಬಗ್ಗೆ ಗಂಭೀರತೆ ಇರಬೇಕು. ಕೀಟ ನಾಶಕ ಕಾಯ್ದೆ 1968 ರ ಸೆಕ್ಷನ್ 29 (2) ನಿಯಮದಂತೆ ಮಾರಾಟ ಮಾಡುವವರಿಗೆ 3 ವರ್ಷ ಶಿಕ್ಷೆ ಮತ್ತು 50 ಸಾವಿರ ದಂಡ ಕೂಡ ಕಟ್ಟಬೇಕಾಗುತ್ತದೆ. ಇಂತಹ ಚಟುವಟಿಕೆಯಲ್ಲಿ ತೊಡಗಿಕೊಂಡವರ ಬಗ್ಗೆ ತಿಳಿದವರು ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.