ಮಡಿಕೇರಿ, ಜೂ. 3: ಪ್ರಾಕೃತಿಕ ವಿಕೋಪದಿಂದ 2018ರಲ್ಲಿ ಮನೆಗಳನ್ನು ಕಳೆದುಕೊಂಡಿರುವ 463 ಮಂದಿ ಫಲಾನುಭವಿಗಳಿಗೆ ತಾ. 4 ರಂದು (ಇಂದು) ಜಿಲ್ಲಾಡಳಿತದಿಂದ ಕರ್ನಾಟಕ ಸರಕಾರದ ನಿರ್ದೇಶನ ದಂತೆ ಪುನರ್ವಸತಿ ಹಂಚಿಕೆ ಮಾಡಲಾಗುತ್ತದೆ. ಮಾದಾಪುರ ಸಮೀಪದ ಜಂಬೂರು ಗ್ರಾಮದಲ್ಲಿ, ತೋಟಗಾರಿಕೆ ಇಲಾಖೆಯಿಂದ ಪಡೆಯಲಾಗಿರುವ 50 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ 383 ಮನೆಗಳನ್ನು ಹಾಗೂ ಮಡಿಕೇರಿ ಸಮೀಪದ ಮದೆ ಗ್ರಾ.ಪಂ. ವ್ಯಾಪ್ತಿಯ ಗೋಳಿಕಟ್ಟೆಯಲ್ಲಿ ನಿರ್ಮಿಸಿರುವ 80 ಮನೆಗಳನ್ನು ಇದೇ ವೇಳೆ ಫಲಾನುಭವಿಗಳಿಗೆ ವಿತರಿಸಲು ತಯಾರಿ ನಡೆದಿದೆ.ಮುಂದುವರಿದ ಕಾಮಗಾರಿ : ಸಂತ್ರಸ್ತರಿಗಾಗಿ ಮಾದಾಪುರ ಬಳಿ ಜಂಬೂರುವಿನಲ್ಲಿ ಇನ್ಫೋಸಿಸ್ ಸಂಸ್ಥೆಯಿಂದ ಇನ್ನು 200 ಮನೆಗಳ ಕಾಮಗಾರಿ ಮುಂದುವರಿದಿದೆ. ಈಗಾಗಲೇ ಉದಯಗಿರಿ ಬಳಿ ಮಕ್ಕಂದೂರು ಗ್ರಾ.ಪಂ. ಹಾಗೂ ಕೆ.ನಿಡುಗಣೆ ವ್ಯಾಪ್ತಿಯ 35 ಕುಟುಂಬಗಳಿಗೆ ಪುನರ್ವಸತಿ ಅಡಿಯಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಮುಂದುವರಿದು ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯಲ್ಲಿ 125 ಹಾಗೂ ಕೆ. ನಿಡುಗಣೆ ಸರಹದ್ದಿನಲ್ಲಿ 75 ಮತ್ತು ಬಿಳಿಗೇರಿಯಲ್ಲಿ 22 ಮನೆಗಳ ಕೆಲಸ ನಡೆಯುತ್ತಿದೆ.
ಖಾತೆಗೆ ಹಣ ಜಮೆ : ಅಂತೆಯೇ 2019ರಲ್ಲಿ ಜಲಪ್ರವಾಹದಿಂದ ಸಂತ್ರಸ್ತರಾಗಿರುವ 372 ಮಂದಿ ಫಲಾನುಭವಿಗಳನ್ನು ಗುರುತಿಸಿ, ಅವರು ನಿವೇಶನ ಹೊಂದಿರುವ ಕಡೆ ತಾವೇ ಮನೆ ಕಟ್ಟಿಕೊಳ್ಳಲು ರೂ. 5 ಲಕ್ಷದಂತೆ ಕಾಮಗಾರಿ ಅನುಸಾರ, ಅವರವರ ಖಾತೆಗಳಿಗೆ ಹಣ ಬ್ಯಾಂಕ್ ಮುಖಾಂತರ ಸಂದಾಯವಾಗಲಿದೆ. ಈ ಪೈಕಿ 223 ಮಂದಿ ಅಧಿಕೃತ ಫಲಾನುಭವಿಗಳಾಗಿದ್ದು, ಇನ್ನುಳಿದವರು ಕಾವೇರಿ ಹೊಳೆದಂಡೆಯಲ್ಲಿ ನಿಯಮ ಬಾಹಿರ ವಾಸವಿದ್ದ 149 ಕುಟುಂಬಗಳಾಗಿವೆ. ಅಂತಹವರಿಗೆ ಅಭ್ಯತ್ಮಂಗಲ ಹಾಗೂ ಬಿ. ಶೆಟ್ಟಿಗೇರಿಗಳಲ್ಲಿ ಪರ್ಯಾಯ ನಿವೇಶನದೊಂದಿಗೆ ರೂ. 5 ಲಕ್ಷ ನೆರವು ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳಿಂದ ಗೊತ್ತಾಗಿದೆ.
(ಮೊದಲ ಪುಟದಿಂದ) 65 ಮಂದಿಗೆ ಹಣ ಜಮೆ : ಈ ನಡುವೆ 2018ರ ಮಳೆಗಾಲದಲ್ಲಿ ಮನೆ ಕಳೆದುಕೊಂಡು, ಆಸ್ತಿ ಹೊಂದಿರುವ 65 ಫಲಾನುಭವಿಗಳಿಗೆ ತಮ್ಮದೇ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ತಲಾ ರೂ. 9.85 ಲಕ್ಷವನ್ನು ಸಂಬಂಧಿಸಿ ದವರ ಖಾತೆಗೆ ಜಮೆ ಮಾಡಿದ್ದು, ಒಟ್ಟು 2018ನೇ ಸಾಲಿನ 563 ಫಲಾನುಭವಿಗಳಿಗೆ ಪ್ರಯೋಜನ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ವಸತಿ ಉಸ್ತುವಾರಿ ಹೊಂದಿರುವ ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಅವರುಗಳು ಖಚಿತಪಡಿಸಿದ್ದಾರೆ.