ಭಾಗಮಂಡಲ, ಜೂ. 3: ತೋಟದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಅಪ್ಪನಿಗೆ ಟೀ ಕೊಂಡೊಯ್ಯುತ್ತಿದ್ದ ಮಗ ವಿದ್ಯುತ್ ಸ್ಪರ್ಶಗೊಂಡು ದುರ್ಮರಣ ಹೊಂದಿರುವ ಘಟನೆ ಸಂಭವಿಸಿದೆ. ಕಳೆದೆರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗುತ್ತಿರುವ ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಮಳೆಗಾಲ ಎದುರಾಗಿದ್ದು, ಆರಂಭದಲ್ಲಿಯೇ ಗಾಳಿ, ಮಳೆಗೆ ಒಂದು ಜೀವ ಬಲಿಯಾಗಿದೆ. ಹಲವೆಡೆ ಗಾಳಿ - ಮಳೆಗೆ ನಷ್ಟ ಸಂಭವಿಸಿದೆ.ಮೂಲತಃ ಸುಂಟಿಕೊಪ್ಪ ಬಳಿಯ ಹೇರೂರು ಗ್ರಾಮ ನಿವಾಸಿ ಬಸಪ್ಪ ಕುಟುಂಬ ಸಹಿತ ಚೇರಂಬಾಣೆ ಬಳಿಯ ಕೊಳಗದಾಳು ಗ್ರಾಮದ ಬಡ್ಡಿರ ನಂದ ಅವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು, ಇಂದು ಎಂದಿನಂತೆ ಬಸಪ್ಪ ತೋಟ ಕೆಲಸಕ್ಕೆ ತೆರಳಿದ್ದರು. 11 ಗಂಟೆ ಸಮಯದಲ್ಲಿ ಬಸಪ್ಪ ಅವರ ಪುತ್ರ ತಮ್ಮು (10) ಅಪ್ಪನಿಗೆಂದು ಟೀ ಕೊಂಡೊಯ್ಯುತ್ತಿದ್ದ. ಈ ವಿಭಾಗದಲ್ಲಿ ಗಾಳಿ ಮಳೆಗೆ ತೋಟದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ತಮ್ಮು ರಜೆಯಾಗಿದ್ದ ಕಾರಣ ಅಪ್ಪನಿಗೆ ಸಹಾಯ ಮಾಡುತ್ತಿದ್ದ.ಸ್ಥಳಕ್ಕೆ ಭಾಗಮಂಡಲ ಠಾಣಾಧಿಕಾರಿ ಮಹದೇವಯ್ಯ, ಸೆಸ್ಕ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಮೊದಲ ಪುಟದಿಂದ) ನಾಪೆÇೀಕ್ಲು: ಕೊಡಗಿನಲ್ಲಿ ಮುಂಗಾರು ಮಳೆಯ ಪ್ರಭಾವ ಕಾಣಿಸಿಕೊಂಡಿದ್ದು, ತಾ. 2 ರಂದು ಈ ವಿಭಾಗಕ್ಕೆ ಭಾರೀ ಬಿರುಗಾಳಿ ಮಳೆಯಾಗಿದ್ದು, ಇಲ್ಲಿನ ಕೇಕುಮಾನಿ ಭಗವತಿ ದೇವಾಲಯದ ಪಕ್ಕ ಇದ್ದ ಭಾರೀ ಗಾತ್ರದ ಪಣರ್‍ಪುಳಿ ಮರ ಬಿದ್ದು ದೇವಾಲಯದ ಗೇಟ್ ಮತ್ತು ಕಾಂಪೌಂಡ್ ಗೋಡೆ ಜಖಂ ಗೊಂಡಿದೆ.

ಕುಂಜಿಲ ಗ್ರಾಮದ ಇಗ್ಗುತ್ತಪ್ಪ ದೇವಾಲಯದ ಬಳಿಯ ಅಂಗನವಾಡಿ ಕೇಂದ್ರದ ಸಮೀಪ ಮರ ಬಿದ್ದು ಅಡುಗೆಕೋಣೆ ಜಖಂಗೊಂಡಿದೆ. ಯವಕಪಾಡಿ ಬಳಿಯ ಕುಡಿಯರ ಮುತ್ತಪ್ಪ ಎಂಬವರ ನೂತನ ಮನೆಯ ಶೀಟ್‍ಗಳು ಗಾಳಿಯ ರಭಸಕ್ಕೆ ಹಾರಿ ಹೋಗಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಉಪಾಧ್ಯಕ್ಷ ಉಸ್ಮಾನ್, ಈ ವಿಭಾಗದ ಗ್ರಾಮ ಲೆಕ್ಕಿಗ ಜನಾರ್ಧನ್, ಸಿಬ್ಬಂದಿ ಲಾಲು ಭೇಟಿ ನೀಡಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವೀರಾಜಪೇಟೆ ವಿಭಾಗಕ್ಕೆ ಮಳೆ

ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗಿನಿಂದ ಇಂದು ಬೆಳಗಿನ ತನಕ 1.12 ಇಂಚುಗಳಷ್ಟು ಮಳೆ ಸುರಿದಿದೆ. ನಿನ್ನೆ ದಿನ ಬೆಳಗಿನಿಂದಲೇ ವೀರಾಜ ಪೇಟೆ ವಿಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ರಾತ್ರಿಯೂ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ.

ಜಿಲ್ಲೆಯ ಮಳೆ ವಿವರ

ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ಮಳೆ 0.79 ಇಂಚು, ಕಳೆದ ವರ್ಷ ಇದೇ ದಿನ 0.15 ಇಂಚು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1.12 ಇಂಚು, ಕಳೆದ ವರ್ಷ ಇದೇ ಅವಧಿಯಲ್ಲಿ 0.66 ಇಂಚು ಮಳೆಯಾಗಿತ್ತು.