ಸೋಮವಾರಪೇಟೆ,ಜೂ.3: ಕಾಡಾನೆಗಳ ಹಿಂಡು ಕೃಷಿ ಫಸಲು ಹಾನಿ ಮಾಡಿರುವ ಘಟನೆ ಸಮೀಪದ ಬಾಣಾವರದ ಕಲ್ಲುಕೋರೆಯಲ್ಲಿ ಇಂದು ನಡೆದಿದೆ.
ಬಾಣಾವರ ಕಲ್ಲುಕೋರೆ ನಿವಾಸಿ ಕಂದಸ್ವಾಮಿ ಅವರು ಎರಡು ಎಕರೆ ಜಾಗದಲ್ಲಿ ಬೆಳೆದಿದ್ದ ಸಿಹಿ ಗೆಣಸಿಗೆ ಮೂರನೆ ಬಾರಿ ಕಾಡಾನೆಗಳು ಧಾಳಿ ಮಾಡಿ, ಉಳಿದ ಫಸಲನ್ನು ತಿಂದು ಖಾಲಿ ಮಾಡಿವೆ.
ಇಂದು ಬೆಳಗ್ಗಿನ ಜಾವ 6 ಕಾಡಾನೆಗಳು ಧಾಳಿ ಮಾಡಿದ್ದು, ಗೆಣಸಿನ ಜತೆಯಲ್ಲೇ ಜಾಗದಲ್ಲಿದ್ದ ಪೈಪ್‍ಗಳನ್ನು ತುಳಿದು ಹಾನಿಗೊಳಿಸಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ, ಭೂಮಿ ಒಳಗಿನ ಫಸಲಿಗೆ ಪರಿಹಾರ ಕೊಡಲು ಅವಕಾಶವಿಲ್ಲ ಎಂದು ಹೇಳುತ್ತಾರೆ ಎಂದು ಕಂದಸ್ವಾಮಿ ನೋವು ತೋಡಿಕೊಂಡಿದ್ದಾರೆ.