ಮಡಿಕೇರಿ, ಜೂ. 3: ಲಾಕ್ಡೌನ್ ನಿಂದಾಗಿ ಸಂಚಾರ ಸ್ಥಗಿತಗೊಳಿಸಿದ್ದ ಖಾಸಗಿ ಬಸ್ಗಳಲ್ಲಿ ಕೆಲವು ಇಂದಿನಿಂದ ಜಿಲ್ಲೆಯ ಕೆಲವೆಡೆ ಸಂಚಾರ ಆರಂಭಿಸಿದವು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಇನ್ನಿತರೆಡೆ ಒಂದೆರಡು ಖಾಸಗಿ ಬಸ್ಗಳು ಸಂಚರಿಸಲು ಮುಂದಾದರೂ ಪ್ರಯಾಣಿಕರ ಸಂಖ್ಯೆ ಮಾತ್ರ ವಿರಳವಾಗಿತ್ತು.ಸಿದ್ದಾಪುರದಲ್ಲಿ ಒಂದೆರಡು ಖಾಸಗಿ ಬಸ್ಗಳು ವೀರಾಜಪೇಟೆ ಭಾಗಕ್ಕೆ ಸಂಚರಿಸಿದವು. ಸೋಮವಾರ ಪೇಟೆ ವ್ಯಾಪ್ತಿಯಲ್ಲಿ ಖಾಸಗಿ ಬಸ್ಗಳ ಸಂಚಾರವಿರಲಿಲ್ಲ. ವೀರಾಜಪೇಟೆ ಯಲ್ಲೂ ಒಂದೆರಡು ಖಾಸಗಿ ಬಸ್ಗಳು ಓಡಾಟ ಆರಂಭಿಸಿವೆ. ಕುಶಾಲನಗರ ಭಾಗದಲ್ಲಿ ಖಾಸಗಿ ಬಸ್ಗಳು ರಸ್ತೆಗಿಳಿದಿಲ್ಲ. ನಾಪೋಕ್ಲು ವ್ಯಾಪ್ತಿಯಲ್ಲಿ ಒಂದು ಖಾಸಗಿ ಬಸ್ ಮಾತ್ರ ಸಂಚರಿಸುತ್ತಿದೆ. ಶನಿವಾರಸಂತೆಯಲ್ಲೂ ಖಾಸಗಿ ಬಸ್ ಸಂಚಾರ ಆರಂಭವಾಗಿಲ್ಲ.
ಗೋಣಿಕೊಪ್ಪಲು: ನಗರದಲ್ಲಿ ಜೂ. 1 ರಿಂದ ಕೆಲವು ಖಾಸಗಿ ಬಸ್ಗಳು ಸಂಚಾರ ಆರಂಭಿಸಿವೆ. ಸರ್ಕಾರದ ನಿಯಮದಂತೆ ನಿಗದಿತ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಮಾತ್ರ ಬಸ್ನಲ್ಲಿ ಕರೆದೊಯ್ಯುವ ನಿರ್ಬಂಧ ಇರುವುದರಿಂದ ಬಸ್ನಲ್ಲಿ ಮೂರು ಮಂದಿ ಕೂರುವ ಸೀಟಿನಲ್ಲಿ ಇಬ್ಬರು ಪ್ರಯಾಣಿಕರು ಹಾಗೂ ಎರಡು ಮಂದಿ ಕೂರುವ ಸೀಟಿನಲ್ಲಿ ಓರ್ವ ಪ್ರಯಾಣಿಕರು ಕುಳಿತುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರಿಗೆ ಸ್ಯಾನಿಟೈಸರ್ ಬಳಸಲು ಅವಕಾಶ ಕಲ್ಪಿಸಿರುವ ಬಸ್ ಮಾಲೀಕರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಪ್ರಯಾಣಿಕರಿಗೆ ಮಾತ್ರ ಪ್ರಯಾಣದ ಅವಕಾಶ ನೀಡುತ್ತಿದ್ದಾರೆ.
ನಗರದಲ್ಲಿ ಮುಂಜಾನೆ 7.30 ಗಂಟೆಗೆ ಬಾಳೆಲೆಗೆ ತೆರಳುವ ಜಗದೀಶ್ವರ ಬಸ್ ನಂತರ ವಾಪಸ್ಸಾಗಿ ವೀರಾಜಪೇಟೆಯತ್ತ ತೆರಳುತ್ತಿದೆ. ಗೋಣಿಕೊಪ್ಪದಿಂದ
(ಮೊದಲ ಪುಟದಿಂದ) ತ್ರೀನೇತ್ರ ಬಸ್ ಗೋಣಿಕೊಪ್ಪ, ವೀರಾಜಪೇಟೆ, ಮೂರ್ನಾಡು ಮಾರ್ಗದತ್ತ ತೆರಳುತ್ತಿದೆ. ಮುಂಜಾನೆ 7 ಗಂಟೆಗೆ ತಿತಿಮತಿಯಿಂದ ಅಶೋಕ ಬಸ್ ಗೋಣಿಕೊಪ್ಪ ಮಾರ್ಗವಾಗಿ ಮಡಿಕೇರಿಯತ್ತ ತೆರಳುತ್ತಿದೆ. ಪೊನ್ನಂಪೇಟೆ, ಗೋಣಿಕೊಪ್ಪ ಮಾರ್ಗದಲ್ಲಿ ಮಿನಿ ಬಸ್ ವೆಂಕಟೇಶ್ವರ ಗಂಟೆಗೊಮ್ಮೆ ಚಲಿಸುತ್ತಿದೆ. ಆದರೆ ಬಸ್ನಲ್ಲಿ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿದ್ದು ಖಾಸಗಿ ಬಸ್ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಕೆಲವು ಮಾರ್ಗಗಳಲ್ಲಿ ಇನ್ನೂ ಕೂಡ ಖಾಸಗಿ ಬಸ್ಗಳು ರಸ್ತೆಗಿಳಿಯಲು ಮನಸ್ಸು ಮಾಡಿಲ್ಲ.
ಇದನ್ನೆ ನಂಬಿದ್ದ ಕಂಡಕ್ಟರ್, ಕ್ಲೀನರ್ ಹಾಗೂ ಚಾಲಕರು ಬಸ್ ಸಂಚಾರವಿಲ್ಲದೆ ಕಷ್ಟದಲ್ಲಿ ದಿನ ದೂಡುತ್ತಿದ್ದಾರೆ. ಕೆಲವು ಮಂದಿ ಅನ್ಯ ಮಾರ್ಗವಿಲ್ಲದೆ ಸಂಸಾರ ಸಾಗಿಸಲು ಕೂಲಿ ಕೆಲಸದತ್ತ ಮುಖ ಮಾಡಿದ್ದಾರೆ. ಇಂದು ನಾಳೆ ಬಸ್ ರಸ್ತೆಗಿಳಿಯಬಹುದೆಂಬ ನಂಬಿಕೆಯಲ್ಲಿದ್ದವರು ಬಸ್ ಮಾಲೀಕರ ಸಂಘವು ಇನ್ನಷ್ಟು ದಿನ ಬಸ್ ಸಂಚಾರ ಇಲ್ಲ ಎಂಬ ಹೇಳಿಕೆ ನೀಡಿರುವುದರಿಂದ ಮತ್ತಷ್ಟು ಗೊಂದಲಕ್ಕೆ ಸಿಲುಕಿದ್ದಾರೆ. ಪ್ರತಿ ನಿಲ್ದಾಣದಲ್ಲಿ ತಮ್ಮ ತಮ್ಮ ಬಸ್ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಸ್ನ ಏಜೆಂಟರು ಇದರಿಂದ ಹೊರತಾಗಿಲ್ಲ. ಇವರಿಗೆ ಇಲ್ಲಿಯ ತನಕ ಸರ್ಕಾರದ ಯಾವುದೇ ಯೋಜನೆಗಳು ಕೈ ಸೇರಿಲ್ಲ. ಸದಾ ಗಿಜಿಗುಡುತ್ತಿದ್ದ ಗೋಣಿಕೊಪ್ಪ ಬಸ್ ನಿಲ್ದಾಣ ಬಸ್ಗಳಿಲ್ಲದೆ ಖಾಸಗಿ ವಾಹನಗಳು ನಿಲ್ಲುವ ಪರಿಸ್ಥಿತಿಗೆ ಬಂದಿದೆ.