ಕುಶಾಲನಗರ, ಜೂ. 2: ಕಳೆದ ಎರಡೂವರೆ ತಿಂಗಳ ಕಾಲ ಕೊಡಗು-ಮೈಸೂರು ಗಡಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೈಸೂರು ಜಿಲ್ಲೆಯ ಕೋವಿಡ್-19 ತಪಾಸಣಾ ಕೇಂದ್ರ ಮಂಗಳವಾರ ತೆರವುಗೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಿಂದ ಮೈಸೂರು ಕಡೆಗೆ ತೆರಳುವ ವಾಹನಗಳು ಮತ್ತು ಪ್ರಯಾಣಿಕರ ಆರೋಗ್ಯ ಪರೀಕ್ಷೆ, ಮಾಹಿತಿ ಸಂಗ್ರಹ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಪೊಲೀಸ್, ಕಂದಾಯ, ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳನ್ನು ಈ ಕೇಂದ್ರದಲ್ಲಿ ನಿಯೋಜಿಸಿದ್ದರು. ದಿನದ 24 ಗಂಟೆ ಕಾಲ ವಾಹನಗಳ ತಪಾಸಣೆ ನಡೆಸಲಾಗುತ್ತಿತ್ತು.
ಕೊಡಗು ಜಿಲ್ಲೆಯ ಗಡಿಭಾಗ ಕುಶಾಲನಗರ ವ್ಯಾಪ್ತಿಯಲ್ಲಿ ಕೂಡ ಕೋವಿಡ್-19 ಆರೋಗ್ಯ ತಪಾಸಣಾ ಕೇಂದ್ರ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವುದರೊಂದಿಗೆ ಇದುವರೆಗೆ ಯಾವುದೇ ಕೊರೋನ ಸೋಂಕಿತ ವ್ಯಕ್ತಿಗಳು ಜಿಲ್ಲೆಯ ಒಳನುಸುಳದಂತೆ ಮಾಡುವಲ್ಲಿ ಸಂಪೂರ್ಣ ಯಶಶ್ವಿಯಾಗಿದ್ದರು. ಪ್ರಸಕ್ತ ಕುಶಾಲನಗರ ಗಡಿಭಾಗದ ಕೋವಿಡ್-19 ಆರೋಗ್ಯ ತಪಾಸಣಾ ಕೇಂದ್ರ ತೆರವುಗೊಂಡಿದ್ದರೂ ಗಡಿಭಾಗದ ಗೇಟ್‍ನಲ್ಲಿ ಪೊಲೀಸ್ ಮತ್ತು ಕಂದಾಯ ಅಧಿಕಾರಿ, ಸಿಬ್ಬಂದಿಗಳು 24 ಗಂಟೆ ಕಾಲ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ.