ಮಡಿಕೇರಿ, ಜೂ. 2: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾ.ಪಂ. ನೌಕರರ ಸಂಘದ ವತಿಯಿಂದ ಇಂದು ಜಿ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಯಿತು. ರಾಜ್ಯ ಗ್ರಾ.ಪಂ. ನೌಕರರ ಸಂಘ ಇಂದು ರಾಜ್ಯದ ಎಲ್ಲಾ ಜಿ.ಪಂ. ಕಚೇರಿ ಎದುರು ಪ್ರತಿಭಟನೆಗೆ ಕರೆ ನೀಡಿದ್ದು, ಇದರಂತೆ ಜಿಲ್ಲಾ ಸಂಘದಿಂದ ಅಧ್ಯಕ್ಷ ಪಿ.ಆರ್. ಭರತ್ ನೇತೃತ್ವದಲ್ಲಿ ಧರಣಿ ಹಮ್ಮಿಕೊಂಡು ಮನವಿ ಸಲ್ಲಿಸಲಾಯಿತು.
ಸಿಬ್ಬಂದಿಗಳ ವೇತನಕ್ಕೆ ಕೊರತೆ ಇರುವ ಅನುದಾನದ ಬಿಡುಗಡೆ, ಕಂಪ್ಯೂಟರ್ ಆಪರೇಟರ್‍ಗಳಿಗೆ ಬಡ್ತಿ ನೀಡಲು ಮತ್ತು ನೇಮಕಾತಿಗೆ ತಿದ್ದುಪಡಿ, ಸಿಬ್ಬಂದಿಗಳಿಗೆ ನಿವೃತ್ತಿ ವೇತನ, ವೈದ್ಯಕೀಯ ವೆಚ್ಚಕ್ಕೆ ಆಗ್ರಹಿಸಲಾಗಿದೆ.
ಕನಿಷ್ಟ ವೇತನ ಪಡೆಯುವ ಸಿಬ್ಬಂದಿಗಳಿಗೆ ಬಿಪಿಎಲ್ ಕಾರ್ಡ್ ಉಳಿಸಿಕೊಳ್ಳಲು ಮಂಜೂರಾತಿ ಮಿತಿಯನ್ನು ರೂ. 1.20 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಿಸುವದು ಸೇರಿದಂತೆ ಇನ್ನಿತರ ಕೆಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಪಿ.ಆರ್. ಭರತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಚಂದ್ರ, ವೀರಾಜಪೇಟೆ ತಾಲೂಕು ಅಧ್ಯಕ್ಷ ಎಂ.ಬಿ. ಹರೀಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೆಚ್.ಜಿ. ನವೀನ್, ಮಡಿಕೇರಿ ತಾಲೂಕು ಅಧ್ಯಕ್ಷ ಬಿ.ಕೆ. ಜತ್ತಪ್ಪ ಮತ್ತಿತರರಿದ್ದರು.