ಮುಳ್ಳೂರು, ಜೂ. 2: ಸಮೀಪದ ಆಲೂರುಸಿದ್ದಾಪುರ ಪಶುವೈದ್ಯ ಆಸ್ಪತ್ರೆ ಕಟ್ಟಡದ ಹೊರಭಾಗದ ಆವರಣವನ್ನು ರಾತ್ರಿವೇಳೆ ಪುಂಡರು ಕುಡಿದು ಪಾರ್ಟಿ ಮಾಡಲು ಆಶ್ರಯ ತಾಣವನ್ನಾಗಿ ಮಾಡಿಕೊಂಡಿದ್ದಾರೆ.ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಹಲವಾರು ವರ್ಷಗಳಿಂದ ಪಶುವೈದ್ಯ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ, ಗ್ರಾ.ಪಂ. ಕಾರ್ಯಾಲಯ ಮತ್ತು ಪಶುವೈದ್ಯ ಆಸ್ಪತ್ರೆಗೆ ಒಂದೇ ಪ್ರವೇಶದ್ವಾರ ಇರುವ ಕಾರಣದಿಂದ ಸಾರ್ವಜನಿಕರು ಈ ಪ್ರವೇಶದ್ವಾರದ ಗೇಟ್ ಮೂಲಕ ಮನೆಗಳಿಗೆ ಹೋಗಬೇಕು, ಕೆಲವು ದಿನಗಳಿಂದ ಸ್ಥಳೀಯ ಮತ್ತು ಅಕ್ಕಪಕ್ಕದ ಕೆಲವು ಪುಂಡರು ರಾತ್ರಿ ವೇಳೆಯಲ್ಲಿ ಕುಡಿಯಲು, ಪಾರ್ಟಿ ಮಾಡಲು ಕೆಲವೊಮ್ಮೆ ಇಸ್ಪೀಟ್ ಆಡಲು ಪಶುವೈದ್ಯ ಆಸ್ಪತ್ರೆ ಕಟ್ಟಡದ ಹೊರಭಾಗದ ಆವರಣವನ್ನು ಬಳಸಿಕೊಳ್ಳುತ್ತಿದ್ದಾರೆ.
ರಾತ್ರಿವೇಳೆಯಲ್ಲಿ ಇಲ್ಲಿಗೆ ಬರುವ ಕೆಲವರು ಆಸ್ಪತ್ರೆ ಆವರಣದೊಳಗೆ ಪಾರ್ಟಿ ಮಾಡುತ್ತಾರೆ. ಮದ್ಯದ ಪ್ಲಾಸ್ಟಿಕ್ ಪ್ಯಾಕ್, ಪ್ಲಾಸ್ಟಿಕ್ ಕಪ್, ಬಾಟಲಿ, ಪಾರ್ಟಿ ಮಾಡಲು ತಂದ ತಿನಿಸುಗಳ ಪ್ಯಾಕ್, ಕವರ್ ಇನ್ನು ಮುಂತಾದ ತ್ಯಾಜ್ಯಗಳನ್ನು ಅಲ್ಲೆಬಿಟ್ಟು ಹೋಗುತ್ತಾರೆ. ದಿನನಿತ್ಯ ಆಸ್ಪತ್ರೆ ಸಿಬ್ಬಂದಿ ಬೆಳಿಗ್ಗೆ ಬಂದಾಗ ಅವರಿಗೆ ಎದುರಾಗುವುದೇ ಪಾರ್ಟಿಗೆ ಉಪಯೋಗಿಸಿದ ತ್ಯಾಜ್ಯ ಅವಶೇಷಗಳು. ಈ ಕುರಿತು ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಪ್ರತಿದಿನ ಆಸ್ಪತ್ರೆ ಆವರಣದೊಳಗೆ ಪಾರ್ಟಿ ಮಾಡಿ ಇಲ್ಲೇ ಬಿಟ್ಟುಹೋದ ತ್ಯಾಜ್ಯಗಳನ್ನು ಮತ್ತು ಗಲೀಜನ್ನು ಸ್ವಚ್ಛ ಮಾಡುವುದೆ ಒಂದು ಕೆಲಸವಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳುತ್ತಾರೆ. ಪಕ್ಕದಲ್ಲಿ ಗ್ರಾ.ಪಂ. ಕಾರ್ಯಾಲಯ ಇದ್ದು, ಗ್ರಾ.ಪಂ.
ಪುಂಡರ ಆಶ್ರಯ ತಾಣವಾದ ಪಶುವೈದ್ಯ ಆಸ್ಪತ್ರೆ...!
(ಮೊದಲನೆ ಪುಟದಿಂದ) ಕಚೇರಿ ಮುಂಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದರಿಂದ ರಾತ್ರಿವೇಳೆ ಪಾರ್ಟಿ ಮಾಡುವವರನ್ನು ಪತ್ತೆ ಮಾಡಿ ಪೊಲೀಸರಿಗೆ ದೂರು ನೀಡಲು ಸಾಧ್ಯವಾಗುತ್ತದೆ. ಗ್ರಾ.ಪಂ. ಕಾರ್ಯಾಲಯ ಮತ್ತು ಪಶು ಆಸ್ಪತ್ರೆ ಮುಂಭಾಗ ಪೂರ್ತಿಯಾಗಿ ತಡೆಗೋಡೆ ಮತ್ತು ಗೇಟ್ ನಿರ್ಮಿಸುವುದರಿಂದಲೂ ಪುಂಡರ ಕಾಟವನ್ನು ತಪ್ಪಸಬಹುದೆಂದು ಸ್ಥಳೀಯರಾದ ಜಯಕುಮಾರ್ ಹೇಳುತ್ತಾರೆ. -ಭಾಸ್ಕರ್ ಮುಳ್ಳೂರು