ಅಸ್ಸಾಂ ಭೂಕುಸಿತ : 20 ಸಾವು
ಗುವಾಹಟಿ, ಜೂ.2 : ದಕ್ಷಿಣ ಅಸ್ಸಾಂನ ಬರಾಕ್ ಕಣಿವೆ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಮಂಗಳವಾರ ಸಂಭವಿಸಿದ ಭೂ ಕುಸಿತದಲ್ಲಿ ಸುಮಾರು 20 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ರಕ್ಷಣಾ ಪಡೆ ಸ್ಥಳಕ್ಕೆ ಧಾವಿಸಿ ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯ ನಡೆಸುತ್ತಿದೆ. ಮೃತಪಟ್ಟವರಲ್ಲಿ ಏಳು ಮಂದಿ ಕ್ಯಾಚರ್ ಜಿಲ್ಲೆ, ಹೈಲಕಂಡಿ ಜಿಲ್ಲೆಯಲ್ಲಿ ಏಳು ಮಂದಿ ಮತ್ತು ಕರಿಮ್‍ಗಂಜ್ ಜಿಲ್ಲೆಯಲ್ಲಿ ಆರು ಮಂದಿಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಇಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಭಾರತದ ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಈಗಾಗಲೇ ಹಲವು ನೆರೆ, ಪ್ರವಾಹ ಬಂದಿದ್ದು 3.72 ಲಕ್ಷ ಜನ ತೊಂದರೆಗೀಡಾಗಿದ್ದಾರೆ.
ಇ- ಆಫೀಸ್ ಮೂಲಕ ಕಡತ ಸಲ್ಲಿಕೆ
ಬೆಂಗಳೂರು, ಜೂ.2 : ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನ ಏರಿಕೆಯಾಗುತ್ತಿರುವುದರಿಂದ ಇನ್ನುಮುಂದೆ ತಮ್ಮ ಕಚೇರಿಗೆ ಕಡತಗಳನ್ನು ಭೌತಿಕ ರೂಪದಲ್ಲಿ ಸಲ್ಲಿಸುವ ಬದಲಾಗಿ ಇ - ಆಫೀಸ್ ಮೂಲಕ ಮಾತ್ರ ಕಡತ ಮತ್ತು ಪತ್ರಗಳನ್ನು ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಚಿಸಿದ್ದಾರೆ. ಈಗಾಗಲೇ ಜೂ.1ರಿಂದ ಎಲ್ಲಾ ಸಚಿವರ ಕಚೇರಿಗಳಲ್ಲಿ ಇ - ಆಫೀಸ್ ತಂತ್ರಾಂಶವನ್ನು ಅನುಷ್ಠಾನಗೊಳಿಸಿ ಎಲ್ಲ ಕಡತ ಹಾಗೂ ಪತ್ರಗಳನ್ನು ಈ ತಂತ್ರಾಂಶದ ಮೂಲಕ ನಿರ್ವಹಿಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದೆ. ಅದೇ ರೀತಿ ಇ - ಆಫೀಸ್ ತಂತ್ರಾಂಶವನ್ನು ಬಳಸಿ ತಮ್ಮ ಕಚೇರಿಯಿಂದ ಸಚಿವಾಲಯದ ಎಲ್ಲಾ ಇಲಾಖೆಗಳು, ಅಧೀನ ಸಂಸ್ಥೆಗಳಿಗೆ ಇ - ಆಫೀಸ್ ಮೂಲಕವೇ ವ್ಯವಹರಿಸಲಾಗುತ್ತಿದೆ. ರಾಜ್ಯ ಮಟ್ಟದ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಕಚೇರಿ, ಎಲ್ಲಾ ಪ್ರಾದೇಶಿಕ ಆಯುಕ್ತರ ಕಚೇರಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್, ಪೋಲಿಸ್ ವರಿಷ್ಠಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿ(ಪ್ರಾದೇಶಿಕ) ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ(ಸಾಮಾಜಿಕ)ಗಳ ಕಚೇರಿಗಳಲ್ಲಿಯೂ ಇ - ಆಫೀಸ್ ಅನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರದ ಬಗ್ಗೆ ಪ್ರಧಾನಿ ಶ್ಲಾಘನೆ
ಬೆಂಗಳೂರು, ಜೂ.2 : ಕರ್ನಾಟಕದಲ್ಲಿ ಕೊರೋನಾ ವೈರಸ್ ನಿರ್ವಹಣೆಗೆ ಸಂಬಂಧಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬೆಳ್ಳಿ ಮಹೋತ್ಸವದ ಆಚರಣೆಯನ್ನು ವಿಡಿಯೋ ಲಿಂಕ್ ಮೂಲಕ ಉದ್ಘಾಟಿಸಿದ ಪ್ರಧಾನಿ ಮೋದಿ, ರಾಜ್ಯದ ಕೊರೋನಾ ವೈರಸ್ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರವನ್ನು ಶ್ಲಾಘಿಸಿದರು. 'ಕೋವಿಡ್ -19 ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕರ್ನಾಟಕ ಸರ್ಕಾರದ ಪ್ರಯತ್ನವನ್ನು ನಾನು ಪ್ರಶಂಸಿಸಲು ಬಯಸುತ್ತೇನೆ. ವೈರಸ್ ಅದೃಶ್ಯ ಶತ್ರುವಾಗಿರಬಹುದು. ಆದರೆ, ನಮ್ಮ ಕೊರೋನಾ ಯೋಧರು ಅಜೇಯರಾಗಿದ್ದಾರೆ ಮತ್ತು ಅದೃಶ್ಯ ಹಾಗೂ ಅಜೇಯ ವಿರುದ್ಧದ ಯುದ್ಧದಲ್ಲಿ ನಮ್ಮ ವೈದ್ಯಕೀಯ ಕಾರ್ಯಕರ್ತರು ಗೆಲ್ಲುವುದು ಖಚಿತ.
ಹಕ್ಕುಚ್ಯುತಿ ಮಂಡಿಸದಿರಲು ನಿರ್ಧಾರ
ಬೆಂಗಳೂರು, ಜೂ.2 : ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಸದ್ಯಕ್ಕೆ ಹಕ್ಕುಚ್ಯುತಿ ಮಂಡಿಸದಿರಲು ನಿರ್ಧರಿಸಿದೆ. ಸ್ಪೀಕರ್ ಜೊತೆ ಈ ಸಂಬಂಧ ಸಭೆ ನಡೆಸಿ ಮುಂದೆ ನಿರ್ಧಾರ ಕೈಗೊಳ್ಳಲು ಮಂಗಳವಾರ ನಡೆದ ಸಮಿತಿ ಸಭೆ ನಿರ್ಧರಿಸಿದೆ. ಕೊರೋನಾ ವೈದ್ಯಕೀಯ ಉಪಕರಣಗಳ ಖರೀದಿ ಅವ್ಯವಹಾರ ಸಂಬಂಧ ಸ್ಥಳ ಪರಿಶೀಲನೆಗೆ ತಡೆ ನೀಡಿದ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿಗೆ ಮುಂದಾಗುವುದು ಬೇಡ. ಮತ್ತೊಮ್ಮೆ ಸ್ಪೀಕರ್ ಗಮನಕ್ಕೆ ತಂದು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲು ಬಿಜೆಪಿ ಸದಸ್ಯರು ಸೂಚಿಸಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡಿಸದಿರಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ಧರಿಸಿದೆ ಎನ್ನಲಾಗಿದೆ.
ಉಡುಪಿಯಲ್ಲಿ 230 ಪ್ರಕರಣ ಪತ್ತೆ
ಮಂಗಳೂರು, ಜೂ.2 : ಕೊರೋನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ರಾಜಧಾನಿ ಬೆಂಗಳೂರನ್ನು ಮೀರಿಸಿರುವ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 230 ಪ್ರಕರಣ ಪತ್ತೆಯಾಗಿದೆ.ಈ ಪೈಕಿ ಬಹುತೇಕ ಮಂದಿ ಕುಂದಾಪುರ ತಾಲೂಕಿನವರಾಗಿದ್ದಾರೆ. ಆರೋಗ್ಯ ಇಲಾಖೆ ಮೂಲಗಳ ಪ್ರಕಾರ, ಕುಂದಾಪುರ ತಾಲೂಕಿನಿಂದಲೇ 200 ಪ್ರಕರಣಗಳು ವರದಿಯಾಗಿದ್ದು, ಉಳಿದವು ಉಡುಪಿ ಮತ್ತು ಕಾರ್ಕಳ ತಾಲೂಕುಗಳಿಗೆ ಸೇರಿವೆ, ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿಯೇ ಅತಿ ಹೆಚ್ಚು ಎಂಬಂತೆ 500ರ ಗಡಿಯತ್ತ ಸಾಗಿದೆ. ಆದಾಗ್ಯೂ, ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯ ವಲಸಿಗ ಕಾರ್ಮಿಕರ ಆಗಮನ ಹಾಗೂ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸುತ್ತಿರುವುದರಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಜಿಲ್ಲೆಯಲ್ಲಿ ವಿಶೇಷವಾಗಿ ಕುಂದಾಪುರದಲ್ಲಿನ ಕಳಪೆ ಕ್ವಾರಂಟೈನ್ ವ್ಯವಸ್ಥೆಯೂ ಇದಕ್ಕೆ ಕಾರಣವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕೆಲ ಕ್ವಾರಂಟೈನ್ ಕೇಂದ್ರಗಳಲ್ಲಿ ನಾಲ್ಕು ಸೋಂಕಿತರನ್ನು ಒಂದೇ ಕೊಠಡಿಗಳಲ್ಲಿ ಇರಿಸಲಾಗುತ್ತಿದೆ. ಅಧಿಕಾರಿಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಸಾಮಾಜಿಕ ಅಂತರ ನಿಯಮವನ್ನು ಅನುಸರಿಸುತ್ತಿಲ್ಲ ಎಂದು ಕೆಲವರು ಹೇಳುತ್ತಾರೆ.
ಪ್ಲಾಸ್ಮಾ ಥೆರಪಿ ಚಿಕಿತ್ಸೆ ಯಶಸ್ವಿ
ಹುಬ್ಬಳ್ಳಿ, ಜೂ.2 : ರಾಜ್ಯದದಲ್ಲಿ ಪ್ರಥಮ ಬಾರಿಗೆ ಕೊರೋನಾವರಸ್ ಸೋಂಕಿಗಾಗಿ ನಡೆಸಲಾದ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನ ಯಶಸ್ವಿಯಾಗಿದ್ದು 64 ವರ್ಷದ ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖನಾಗಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಈ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ನಡೆದ ಪ್ಲಾಸ್ಮಾ ಥೆರಪಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಈ ಸಂಬಂಧ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಒದಗಿಸಿದ್ದಾರೆ. ಈ ಹಿಂದೆ ಹುಬ್ಬಳ್ಳಿಯಲ್ಲಿ ದಾಖಲಾಗಿ ಕೋವಿಡ್ ಸೋಂಕಿನಿಂದ ಗುಣಮುಖನಾಗಿದ್ದ ರೋಗಿ ಸಂಖ್ಯೆ 363 ಅವರ ಮನವೊಲಿಸಿ ಅವರಿಂದ ಪಾಸ್ಮಾ ಪಡೆದು ಮುಂಬೈನಿಂದ ಆಗಮಿಸಿದ್ದ 64 ವರ್ಷದ ವ್ಯಕ್ತಿಗೆ ಅಳವಡಿಸಿ ಚಿಕಿತ್ಸೆ ನೀಡಲಾಗಿದೆ. ಪ್ಲಾಸ್ಮಾ ಥೆರಪಿ ನಡೆಸಲು ಕಿಮ್ಸ್ ಗೆ ಐಸಿಎಂಆರ್ ಅನುಮತಿ ನೀಡಿತ್ತು.