ಮಡಿಕೇರಿ, ಜೂ.1 : ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಎ.ಸಿ. ಓಕ್ ಅವರ ಆದೇಶದ ಮೇರೆಗೆ ಕೊಡಗು ಜಿಲ್ಲೆಯಲ್ಲಿ ನ್ಯಾಯಾಲಯ ಕಲಾಪಗಳು ಸೀಮಿತ ಚೌಕಟ್ಟಿನಲ್ಲಿ ಕಾರ್ಯಾರಂಭ ಗೊಂಡಿವೆ. ಆದರೆ ಎಂದಿನಂತೆ ವಕೀಲರು, ಪಿರ್ಯಾದಿಗಳೂ, ಆರೋಪಿಗಳಿಗೆ ಕಲಾಪದಲ್ಲಿ ಭಾಗವಹಿಸಲು ನಿರ್ಬಂಧ ವಿಧಿಸಲಾಗಿದೆ. ನೂತನ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡರ್ ಅವರ ಸಲಹೆಯಂತೆ ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಕವನ್ ಖಚಿತಪಡಿಸಿದ್ದಾರೆ.

ನ್ಯಾಯಾಲಯದ ಪ್ರವೇಶ ದ್ವಾರದಲ್ಲಿ ಪೊಲೀಸರ ನಿಯೋಜನೆ ಯೊಂದಿಗೆ ಅನವಶ್ಯಕವಾಗಿ ಯಾರೊಬ್ಬರೂ ನ್ಯಾಯಾಲಯ ಆವರಣ ಪ್ರವೇಶಿಸದಂತೆ ನಿಗಾ ವಹಿಸಲಾಗಿದೆ.

ಬದಲಾಗಿ ಹೊಸದಾಗಿ ಪಿರ್ಯಾದು ಸಲ್ಲಿಸುವುದು ಹಾಗೂ ಮುಕ್ತಾಯ ಹಂತದಲ್ಲಿರುವ ಪ್ರಕರಣಗಳ ಸಂಬಂಧವಷ್ಟೇ ಅವಕಾಶ ಕಲ್ಪಿಸಿದ್ದು, ಈ ಸಂಬಂಧ ವಕಾಲತ್ತು ನಡೆಸಲಿರುವ ವಕೀಲರಿಗೆ ಮಾತ್ರ ಪೂರ್ವಾನುಮತಿ ಯೊಂದಿಗೆ ಪ್ರವೇಶ ಕಲ್ಪಿಸಲಾಗಿದೆ. ಸೀಮಿತ ಸಮಯದಲ್ಲಿ ನ್ಯಾಯಾಂಗ ಉದ್ಯೋಗಿಗಳಿಗೆ ಪ್ರವೇಶವಿದೆ.

60 ವರ್ಷ ಮೇಲ್ಪಟ್ಟ ಅಥವಾ ಹಿರಿಯ ಅನಾರೋಗ್ಯವಿರುವ ವಕೀಲರು ವೀಡಿಯೋ ಕಾನ್ಫರೆನ್ಸ್ ಮೂಲಕ ಕಲಾಪ ವಿವರ ಒದಗಿಸಬಹುದಾಗಿದೆ. 20ಕ್ಕೂ ಮೇಲ್ಪಟ್ಟು ಹಾಗೂ ನ್ಯಾಯಾಲಯ ಕಲಾಪದಲ್ಲಿ ಆಯ ದಿನದ ಪ್ರಕರಣವಿಲ್ಲದಿದ್ದರೆ, ವಿನಾಃಕಾರಣ ಇತರ ವಕೀಲರಿಗೆ ಕೂಡ ನ್ಯಾಯಾಲಯ ಪ್ರವೇಶ ನಿರಾಕರಿಸಲಾಗಿದೆ.

ತುರ್ತು ಸಂದರ್ಭದಲ್ಲಿ ಪಿಡಿಜೆ.ಕೊಡಗು@ಜಿಮೇಲ್.ಕಾಂ ಮೂಲಕ ಅರ್ಜಿ ಸಲ್ಲಿಸಿ ನ್ಯಾಯಾಲಯದ ಅನುಮತಿ ಮೇರೆಗೆ ಕಲಾಪದಲ್ಲಿ ಭಾಗವಹಿಸಲು ವಕೀಲರಿಗೆ ಅವಕಾಶ ನೀಡಲಾಗಿದೆ. ಯಾವುದೇ ಮುಕ್ತಾಯ ಹಂತದ ಪ್ರಕರಣಗಳನ್ನು ಕೂಡ ಉಭಯ ಕಡೆ ವಕೀಲರ ಉಪಸ್ಥಿತಿಯಲ್ಲಿ ಪರಸ್ಪರ ಸಮ್ಮತಿಸಿದರೆ ಮಾತ್ರ ನ್ಯಾಯಾಧೀಶರು ಇತ್ಯರ್ಥಗೊಳಿಸಲು ಕ್ರಮ ವಹಿಸಲಿದ್ದಾರೆ.

ಇದರೊಂದಿಗೆ ನ್ಯಾಯಾಲಯ ಸಿಬ್ಬಂದಿ ಕೂಡ ಅಗತ್ಯಕ್ಕೆ ತಕ್ಕಂತೆ ಸರದಿಯಲ್ಲಿ ದಿನಬಿಟ್ಟು ದಿನದಲ್ಲಿ ಕರ್ತವ್ಯಕ್ಕೆ ಆಗಮಿಸಲು ಮತ್ತು ಕೊರೊನಾ ಸೋಂಕದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಈ ರೀತಿ ಉಚ್ಚ ನ್ಯಾಯಾಲಯದ ಕಟ್ಟುನಿಟ್ಟಿನ ನಿರ್ದೇಶನದಂತೆ ನ್ಯಾಯಾಲಯ ಕಲಾಪ ಆರಂಭಗೊಂಡಿದ್ದು, ನಿಯಮ ಉಲ್ಲಂಘನೆಯಾದರೆ ಯಾವುದೇ ಸಂದರ್ಭ ಕಲಾಪ ಸ್ಥಗಿತಗೊಳಿಸುವ ಅಧಿಕಾರ ಮುಖ್ಯ ನ್ಯಾಯಮೂರ್ತಿಗಳಿಗೆ ಇದೆ ಎಂದು ಕೆ.ಎಸ್. ಕವನ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ವೀರಾಜಪೇಟೆ ವರದಿ : ಕೊರೊನಾ ಲಾಕ್‍ಡೌನ್ ನಿರ್ಬಂಧದಿಂದ ಸುಮಾರು 65 ದಿನಗಳಿಂದ ಕಾರ್ಯಕಲಾಪಗಳಿಲ್ಲದೆ ಸ್ಥಗಿತಗೊಂಡಿದ್ದ ಸಮುಚ್ಚಯ ನ್ಯಾಯಾಲಯ ಇಂದು ಎಂದಿನಂತೆ ಕೊರೊನಾ ವೈರಸ್‍ನ ಷರತ್ತುಬದ್ದದಂತೆ ಆರಂಭಗೊಂಡಿತು.

ಅಧಿಕೃತವಾಗಿ ಕಾರ್ಯ ನಿಮಿತ್ತ ವಕೀಲರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಷರತ್ತಿನಂತೆ ನಿರ್ಧಿಷ್ಟ ಸಂಖ್ಯೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಬಹುದು. ನ್ಯಾಯಾಲಯ ಪ್ರವೇಶಿಸುವ ಮೊದಲೇ ಕಟ್ಟಡದ ಗೇಟ್‍ನ ಬಳಿಯಲ್ಲಿ ಸ್ಯಾನಿಟೈಸರ್ ಬಳಸಬೇಕು. ಥರ್ಮಲ್ ಸ್ಕ್ರೀನ್ ಮಾಡಿಸಿಕೊಂಡು ನ್ಯಾಯಾಲಯ ಪ್ರವೇಶಿಸಬೇಕು. ಇಂದು ಪ್ರಿನ್ಸಿಫಲ್ ಮುನ್ಸಿಫ್ ಹಾಗೂ ಸಿವಿಲ್ ಜಡ್ಜ್ ನ್ಯಾಯಾಲಯ ತೆರದಿದ್ದವು. ನ್ಯಾಯಾಧೀಶರುಗಳು ಹಾಜರಿದ್ದರು. ಸಮುಚ್ಚಯ ನ್ಯಾಯಾಲಯಗಳ ಎಲ್ಲ ಕಚೇರಿ ಸಿಬ್ಬಂದಿಗಳು ಹಾಜರಿದ್ದರು. ಸಮುಚ್ಚಯ ನ್ಯಾಯಾಲಯಗಳಿಗೆ ಸಾರ್ವಜನಿಕರು ಹಾಗೂ ಕಕ್ಷಿದಾರರಿಗೆ ಪ್ರವೇಶ ನಿಷೇಧಿಸಲಾಗಿತ್ತು.