ಸೋಮವಾರಪೇಟೆ, ಜೂ.1: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮವಿದ್ದರೂ ಆರ್ಎಂಸಿಯಲ್ಲಿ ನಡೆಯುವ ಸೋಮವಾರಪೇಟೆ ಸಂತೆಯಲ್ಲಿ ಇವುಗಳು ಆಚರಣೆಯಲ್ಲಿಲ್ಲ!
ಸಂತೆಯಲ್ಲಿ ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಇಟ್ಟು ಗುಂಪು ಗುಂಪಾಗಿ ಖರೀದಿ ನಡೆಯುತ್ತಿದ್ದರೆ, ಹಣ್ಣು ಸೇರಿದಂತೆ ತರಕಾರಿ, ದಿನಸಿ ಮಾರಾಟ ಮಾಡುವ ಬಹುತೇಕ ಮಂದಿ ಮಾಸ್ಕ್ ಧರಿಸದೇ ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡಿದ್ದಾರೆ.
ಕೊರೊನಾ ವೈರಸ್ ಹರಡುವ ಬಗ್ಗೆ ದಿನಂಪ್ರತಿ ಜಾಗೃತಿ ಮೂಡಿಸುತ್ತಿದ್ದರೂ ಸಹ ಬಹುತೇಕ ಸಾರ್ವಜನಿಕರು ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ.
ಕೊರೊನಾ ವೈರಸ್ನ ಭಯಕ್ಕಿಂತಲೂ ಖಾಕಿ ತೊಟ್ಟ ಪೊಲೀಸ್ ಅಧಿಕಾರಿಗಳು-ಸಿಬ್ಬಂದಿಗಳನ್ನು ಕಂಡಾಕ್ಷಣ ಮಾಸ್ಕ್ ಧರಿಸುವ ಮಂದಿ, ಪೊಲೀಸರು ಅತ್ತ ತೆರಳಿದಂತೆ ಕೊರೊನಾ ವೈರಸ್ಗೆ ‘ಡೋಂಟ್ಕೇರ್’ ಎಂಬಂತೆ ಮತ್ತದೇ ಸ್ಥಿತಿಯಲ್ಲಿ ಓಡಾಡುತ್ತಿದ್ದಾರೆ! - ವಿಜಯ್