ಕೂಡಿಗೆ, ಜೂ. 1 : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೂಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಆವರಣದಲ್ಲಿ ಕಸ ವಿಲೇವಾರಿ ಘಟಕ ಪ್ರಾರಂಭ ಮಾಡಲು ಮುಂದಾದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಗುತ್ತಿಗೆ ಪಡೆದಿರುವವರನ್ನು ತಡೆದು ಪ್ರತಿಭಟನೆ ಮಾಡಿದ ಘಟನೆ ಬ್ಯಾಡಗೂಟ್ಟ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಮುಖ್ಯ ದ್ವಾರದಲ್ಲಿ ನಡೆಯಿತು.

ಕೂಡಿಗೆ ಗ್ರಾಮ ಪಂಚಾಯತಿಯು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಕಸ ವಿಲೇವಾರಿ ಘಟಕವನ್ನು ತೆರೆಯಲು ಕಳೆದ ಆರು ತಿಂಗಳ ಹಿಂದೆ ತೀರ್ಮಾನ ಕೈಗೊಳ್ಳಲಾಗಿತ್ತು. ಗ್ರಾಮ ಪಂಚಾಯತಿ ಮಾಸಿಕ ಸಭೆಯಲ್ಲೂ ಇದು ಅಂಗೀಕಾರವಾಗಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಥಳ ವೀಕ್ಷಣೆ ಮಾಡಿ ಒಣ ಕಸ ವಿಲೇವಾರಿ ಘಟಕ ಪ್ರಾರಂಭಿಸುವುದರಿಂದ ಯಾವುದೆ ತೊಂದರೆ ಆಗುವುದಿಲ್ಲ ಎಂದು ಅಲ್ಲಿನ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ಅನೇಕ ಪರ ವಿರೋಧ ನಡುವೆ ಇಂದು ಕಾಮಗಾರಿ ಪ್ರಾರಂಭಿಸಲು ತೆರಳಿದಾಗ ಅಲ್ಲಿನ ಗ್ರಾಮಸ್ಥರು ಯಾವುದೆ ವಾಹನವನ್ನು ಒಳಗಡೆ ಬಿಡದೆ ಪ್ರತಿಭಟನೆ ಮಾಡಿ ವಾಪಸ್ ಕಳುಹಿಸಿದರು.

ಪುನರ್ವಸತಿ ಕೇಂದ್ರದ ಜನರ ಬೆಂಬಲವಾಗಿ ನಿಂತ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಾರಾವ್ ಈ ಕೇಂದ್ರದ ಸುತ್ತಲೂ 4 ಗ್ರಾಮಗಳ 500ಕ್ಕೂ ಹೆಚ್ಚು ಕುಟುಂಬದವರು ಹಾಲಿ ವಾಸವಿದ್ದು ಇದರ ಮಧ್ಯಭಾಗದಲ್ಲಿ ಕಸ ವಿಲೇವಾರಿ ಕೇಂದ್ರವನ್ನು ಸ್ಥಾಪಿಸುವುದು ಸರಿಯಾದ ಕ್ರಮವಲ್ಲ ಎಂದರು.

ಇದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿಲ್ಪಾ ಪ್ರತಿಕ್ರಿಯಿಸಿ ಈ ದಿನದ ಘಟನೆಯ ಬಗ್ಗೆ ಮೇಲಧಿಕಾರಿಗಳ ಗಮನ ಸೆಳೆಯಲಾಗಿದೆ ಎಂದರು. ಪ್ರತಿಭಟನೆ ಸಂದರ್ಭ ಬ್ಯಾಡಗೂಟ್ಟ ಪುನರ್ವಸತಿ ಕೇಂದ್ರದ ಮುಖ್ಯಸ್ಥ ಅಪ್ಪು ಮುತ್ತ ಮಾಯ, ಚಿನ್ನಪ್ಪ ಸಕ್ರೀಲ್ ಅನಿತ್ ಸೇರಿದಂತೆ ಹಾಡಿಯ ನೂರಾರು ಗ್ರಾಮಸ್ಥರು ಹಾಜರಿದ್ದರು.