ಸೋಮವಾರಪೇಟೆ,ಜೂ.1: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಪಳ್ಳಿ ಗ್ರಾಮಸ್ಥರ ದಶಕಗಳ ಬೇಡಿಕೆ ಇದೀಗ ಈಡೇರುವಂತಾಗಿದೆ. ತೀರಾ ಹದಗೆಟ್ಟಿದ್ದ ರಸ್ತೆಯಿಂದ ಮುಕ್ತಿ ದೊರೆಯುವ ಕಾಲ ಸನ್ನಿಹಿತವಾಗಿದ್ದು, ರೂ. 90 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಈ ಭಾಗದ ಸಾರ್ವಜನಿಕರು ರಸ್ತೆಗಾಗಿ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದರು. ತೋಳೂರುಶೆಟ್ಟಳ್ಳಿ-ಕೂತಿ ರಸ್ತೆಯ ಜಂಕ್ಷನ್ನಿಂದ ಹರಪಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ದುಸ್ತರವಾಗಿತ್ತು.
ದಶಕಗಳ ಹಿಂದೆ ಹಾಕಿದ್ದ ಡಾಂಬರು ಅಲ್ಲಲ್ಲಿ ಕಿತ್ತುಬಂದು, ರಸ್ತೆ ಮಧ್ಯೆ ಬೃಹತ್ ಹೊಂಡಗಳು ನಿರ್ಮಾಣವಾಗಿತ್ತು. ಮಳೆಗಾಲದಲ್ಲಂತೂ ಈ ಹೊಂಡಗಳಲ್ಲಿ ನೀರು ತುಂಬಿ ವಾಹನಗಳಿರಲಿ, ಸಾರ್ವಜನಿಕರು ನಡೆದಾಡಲೂ ತ್ರಾಸವಾಗಿತ್ತು.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಲೋಕೋಪಯೋಗಿ ಇಲಾಖೆಯಿಂದ ರೂ. 90 ಲಕ್ಷ ಬಿಡುಗಡೆಯಾಗಿದ್ದು, ಮುಖ್ಯರಸ್ತೆಯ ಜಂಕ್ಷನ್ನಿಂದ ಹರಪಳ್ಳಿ ಗ್ರಾಮದವರೆಗಿನ ರಸ್ತೆ ಕಾಂಕ್ರಿಟೀಕರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ವಿಶೇಷ ಪ್ಯಾಕೇಜ್ನಲ್ಲಿ ರೂ. 90 ಲಕ್ಷ ಹಣವನ್ನು ಹರಪಳ್ಳಿ ಗ್ರಾಮ ಸಂಪರ್ಕ ರಸ್ತೆಗೆ ಮೀಸಲಿಟ್ಟಿದ್ದು, 1.38 ಕಿ.ಮೀ. ಕಾಂಕ್ರೀಟ್ ರಸ್ತೆ, ಅವಶ್ಯವಿರುವ ಕಡೆಗಳಲ್ಲಿ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕೊಡಗಿಗೆ ರಾಜ್ಯ ಸರ್ಕಾರ ಘೋಷಿಸಿದ್ದ 50 ಕೋಟಿ ವಿಶೇಷ ಪ್ಯಾಕೇಜ್ ಹಣವನ್ನು ಕೊರೊನಾ ಹಿನ್ನೆಲೆ ವಾಪಸ್ ಪಡೆಯಲು ನಿರ್ಧರಿಸಿತ್ತು. ಈ ಸಂದರ್ಭ ತಾನು ಮತ್ತು ಶಾಸಕ ಕೆ.ಜಿ. ಬೋಪಯ್ಯ ಅವರುಗಳು ಸರ್ಕಾರದೊಂದಿಗೆ ವ್ಯವಹರಿಸಿ, ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಪತ್ತು ನಡೆದಿರುವ ಹಿನ್ನೆಲೆ ಅಗತ್ಯ ಕಾಮಗಾರಿಗೆ ಅನುದಾನ ತಡೆಹಿಡಿಯುವದು ಬೇಡ ಎಂದು ಮನವರಿಕೆ ಮಾಡಿಕೊಟ್ಟಿದ್ದರಿಂದ ವಿಶೇಷ ಪ್ಯಾಕೇಜ್ನ ಹಣ ಬಿಡುಗಡೆಯಾಗಿದೆ ಎಂದರು.
ಕಾಮಗಾರಿ ನಡೆಯುವ ಸಂದರ್ಭ ಸ್ಥಳೀಯರು ಗುಣಮಟ್ಟದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಕ್ರಿಯಾಯೋಜನೆಯಂತೆ ಕೆಲಸ ಆಗುವಂತೆ ನೋಡಿಕೊಳ್ಳಬೇಕು. ರಸ್ತೆಗಳ ಬಾಳಿಕೆಗೆ ಚರಂಡಿಗಳು ಅಗತ್ಯವಾಗಿದ್ದು, ಚರಂಡಿ ನಿರ್ಮಾಣಕ್ಕೆ ಅವಶ್ಯವಿರುವ ಜಾಗವನ್ನು ಗ್ರಾಮಸ್ಥರು ಬಿಟ್ಟುಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಸದಸ್ಯ ಧರ್ಮಪ್ಪ, ಗ್ರಾ.ಪಂ. ಅಧ್ಯಕ್ಷೆ ವಿ.ಜೆ. ಭಾರತಿ, ಗ್ರಾಮಾಧ್ಯಕ್ಷ ಹೆಚ್.ಕೆ. ಗುರಪ್ಪ, ಪಿಡಿಓ ಮಂಜುಳಾ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ಕುಮಾರ್, ಅಭಿಯಂತರ ರಮಣಗೌಡ, ಪ್ರಮುಖರಾದ ಜಲಾ ಹೂವಯ್ಯ, ಸುಧಾಕರ್, ಜೋಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.