ಮಡಿಕೇರಿ, ಮೇ 30: ದೇಶದ ಪ್ರಧಾನಿಯಾಗಿ ದ್ವಿತೀಯ ಅವಧಿಗೆ ಒಂದು ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಸಾರ್ವಭೌಮತ್ವ ಎತ್ತಿ ಹಿಡಿಯುವುದ ರೊಂದಿಗೆ ಜಾಗತಿಕವಾಗಿ ದೇಶದ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ಆಹಾರ ಖಾತೆ ಸಚಿವ ಗೋಪಾಲಯ್ಯ ಶ್ಲಾಘನೆಯ ನುಡಿಯಾಡಿದರು. ಇಲ್ಲಿನ ಜಿ.ಪಂ. ಭವನದಲ್ಲಿ ಇಂದು ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರಕ್ಕೆ ಒಂದು ವರ್ಷ ಸಂದ ಸಂದರ್ಭ, ರಾಜ್ಯಕ್ಕೆ ಪ್ರಧಾನಿಗಳು ಮತ್ತು ಕೇಂದ್ರ ಆಹಾರ ಸಚಿವರ ಕೊಡುಗೆ ಅಪಾರವೆಂದು ಕೊಂಡಾಡಿದರು.
ರಾಜ್ಯದಲ್ಲಿ ಭಿನ್ನಮತ ಚಟುವಟಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಬಿಜೆಪಿ ಬಲಿಷ್ಠ ರಾಜಕೀಯ ಪಕ್ಷವಾಗಿದ್ದು, ಎಲ್ಲವನ್ನು ಕೇಂದ್ರ ಮತ್ತು ರಾಜ್ಯ ವರಿಷ್ಠರು ನಿಭಾಯಿಸಲಿದ್ದಾರೆ ಎಂದು ಸಮರ್ಥನೆ ನೀಡಿದರು.
ನಾನು ಚಿಕ್ಕವನು : ಬಿಜೆಪಿಯಂತಹ ಬಲಿಷ್ಠ ರಾಜಕೀಯ ವ್ಯವಸ್ಥೆ ಬಗ್ಗೆ ಪ್ರತಿಕ್ರಿಯಿಸಲು ‘ನಾನು ತುಂಬಾ ಚಿಕ್ಕವನು’ ಎಂದು ವ್ಯಾಖ್ಯಾನಿಸಿದ ಗೋಪಾಲಯ್ಯ, ತಮಗೆ ವಹಿಸಿರುವ ಖಾತೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುವು ದರೊಂದಿಗೆ ಈ ಇಲಾಖೆಯ ಅಕ್ರಮಗಳಿಗೆ ಕಡಿವಾಣ ಹಾಕಿ, ವ್ಯವಸ್ಥೆಯನ್ನು ಸರಿದಾರಿಗೆ ತರುವುದಷ್ಟೇ ತಮ್ಮ ಕರ್ತವ್ಯವೆಂದು ಮಾರ್ನುಡಿದರು.
ಮುಕ್ತ ಪ್ರಶಂಸೆ : ಕೊರೊನಾ ನಡುವೆ ಕೊಡಗಿನಲ್ಲಿ ಜಿಲ್ಲಾಡಳಿತ, ಶಾಸಕರು, ಉಸ್ತುವಾರಿ ಸಚಿವರ ಸಹಿತ ಎಲ್ಲರು ಪರಿಸ್ಥಿತಿ ನಿಭಾಯಿಸುವಲ್ಲಿ ತೋರಿದ ಕಾಳಜಿ ಬಗ್ಗೆ ತಮಗೆ ಅಪಾರ ಹರ್ಷವಿದ್ದು, ಎಲ್ಲರ ಸೇವೆಯನ್ನು ಸ್ಮರಿಸುವುದಾಗಿ ಆಹಾರ ಸಚಿವರು ಪ್ರಶಂಸಿಸಿದರು.
ಗೋಷ್ಠಿಯಲ್ಲಿ ಶಾಸಕದ್ವಯರಾದ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಎಂ.ಪಿ. ಸುನಿಲ್ ಸುಬ್ರಮಣಿ ಹಾಜರಿದ್ದರು.