ಸುಂಟಿಕೊಪ್ಪ, ಮೇ 30: ರಾಷ್ಟ್ರೀಯ ಹೆದ್ದಾರಿ ಕೆದಕಲ್ ಬಳಿ ಕಂಟೈನರ್ ಲಾರಿಯು ಬೈಕ್‍ಗೆ ಡಿಕ್ಕಿ ಹೊಡೆದಿದ್ದು, ದ್ವಿಚಕ್ರ ಸವಾರ ಅನಿಲ್ ಕುಮಾರ್ (45) ಎಂಬಾತ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೆದಕಲ್ ಬಳಿಯ ಭದ್ರಕಾಳಿ ದೇವಾಲಯದ ತಿರುವಿನಲ್ಲಿ ಮುಂಜಾನೆ 7 ಗಂಟೆಗೆ ಮಂಗಳೂರು ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿ (ಕೆಎ19 ಎಎ4870)ಯು ಮೈಸೂರಿನ ವಿಶ್ವೇಶ್ವ ನಗರ ನಿವಾಸಿ ಅನಿಲ್‍ಕುಮಾರ್ ಎಂಬವರು ತನ್ನ ದ್ವಿಚಕ್ರ ವಾಹನದಲ್ಲಿ ಮೈಸೂರಿನಿಂದ ಮಡಿಕೇರಿ ಕಡೆಗೆ ಬರುತ್ತಿದ್ದಾಗ, ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಆಯತಪ್ಪಿ ಬಿದ್ದ ಸವಾರ ಅನಿಲ್‍ಕುಮಾರ್ ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿದ್ದಾರೆ.

ಕೂಡಲೆ ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರೂ, ಮಾರ್ಗ ಮಧ್ಯೆ ಅನಿಲ್ ಕೊನೆಯುಸಿರೆಳೆದಿದ್ದಾರೆ.

ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಬಿ.ತಿಮ್ಮಪ್ಪ ಹಾಗೂ ಸಿಬ್ಬಂದಿ ತೆರಳಿ ಸ್ಥಳ ಪರಿಶೀಲನೆ ನಡೆಸಿ ಲಾರಿ ಚಾಲಕನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಅಪಘಾತಕ್ಕೀಡಾದ ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.