ಶನಿವಾರಸಂತೆ, ಮೇ 30: ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಪ್ರವಾಸಿ ಮಂದಿರದ ರಸ್ತೆಯ 2 ಕಡೆಗಳಲ್ಲಿ ಸಂತೆಯ ದಿವಸ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ 15-20 ತರಕಾರಿ ಹಾಗೂ ಇತರ ಅಂಗಡಿಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಖಾಲಿ ಮಾಡಿಸಿ ಬೇರೆ ಕಡೆಗೆ ಸ್ಥಳಾಂತರಿಸಿದರು.

ಕೋವಿಡ್ -19ರ ಸಂಬಂಧ 2 ತಿಂಗಳಿನಿಂದ ಶನಿವಾರಸಂತೆಯಲ್ಲಿ ಶನಿವಾರ ನಡೆಯುವ ಸಂತೆಯನ್ನು ರದ್ದುಮಾಡಿ, ಮಾರುಕಟ್ಟೆಯನ್ನು ಮುಚ್ಚಲಾಗಿದೆ. ಸಂತೆಯ ದಿವಸ ರೈತರು, ಹೊರಜಿಲ್ಲೆಯ ವ್ಯಾಪಾರಸ್ಥರು ತರಕಾರಿ, ಹಣ್ಣು - ಹಂಪಲು, ತೆಂಗಿನಕಾಯಿ, ರೆಡಿಮೇಡ್ ಬಟ್ಟೆಗಳನ್ನು ಸಂತೆ ಮಾರುಕಟ್ಟೆಯ ಹೊರಭಾಗದ ಬೈಪಾಸ್ ರಸ್ತೆಯ 2 ಬದಿಯಲ್ಲಿ ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುತ್ತಾರೆ. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೂ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ಇತರ ವಾಹನಗಳ ನಿಲುಗಡೆಗೆ ತೊಂದರೆಯಾಗುವುದರಿಂದ ಇದನ್ನು ಅರಿತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯಾಚಾರ್, ಬಿಲ್‍ಕಲೆಕ್ಟರ್ ವಸಂತ, ಸಿಬ್ಬಂದಿ ಧರ್ಮಪ್ಪ ಇಂದು ಬೆಳಿಗ್ಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ರಸ್ತೆಯ 2 ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ 15-20 ಅಂಗಡಿಗಳನ್ನು ಖಾಲಿ ಮಾಡಿಸಿ ಬೇರೆಡೆಗೆ ಸ್ಥಳಾಂತರಿಸಿ ಸಾರ್ವಜನಿಕರಿಗೆ ಹಾಗೂ ಇತರ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಟ್ಟರು.