ಕೂಡಿಗೆ, ಮೇ 30: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸಮೀಪದ ಸೀತಾ ಕಾಲೋನಿಯ ರಸ್ತೆ ಕಾಮಗಾರಿಯು ಇದೀಗ ಪ್ರಾರಂಭವಾಗಿದೆ.
ಸೀತಾ ಕಾಲೋನಿಯಲ್ಲಿ 25ಕ್ಕೂ ಹೆಚ್ಚು ಜೇನು ಕುರುಬ ಜನಾಂಗದವರಿಗೆ ಸಂಚರಿಸಲು ಸಮರ್ಪಕವಾದ ರಸ್ತೆಯಿಲ್ಲದೆ ಮಳೆಗಾಲದಲ್ಲಿ ಬಹಳ ತೊಂದರೆ ಅನುಭವಿಸಿದ್ದರು. ಕೂಡಿಗೆ ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ಅರ್ಜಿಯನ್ನು ಸಲ್ಲಿಸಿದರೂ ದೊಡ್ಡ ಮೊತ್ತದ ಹಣ ಬೇಕಾಗುತ್ತದೆ ಎಂಬ ಹಿನ್ನೆಲೆ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಲ್ಲಿ ಕಾವೇರಿ ನೀರಾವರಿ ಇಲಾಖೆಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಅದರ ಆಧಾರದ ಮೇಲೆ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಹಾಡಿಯ ಜನರ ರಸ್ತೆಯ ಸಮಸ್ಯೆಗಳನ್ನು ತಿಳಿದು ರೂ. 82 ಲಕ್ಷಗಳ ಕ್ರಿಯಾಯೋಜನೆಯನ್ನು ತಯಾರಿಸಿ ಇದೀಗ ಶಾಸಕರು ಭೂಮಿಪೂಜೆ ನೆರವೇರಿಸಿದ ನಂತರ ಕಾಮಗಾರಿ ನಡೆಯುತ್ತಿದೆ.
ಈ ಸಂದರ್ಭ ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮದನ್ ಕುಮಾರ, ಇಂಜಿನಿಯರ್ ನಾಗರಾಜ ಸೇರಿದಂತೆ ಹಾಡಿಯ ಗ್ರಾಮಸ್ಥರು ಇದ್ದರು.