ಕೂಡಿಗೆ, ಮೇ 31 : ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾದಿರಿಸಿದ ಜಾಗದಲ್ಲಿ ವಸತಿ ರಹಿತರಿಗೆ ಮನೆಗಳ ನಿರ್ಮಾಣ ಮಾಡುವ ಚಿಂತನೆ ನಡೆಸಲಾಗುತ್ತಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಸಕರು ಕಾರ್ಯಕ್ರಮ ನಿಮಿತ್ತ ಕುಶಾಲನಗರಕ್ಕೆ ಬಂದ ಸಂದರ್ಭದಲ್ಲಿ ವಸತಿ ರಹಿತರು ಅರ್ಜಿ ಸಲ್ಲಿಸಿದ ಸಮಯದಲ್ಲಿ ಕೂಡಿಗೆ - ಕೂಡುಮಂಗಳೂರು ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ ಕಂದಾಯ ಇಲಾಖೆಯ ವತಿಯಿಂದ ಜಾಗವನ್ನು ಸರ್ವೆ ನಡೆಸಿ ಗುರುತಿಸಲಾಗಿದೆ.
ಅದರಂತೆ ಆಯಾ ಗ್ರಾಮ ಪಂಚಾಯತಿಗೆ ಸೇರಿದ ವಸತಿ ರಹಿತರು, ಗ್ರಾಮ ಸಭೆಯಲ್ಲಿ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಅದರ ಅನುಗುಣವಾಗಿ ಪರಿಶೀಲನೆ ಮಾಡಿ ವಸತಿ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ನಡೆಯಲಿದೆ ಎಂದರು.
ಸರಕಾರದ ಯೋಜನೆಯ ಪ್ರಕಾರ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ನೂರಾರು ಮನೆಗಳ ಕಾಮಗಾರಿ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.