ಶ್ರೀಮಂಗಲ, ಮೇ 30: ಬಾಳೆಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವನೂರು ಗ್ರಾಮದಲ್ಲಿ ಹುಲಿ ದಾಳಿಗೆ 7 ತಿಂಗಳ ಗಬ್ಬದ ಮಿಶ್ರ ತಳಿಯ ಹಸು ಬಲಿಯಾಗಿದೆ.

ಗ್ರಾಮದ ರೈತ ಮಹಿಳೆ ಆದೇಂಗಡ ಕವಿತಾ ಪ್ರಕಾಶ್ ಅವರ ಕೊಟ್ಟಿಗೆ ಹೊರಗೆ ಕಟ್ಟಿದ್ದ ಹಸುವನ್ನು ಶುಕ್ರವಾರ ರಾತ್ರಿ ಹುಲಿ ದಾಳಿ ಮಾಡಿ ಕೊಂದಿದೆ.

ಶುಕ್ರವಾರ ರಾತ್ರಿ ಮಳೆ ಗಾಳಿ ಇದ್ದುದರಿಂದ ಕೊಟ್ಟಿಗೆ ಸಮೀಪವೇ ಕಾರ್ಮಿಕರ ಲೈನ್ ಮನೆ ಇದ್ದರೂ ಹುಳಿದಾಳಿ ಸದ್ದು ಕೇಳಿಸಿಲ್ಲ. ಬೆಳಿಗ್ಗೆ ಎಂದಿನಂತೆ ಕೊಟ್ಟಿಗೆಗೆ ತೆರಳಿ ನೋಡಿದಾಗ ಹುಲಿ ದಾಳಿ ಮಾಡಿರುವುದು ಗೊತ್ತಾಗಿದೆ.

ಕಳೆದ ಮಳೆಗಾಲದಲ್ಲಿ ಜಾನುವಾರು ಕೊಟ್ಟಿಗೆ ಕುಸಿದು ಬಿದ್ದಿದ್ದರಿಂದ ಕೆಲವು ಹಸುಗಳನ್ನು ತಾತ್ಕಾಲಿಕ ಕೊಟ್ಟಿಗೆಯಲ್ಲಿ, ಉಳಿದ ಹಸುಗಳನ್ನು ಕೊಟ್ಟಿಗೆಯ ಹೊರಗೆ ಕಟ್ಟಲಾಗುತ್ತಿದೆ ಎಂದು ಕವಿತಾ ಪ್ರಕಾಶ್ ತಿಳಿಸಿದ್ದಾರೆ.

ಕಲ್ಲಳ ವಲಯ ಅರಣ್ಯಾಧಿಕಾರಿ ಯೋಗೇಶ್ ಚೌಗಲೆ ಮತ್ತು ತಂಡ ಭೇಟಿ ನೀಡಿ, ಮಹಜರು ನಡೆಸಿದೆ. ಸೋಮವಾರ ಪರಿಹಾರ ಧನ ಚೆಕ್ ವಿತರಿಸುವುದಾಗಿ ಅರಣ್ಯಾಧಿಕಾರಿ ತಿಳಿಸಿದ್ದಾರೆ.