ಸೋಮವಾರಪೇಟೆ, ಮೇ 30: ತಾ. 19ರ ರಾತ್ರಿ ನಡೆದ ವಾಹನಕ್ಕೆ ಬೆಂಕಿ ಹಾಕಿದ ಪ್ರಕರಣ ಸೋಮವಾರಪೇಟೆ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದು, 10 ದಿನಗಳಾದರೂ ಆರೋಪಿಗಳ ಸುಳಿವಿನ ಬಗ್ಗೆ ನಿಖರತೆ ದೊರೆತಿಲ್ಲ ಎನ್ನಲಾಗಿದೆ.
ತಾ. 19ರಂದು ರಾತ್ರಿ ಸೋಮವಾರಪೇಟೆ ಪಟ್ಟಣ ಸಮೀಪದ ಹುಲ್ಲೂರಿಕೊಪ್ಪ ಗ್ರಾಮದ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಟಾಟಾ 407 ತಾ. 20ರ ಬೆಳಗ್ಗಿನ ಜಾವ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿತ್ತು.
ಶನಿವಾರಸಂತೆಯ ಜಾಕೀರ್ ಪಾಷಾ ಅವರ ಪತ್ನಿ ನಾಜಿಯಾ ತಬಸ್ಸುಂ ಮಾಲೀಕತ್ವದ ಟಾಟಾ 407 ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಾಕಿದ್ದು, ತಾ. 20ರಂದು ಘಟನೆ ಬೆಳಕಿಗೆ ಬರುತ್ತಿದ್ದಂತೆ ಸೋಮವಾರಪೇಟೆ ಪೊಲೀಸರ ಸಹಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದೇ ಘಟನೆಗೆ ಸಂಬಂಧಿಸಿದಂತೆ ಜಾಕೀರ್ ಪಾಷಾ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಶನಿವಾರಸಂತೆಯ ಧನಂಜಯ್, ಹರೀಶ್, ಐಗೂರಿನ ಭರತ್, ಸಕಲೇಶಪುರದ ರಘು ಅವರುಗಳ ಮೇಲೆ ಸಂಶಯ ವ್ಯಕ್ತಪಡಿಸಿದ್ದರು.
ಈ ಬಗ್ಗೆ ದೂರನ್ನು ಸ್ವೀಕರಿಸಿದ ಪೊಲೀಸರು, ಘಟನೆಯ ಬಗ್ಗೆ ನಾವುಗಳು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತೇವೆ. ಅಲ್ಲಿಯವರೆಗೂ ಇಂತಹವರೇ ಆರೋಪಿಗಳೆಂದು ಬೊಟ್ಟು ಮಾಡುವದು ಬೇಡ. ಒಂದೆರಡು ದಿನಗಳಲ್ಲಿ ಪ್ರಕರಣವನ್ನು ಭೇದಿಸುತ್ತೇವೆ ಎಂದಿದ್ದರು.
ಇದಕ್ಕೆ ಸ್ಪಂದಿಸಿದ ದೂರುದಾರರು ಮತ್ತೊಂದು ದೂರು ನೀಡಲು ಮುಂದಾಗಿದ್ದರು. ಆದರೆ ರಾಜಕೀಯ ಪಕ್ಷಗಳ ಕೆಲ ಮುಖಂಡರು ತಾ. 20ರ ಸಂಜೆ ವೇಳೆಗೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ಆಗಮಿಸಿ, ಇಲಾಖೆಯ ಮೇಲೆ ಒತ್ತಡ ತಂದು ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಾಗುವಂತೆ ಮಾಡಿದ್ದರು.
ಈ ನಾಲ್ವರ ಮೇಲೆ ಎಫ್‍ಐಆರ್ ದಾಖಲಾಗುತ್ತಿದ್ದಂತೆ ಪೊಲೀಸರು ಅನಿವಾರ್ಯವಾಗಿ ಈ ನಾಲ್ಕು ಮಂದಿಯ ಚಲನ ವಲನದ ಮೇಲೆ ನಿಗಾ ಇಡುವಂತಾಯಿತು. ಈ ನಾಲ್ವರ ಪೂರ್ವಾಪರ, ತಾ. 19ರ ರಾತ್ರಿ ಇವರುಗಳಿದ್ದ ಸ್ಥಳ, ಇವರುಗಳ ಓಡಾಟದ ವಿವರಗಳನ್ನು ಸಂಗ್ರಹಿಸುವಲ್ಲಿ ದಿನಗಳು ಉರುಳಿದವು.
ಈ ಮಧ್ಯೆ ಎಸ್‍ಡಿಪಿಐ, ಕಾಂಗ್ರೆಸ್ ಪಕ್ಷದ ಮುಖಂಡರು ವಾಹನಕ್ಕೆ ಬೆಂಕಿ ಹಾಕಿದ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಒತ್ತಡ ಹಾಕಿದ್ದರೆ, ಭಾರತೀಯ ಜನತಾ ಪಾರ್ಟಿಯ ಮುಖಂಡರೂ ಸಹ ಬೆಂಕಿ ಹಚ್ಚಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು.
ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರ ದೂರಿನನ್ವಯ ಆರೋಪಿ ಸ್ಥಾನದಲ್ಲಿರುವ ಮಂದಿಯೂ ಸಹ ಆದಷ್ಟು ಶೀಘ್ರ ಪ್ರಕರಣದ ತನಿಖೆ ನಡೆಸಬೇಕು. ವಾಹನಕ್ಕೆ ಬೆಂಕಿ ಹಚ್ಚಿದ ನಿಜವಾದ ಆರೋಪಿಗಳನ್ನು ಬಂಧಿಸಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಅವರ ಮೂಲಕ ಪೊಲೀಸರ ಮೇಲೆ ಒತ್ತಡ ಹೇರುತ್ತಿರುವದು ಇಡೀ ಪ್ರಕರಣ ಕುತೂಹಲಕ್ಕೆ ಕಾರಣವಾಗಿದೆ.
ಸ್ವತಃ ಆರೋಪಿ ಸ್ಥಾನದಲ್ಲಿರುವ ಮಂದಿಯೇ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ಬೆಂಕಿ ಹಚ್ಚಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸುತ್ತಿರುವದು ಪೊಲೀಸ್ ಇಲಾಖೆಯ ತಲೆಬಿಸಿಗೆ ಕಾರಣವಾಗಿದ್ದು, ತನಿಖೆಯ ದಿಕ್ಕನ್ನು ಬದಲಾಯಿಸಲು ಇಲಾಖೆ ಮುಂದಾಗಿದೆ ಎನ್ನಲಾಗಿದೆ.
ಈ ನಡುವೆ ದೂರುದಾರರು ಹೆಸರಿಸಿದ ನಾಲ್ವರು ಆರೋಪಿತರ ಚಲನವಲನ ಗಮನಿಸಿದ ಪೊಲೀಸ್ ಇಲಾಖೆ, ಅವರುಗಳು ತಾ. 19ರ ರಾತ್ರಿ ಈ ಭಾಗದಲ್ಲಿ ಓಡಾಡಿದ ಬಗ್ಗೆ ಯಾವದೇ ಕುರುಹುಗಳು ಕಂಡುಬಾರದ ಕಾರಣ ತನಿಖೆಯ ದಿಕ್ಕು ಬದಲಾಯಿಸಲು ಮುಂದಾಗಿದೆ.
ತಾ. 19ರಂದು ರಾತ್ರಿ ಈ ವ್ಯಾಪ್ತಿಯಲ್ಲಿ ಓಡಾಡಿದ ವಾಹನಗಳ ವಿವರಗಳನ್ನು ಸಿ.ಸಿ. ಕ್ಯಾಮೆರಾಗಳ ಆಧಾರದಲ್ಲಿ ಪರಿಶೀಲಿಸಲಾಗಿದೆ. ಇದರೊಂದಿಗೆ ಎಫ್‍ಐಆರ್‍ನಲ್ಲಿರುವ ಆರೋಪಿಗಳ ಮೊಬೈಲ್ ಬಳಕೆಯ ಬಗ್ಗೆಯೂ ಸಮಗ್ರ ಪರಿಶೀಲನೆ ನಡೆಸಿದ್ದು, ಅಂದಿನ ಘಟನೆಗೂ ಇವರುಗಳಿಗೂ ತಾಳೆಯಾಗುವ ಅಂಶಗಳು ಈವರೆಗೆ ಸಿಕ್ಕಿಲ್ಲ ಎನ್ನಲಾಗಿದೆ.
ಹಾಗಾದರೆ ವಾಹನಕ್ಕೆ ಬೆಂಕಿ ಹಾಕಿದವರು ಯಾರು? ಎಂಬ ಪ್ರಶ್ನೆ ಭೂತಾಕಾರವಾಗಿ ಕಾಡುತ್ತಿದ್ದು, ಪ್ರಕರಣ ಕಗ್ಗಂಟಾಗಿಯೇ ಉಳಿದಿದೆ. ಎಫ್‍ಐಆರ್‍ನಲ್ಲಿ ಹೆಸರು ನಮೂದಾಗಿರುವ ಮಂದಿ ಬೆಂಕಿ ಹಾಕಿಲ್ಲ ಎಂಬದು ಮೇಲ್ನೋಟಕ್ಕೆ ಸಾಬೀತಾಗಿದ್ದರೂ, ಮತ್ತ್ಯಾರು ಕೃತ್ಯ ಎಸಗಿದರು ಎಂಬ ಬಗ್ಗೆ ಇಲಾಖೆಯಲ್ಲೂ ಮಾಹಿತಿ ಇಲ್ಲ ಎನ್ನಲಾಗಿದೆ.
ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನ ಶಾರ್ಟ್ ಸಕ್ರ್ಯೂಟ್‍ಗೆ ಒಳಗಾಯಿತಾ? ಅಥವಾ ತಾ. 18ರಂದು ಶನಿವಾರಸಂತೆಯಲ್ಲಿ ವಾಹನದ ಮಾಲೀಕರ ಕುಟುಂಬ ಸದಸ್ಯ ಮತ್ತು ಇನ್ನೊಂದು ಕುಟುಂಬದ ನಡುವೆ ನಡೆದಿದ್ದ ಗಲಾಟೆಯ ಮುಂದುವರೆದ ಭಾಗವಾಗಿ ದುಷ್ಕರ್ಮಿಗಳು ವಾಹನಕ್ಕೆ ಬೆಂಕಿ ಇಟ್ಟರಾ? ಅಥವಾ ಸ್ಥಳೀಯ ಕೆಲವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರಾ? ಎಂಬ ಕೋನಗಳಲ್ಲಿ ಪೊಲೀಸರ ತನಿಖೆ ನಡೆಯುತ್ತಿದೆ ಎಂದು ಅಂದಾಜಿಸಲಾಗಿದೆ.
ಈ ನಡುವೆ ತಾ. 22ರಂದು ಶನಿವಾರಸಂತೆಯ ಗ್ರಾ.ಪಂ. ಮಾಜೀ ಅಧ್ಯಕ್ಷ, ಹಿಂದೂಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಎಸ್.ಎನ್. ರಘು ಅವರಿಗೆ ಸೇರಿದ ಲಾರಿಗೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ.
ನೆರೆಯ ಹಾಸನ ಜಿಲ್ಲೆ, ಯಸಳೂರು ಹೋಬಳಿಯ ಹೊಸೂರು ಗ್ರಾಮದ ಹೊಸಕೋಟೆಯ ತೋಟದೊಳಗೆ ನಿಲ್ಲಿಸಿದ್ದ ಲಾರಿಗೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದು, ಲಾರಿಯ ಮುಂಭಾಗ ಸಂಪೂರ್ಣ ಸುಟ್ಟು ಹೋಗಿದೆ. ಈ ಬಗ್ಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಅಲ್ಲಿನ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಸೋಮವಾರಪೇಟೆಯ ಹುಲ್ಲೂರಿಕೊಪ್ಪದಲ್ಲಿ ನಿಲ್ಲಿಸಿದ್ದ ಜಾಕೀರ್ ಪಾಷಾ ಅವರಿಗೆ ಸೇರಿದ 407 ವಾಹನಕ್ಕೆ ಬೆಂಕಿ ಹಾಕಿದ ಪ್ರಕರಣದ ಮುಂದುವರೆದ ಭಾಗವಾಗಿ ಹೊಸೂರು ಹೊಸಕೋಟೆಯಲ್ಲಿ ನಿಲ್ಲಿಸಿದ್ದ ಎಸ್.ಎನ್. ರಘು ಅವರ ಲಾರಿಗೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ ಎನ್ನಲಾಗಿದೆ.
ಈ ಬೆಂಕಿ ಪ್ರಕರಣಗಳು ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಿದ್ದ ಸಂದರ್ಭವೇ ಕಳೆದ ತಾ. 24ರಂದು ಸೋಮವಾರಪೇಟೆ ಪಟ್ಟಣದ ಮಹದೇಶ್ವರ ಬಡಾವಣೆಯಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ 5 ಕಾರುಗಳಿಗೆ ಕಲ್ಲು ಹೊಡೆದು ಗಾಜುಗಳನ್ನು ಪುಡಿಮಾಡಲಾಗಿತ್ತು. ಇದರೊಂದಿಗೆ ವಾಸದ ಮನೆಯ ಮೇಲೂ ಕಲ್ಲು ತೂರಲಾಗಿತ್ತು. ಈ ಎಲ್ಲಾ ಘಟನೆಗಳು ಒಂದಕ್ಕೊಂದು ‘ಲಿಂಕ್’ ಪಡೆದಿವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.
ವಾಹನಗಳಿಗೆ ಕಲ್ಲು ಹೊಡೆದ ಪ್ರಕರಣ ಹಾಗೂ ಬೆಂಕಿ ಹಚ್ಚಿದ ಪ್ರಕರಣಕ್ಕೂ ಸಂಬಂಧವಿಲ್ಲ. ಪಾನಮತ್ತ ವ್ಯಕ್ತಿಯೋರ್ವ ರಾತ್ರಿ ವೇಳೆ ವಾಹನಗಳಿಗೆ ಕಲ್ಲುಹೊಡೆದಿದ್ದಾನೆ. ಆತನ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸಲು ಇಲಾಖೆ ಮುಂದಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಕಿ ಹಾಕಿದ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ಸಂಪೂರ್ಣ ಸಾಕ್ಷಿಗಳನ್ನು ಕಲೆಹಾಕಲಾಗುತ್ತಿದೆ. ವಿವಿಧ ಕೋನಗಳಲ್ಲಿ ತನಿಖೆ ನಡೆಯುತ್ತಿದೆ ಎಂದಷ್ಟೇ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ತಿಳಿಸಿದ್ದಾರೆ.
- ವಿಜಯ್ ಹಾನಗಲ್