ಸಿದ್ದಾಪುರ, ಮೇ 31: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಹಿಂಡುಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕುಶಾಲನಗರ ವಲಯ ಅರಣ್ಯ ವ್ಯಾಪ್ತಿ ಗೊಳಪಡುವ ಚೆಟ್ಟಳ್ಳಿ, ಮೋದೂರು, ಈರಳೆವಳಮುಡಿ ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ದಾಂಧಲೆ ನಡೆಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆಗೆ ಮೀನುಕೊಲ್ಲಿ, ಆನೆಕಾಡು ಉಪ ವಲಯ ಅರಣ್ಯಾಧಿಕಾರಿಗಳಾದ ಸುಬ್ರಾಯ ಹಾಗೂ ಮಾದೇವ ನಾಯಕ್ ನೇತೃತ್ವದಲ್ಲಿ 15 ಸಿಬ್ಬಂದಿಗಳು ಇಂದು ಕಾರ್ಯಾಚರಣೆ ನಡೆಸಿದರು. ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ 15ಕ್ಕೂ ಅಧಿಕ ಕಾಡಾನೆಗಳನ್ನು ಪಟಾಕಿ ಸಿಡಿಸಿ ದುಬಾರೆ ಅರಣ್ಯಕ್ಕೆ ಓಡಿಸಿದರು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ 2 ಮರಿಯಾನೆಗಳು ಸೇರಿದಂತೆ ಸಲಗಗಳು ಕಂಡುಬಂದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಆಹಾರಗಳನ್ನು ಅರಸಿಕೊಂಡು ಕಾಡಿನಿಂದ ನಾಡಿಗೆ ಕಾಡಾನೆ ಹಿಂಡು ದಾಳಿ ನಡೆಸುತ್ತಿದೆ. ಇದೀಗ ಹಲಸಿನಕಾಯಿಯ ರುಚಿಯನ್ನು ಕಂಡುಕೊಂಡಿರುವ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು ದಾಂಧಲೆ ನಡೆಸುತ್ತಿದೆ. ಅಲ್ಲದೆ ಮಾನವನ ಮೇಲೆ ದಾಳಿ ನಡೆಸುತ್ತಿದ್ದು, ಕಾಡಾನೆಗಳ ಹಾವಳಿ ಯಿಂದಾಗಿ ಬೆಳೆಗಾರರು ಹಾಗೂ ಕಾರ್ಮಿಕರು ಭಯಭೀತ ರಾಗಿದ್ದಾರೆ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಶಾಶ್ವತ ಯೋಜನೆಯನ್ನು ರೂಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದರೂ ಕೂಡ ಮರಳಿ ಆನೆಗಳು ತೋಟಕ್ಕೆ ಲಗ್ಗೆ ಇಡುತ್ತಿರುವುದರಿಂದ ತಲೆ ನೋವಾಗಿ ಪರಿಗಣಿಸಿದೆ ಇಂದು ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಧಿಕಾರಿ ಗಳೊಂದಿಗೆ ಅರಣ್ಯ ರಕ್ಷಕರಾದ ಚರಣ್ ಗಣೇಶ ಹಾಗೂ ಆರ್‍ಆರ್‍ಟಿ ತಂಡದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.