ಮಡಿಕೇರಿ, ಮೇ 31: ಲಾಕ್‍ಡೌನ್‍ಗಳಿಂದಾಗಿ ಕಳೆದ 3 ತಿಂಗಳಿನಲ್ಲಿ ಪ್ರವಾಸೋದ್ಯಮವು ಜಿಲ್ಲೆಯಲ್ಲಿ ನೆಲಕಚ್ಚಿದ್ದು, ಅದನ್ನೇ ನಂಬಿಕೊಂಡಿದ್ದ ಮಂದಿಗೆ ಭಾರೀ ಹೊಡೆತವುಂಟಾಗಿದೆ. ಪ್ರವಾಸೋದ್ಯಮವನ್ನು ಅವಲಂಬಿಸಿದ್ದ ಹೊಟೇಲ್ ಉದ್ಯಮ, ಹೋಂಸ್ಟೇಗಳು, ಲಾಡ್ಜ್, ರೆಸಾರ್ಟ್, ಸ್ಪೈಸಸ್ ಮೊದಲಾದ ಅಂಗಡಿ ಮಳಿಗೆಗಳ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಲಾಕ್‍ಡೌನ್‍ನಿಂದಾಗಿ ಹೇರಲ್ಪಟ್ಟ ನಿರ್ಬಂಧದಿಂದಾಗಿ ಈ ಉದ್ಯಮವನ್ನೇ ನಂಬಿ ಜೀವನ ನಿರ್ವಹಿಸುತ್ತಿದ್ದ ಮಾಲೀಕರು, ಕಾರ್ಮಿಕರು ತೀವ್ರ ಬವಣೆಗೆ ಒಳಗಾಗಿದ್ದಾರೆ. ಭೂತಳ ಸೇರಿದ ಪ್ರವಾಸೋದ್ಯಮದಿಂದ ಜಿಲ್ಲೆಯ ಆರ್ಥಿಕ ಸ್ಥಿತಿ ತೀವ್ರ ಕುಸಿತಕ್ಕೆ ಒಳಗಾಗಿದೆ. ನೇರವಾಗಿ ಈ ಕ್ಷೇತ್ರಕ್ಕೆ ತೊಡಗಿಸಿಕೊಂಡಿದ್ದ ಕಾರು ಮಾಲೀಕರು, ಪರೋಕ್ಷವಾಗಿ ಸೇರ್ಪಡೆಯಾಗಿದ್ದ ಇತರ ಹಲವಷ್ಟು ಕ್ಷೇತ್ರಗಳ ಉದ್ಯಮಿಗಳು ಇನ್ನೂ ಚೇತರಿಸಿಕೊಳ್ಳಲಾರದಷ್ಟು ನೆಲಕಚ್ಚಿದ್ದಾರೆ.ಇದರೊಂದಿಗೆ ಪ್ರವಾಸಿಗರ ಆಗಮನದಿಂದ ಆರ್ಥಿಕವಾಗಿ ಬಲಗೊಳ್ಳುತ್ತಿದ್ದ ಸಾಕಷ್ಟು ಸರಕಾರಿ ಇಲಾಖೆಗಳ ಖಜಾನೆ ಕೂಡಾ ಬರಿದಾಗುತ್ತಿದೆ. ಅರಣ್ಯ, ಮುಜರಾಯಿ, ತೋಟಗಾರಿಕೆ ಹಾಗೂ ಪಂಚಾಯಿತಿಗಳು ಕೂಡಾ ಶುಲ್ಕದ ರೂಪದಲ್ಲಿ ಗಳಿಸುತ್ತಿದ್ದ ಆದಾಯಕ್ಕೂ ಕುಂದು ಬಂದಿದ್ದು, ಕೋಟ್ಯಂತರ ರೂಪಾಯಿ ವಹಿವಾಟು ಸ್ಥಗಿತಗೊಂಡಿದೆ.ಸಾಮಾನ್ಯವಾಗಿ ಪ್ರತೀ ವರ್ಷ ಮಾರ್ಚ್, ಏಪ್ರಿಲ್, ಮೇ ತಿಂಗಳುಗಳಲ್ಲಿ ಜಿಲ್ಲೆಯು ಪ್ರವಾಸಿಗರಿಂದ ಕೂಡಿರುತ್ತಿತ್ತು. ಸ್ಥಳೀಯರಿಗಿಂತ ಪ್ರವಾಸಿಗರನ್ನೇ ಹೆಚ್ಚಾಗಿ ರಸ್ತೆಗಳಲ್ಲಿ ಕಾಣಬಹುದಾಗಿತ್ತು. ದ್ವಿಚಕ್ರ ವಾಹನಗಳ ಸುಗಮ ಸಂಚಾರಕ್ಕೂ ಪ್ರವಾಸಿಗರಿಂದ ಕೂಡಿದ್ದ ಟ್ರಾಫಿಕ್ ಅಡ್ಡಿಪಡಿಸುತ್ತಿತ್ತು. ಈ ಮೂರು ತಿಂಗಳುಗಳಲ್ಲಿ ಲಕ್ಷಾಂತರ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದು, ಜಿಲ್ಲೆಯ ವಿವಿಧ ಪಂಚಾಯಿತಿಗಳು, ತೋಟಗಾರಿಕಾ ಇಲಾಖೆ, ಅರಣ್ಯ ಇಲಾಖೆಗಳಿಗೆ ಆದಾಯದ ಬೆನ್ನೆಲುಬು ಆಗಿತ್ತು. ಇಂದಿನ ಪರಿಸ್ಥಿತಿಯಲ್ಲಿ ಈ ಮೂರು ತಿಂಗಳುಗಳಲ್ಲಿ ಯಾವುದೇ ಪ್ರವಾಸಿಗರೂ ಕೂಡ ಜಿಲ್ಲೆಗೆ ಅಧಿಕೃತವಾಗಿ ಆಗಮಿಸಿರುವ ದಾಖಲೆ ಇರುವುದಿಲ್ಲ. ಲಕ್ಷಾಂತರ ಪ್ರವಾಸಿಗರಿಂದ ಸಂಗ್ರಹವಾಗುತ್ತಿದ್ದ ಕೋಟ್ಯಂತರ ರೂ. ಇದೀಗ ಶೂನ್ಯಕ್ಕೆ ಇಳಿದಿದೆ.
ನಗರದ ಪ್ರಸಿದ್ಧ ಪ್ರವಾಸಿ ತಾಣವಾದ ರಾಜಾಸೀಟು ಈ 3 ತಿಂಗಳುಗಳಲ್ಲಿ ಅಧಿಕ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. ಸೂರ್ಯಾಸ್ತ ನೋಡಲು ಪ್ರವಾಸಿಗರು ಮುಗಿಬೀಳುತ್ತಿದ್ದರು. ಆದರೆ ಇದೀಗ ತೋಟಗಾರಿಕಾ ಇಲಾಖೆಯ ಕಾರ್ಮಿಕರು ಮಾತ್ರ ಇಲ್ಲಿ ಕಾಣಸಿಗುತ್ತಿದ್ದಾರೆ. ಪ್ರವಾಸಿಗರು ಇಲ್ಲದಿದ್ದರೂ, ಒಟ್ಟು 21 ಮಂದಿ ಕಾರ್ಮಿಕರು ಪ್ರತಿದಿನ ರಾಜಾಸೀಟು, ಗದ್ದಿಗೆ ಹಾಗೂ ನೆಹರು ಮಂಟಪಗಳ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಇವರುಗಳ ಸಂಬಳ ಹಾಗೂ ಇತರ ನಿರ್ವಹಣಾ ಖರ್ಚು ಸೇರಿದಂತೆ
(ಮೊದಲ ಪುಟದಿಂದ) ತಿಂಗಳಿಗೆ ರೂ.2,75,000 ಬೇಕಾಗಿದ್ದು, ಪ್ರವಾಸಿಗರಿಂದ ಬರುವ ಆದಾಯವಿಲ್ಲದಿದ್ದರೂ ನಿರ್ವಹಣಾ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರಮೋದ್ ಮಾಹಿತಿ ನೀಡಿದ್ದಾರೆ. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ರೂ.3,24,485, ಏಪ್ರಿಲ್ ತಿಂಗಳಿನಲ್ಲಿ ರೂ. 7,01,855 ಹಾಗೂ ಮೇ ನಲ್ಲಿ ರೂ.12,54,340 ರಾಜಾಸೀಟಿನಲ್ಲಿ ಸಂಗ್ರಹಾತಿ ಆಗಿರುತ್ತದೆ ಎಂದು ಪ್ರಮೋದ್ ಮಾಹಿತಿ ನೀಡಿದ್ದಾರೆ. ಈ ವರ್ಷ ಇದೆಲ್ಲವೂ ಶೂನ್ಯವಾಗಿದೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 45,117 ಮಂದಿ ಭಾರತೀಯರು ಹಾಗೂ 75 ಮಂದಿ ವಿದೇಶಿ ಪ್ರವಾಸಿಗರು ರಾಜಾಸೀಟಿಗೆ ಭೇಟಿ ನೀಡಿದ್ದರು. ಏಪ್ರಿಲ್ ತಿಂಗಳಿನಲ್ಲಿ 65,600 ಮಂದಿ ಭಾರತೀಯರು ಹಾಗೂ 180 ವಿದೇಶಿಯರು ಹಾಗೂ ಮೇ ತಿಂಗಳಿನಲ್ಲಿ 1,08,054 ಭಾರತೀಯರು, 170 ವಿದೇಶಿಯರು ರಾಜಾಸೀಟಿಗೆ ಭೇಟಿ ನೀಡಿದ್ದರು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಮಾಹಿತಿಯಿತ್ತಿದ್ದಾರೆ.
ಸ್ತಬ್ಧಗೊಂಡ ಅಬ್ಬಿ
ಕೆ.ನಿಡುಗಣೆ ಗ್ರಾ.ಪಂ ವ್ಯಾಪ್ತಿಯ ಅಬ್ಬಿ ಜಲಪಾತವು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದ್ದು, ವರ್ಷಪೂರ್ತಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿರುವ 5 ಅಂಗಡಿ-ಮಳಿಗೆಗಳಿಂದ ಹಾಗೂ ಪಾರ್ಕಿಂಗ್ ವ್ಯವಸ್ಥೆಯಿಂದ ಕೆ.ನಿಡುಗಣೆ ಗ್ರಾ.ಪಂ. ಗೆ ಆದಾಯ ಬರುತ್ತದೆ.
ಪಾರ್ಕಿಂಗ್ ಸೌಲಭ್ಯಕ್ಕೆ ವಾರ್ಷಿಕ ರೂ.22 ಲಕ್ಷಕ್ಕೆ ಟೆಂಡರ್ ಕರೆಯಲಾಗಿತ್ತು. ಇದಕ್ಕೆ ಯಾರೂ ಒಪ್ಪದ ಕಾರಣ ತಿಂಗಳಿಗೆ ರೂ.2 ಲಕ್ಷದಂತೆ ಟೆಂಡರ್ ವ್ಯವಸ್ಥೆಯಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಈ ಮೂರು ತಿಂಗಳುಗಳಲ್ಲಿ ಪ್ರವಾಸಿಗರಿಲ್ಲದ ಕಾರಣ ರೂ.1 ಕೂಡ ಪಂಚಾಯಿತಿಗೆ ದೊರೆತಿಲ್ಲ ಎಂದು ಕೆ.ನಿಡುಗಣೆ ಗ್ರಾ.ಪಂ ಅಧ್ಯಕ್ಷೆ ರೀಟಾ ಮಂದಣ್ಣ ತಿಳಿಸಿದ್ದಾರೆ. ಇದೇ ರೀತಿ ಒಟ್ಟು ಇರುವ 5 ಮಳಿಗೆಗಳಲ್ಲಿ ಒಂದು ಮಳಿಗೆಯನ್ನು ಪಾರ್ಕಿಂಗ್ ಟಿಕೇಟ್ ವ್ಯವಸ್ಥೆಗೆ ಬಳಸಲಾಗುತ್ತಿದೆ. ಮತ್ತೊಂದು ಮಳಿಗೆ ಪಂಚಾಯಿತಿಯದ್ದೇ ಆಗಿದ್ದು, ಇನ್ನುಳಿದ 3 ಮಳಿಗೆಗಳಿಂದ ಬರುತ್ತಿದ್ದ ಮಾಸಿಕ ರೂ.20,000 ಪಂಚಾಯಿತಿಗೆ 3 ತಿಂಗಳ ಅವಧಿಯಲ್ಲಿ ಪಾವತಿಯಾಗಿಲ್ಲ. ಈ ಸಮಸ್ಯೆಗಳ ಕುರಿತು ಜೂನ್‍ನಲ್ಲಿ ಪಂಚಾಯಿತಿ ಸಭೆಯಲ್ಲಿ ಚರ್ಚಿಸಲಾಗುವುದು. ಆದರೆ ಜೂನ್ ಅಂತ್ಯದೊಳಗೆ ಪಂಚಾಯಿತಿ ಅವಧಿ ಮುಗಿಯಲಿದ್ದು, ಆಡಳಿತ ವ್ಯವಸ್ಥೆ ಬದಲಾದರೆ ಸವiಸ್ಯೆಗಳನ್ನು ಬಗೆಹರಿಸಲು ಕಷ್ಟವಾಗಲಿದೆ. ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ ಎಂದು ರೀಟಾ ಅವರು ‘ಶಕ್ತಿ’ಯೊಂದಿಗೆ ಹೇಳಿಕೊಂಡಿದ್ದಾರೆ.
ನಿಶ್ಚಲ ದುಬಾರೆ-ನಿಸರ್ಗಧಾಮ
ಅರಣ್ಯ ಇಲಾಖೆಗೆ ಸೇರಿರುವ ದುಬಾರೆ ಹಾಗೂ ನಿಸರ್ಗಧಾಮಗಳ ನಿರ್ವಹಣಾ ಕಾರ್ಯ ಸದಾ ನಡೆಯಬೇಕಿದ್ದು, ಪ್ರವಾಸಿಗರಿಲ್ಲದೆ ಇದು ಕಷ್ಟದ ಕಾರ್ಯವಾಗಿದೆ.
ಕಳೆದ ವರ್ಷ ನಿಸರ್ಗಧಾಮಕ್ಕೆ, ಮಾರ್ಚ್ ತಿಂಗಳಿನಲ್ಲಿ 26,852 ಭಾರತೀಯರು, 150 ವಿದೇಶಿಯರು, ಏಪ್ರಿಲ್ ತಿಂಗಳಿನಲ್ಲಿ 39,753 ಭಾರತೀಯರು, 210 ವಿದೇಶಿಯರು ಹಾಗೂ ಮೇ ನಲ್ಲಿ 52,702 ಭಾರತೀಯರು, 240 ವಿದೇಶಿಯರು ಭೇಟಿ ನೀಡಿದ್ದು ರೂ.4 ಲಕ್ಷ, ರೂ.6 ಲಕ್ಷ ಹಾಗೂ ರೂ.8 ಲಕ್ಷ ಈ 3 ತಿಂಗಳುಗಳಲ್ಲಿ ಕ್ರಮವಾಗಿ ಸಂಗ್ರಹಾತಿ ಆಗಿತ್ತು ಎಂದು ವಲಯ ಅರಣ್ಯಾಧಿಕಾರಿ ಹಾಗೂ ನಿಸರ್ಗಧಾಮದ ಉಸ್ತುವಾರಿ ವಿಕಾಸ್ ಅವರು ಮಾಹಿತಿ ನೀಡಿದ್ದಾರೆ.
ಪ್ರವಾಸಿಗರಿಂದ ಪಡೆಯುತ್ತಿದ್ದ ಆಗಮನ ಶುಲ್ಕ ಹಾಗೂ 6 ಬೋಟ್‍ಗಳಿದ್ದು, ಬೋಟಿಂಗ್ ಮೂಲಕ ರೂ.100, 200 ರಂತೆ ಸಂಗ್ರಹಾತಿ ಆಗುತ್ತಿದ್ದ ಹಣ ಹಾಗೂ ಖಾಸಗಿ ವ್ಯಕ್ತಿಯೋರ್ವರು ‘ಝಿóಪ್‍ಲೈನ್’ ವ್ಯವಸ್ಥೆ ಕಲ್ಪಿಸಿದ್ದು, ಇದಕ್ಕೆ ತಿಂಗಳ ಬಾಡಿಗೆ ರೂ.30,000 ನಿಸರ್ಗಧಾಮಕ್ಕೆ ಮೂಲ ಆದಾಯವಾಗಿದೆ. ಈ 3 ತಿಂಗಳುಗಳಲ್ಲಿ ಯಾವುದೇ ಆದಾಯ ಬರದಿದ್ದರೂ, 8 ಜನ ದಿನಗೂಲಿ ನೌಕರರು ಸೇರಿದಂತೆ ಒಟ್ಟು 13 ಮಂದಿ ಪ್ರವಾಸಿ ಕೇಂದ್ರದ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ವಿಕಾಸ್ ಮಾಹಿತಿ ನೀಡಿದ್ದಾರೆ.
ಮತ್ತೊಂದು ಪ್ರಮುಖ ಪ್ರವಾಸಿ ತಾಣ ದುಬಾರೆಯಲ್ಲಿ 2019 ನೇ ಸಾಲಿನ ಮಾರ್ಚ್, ಏಪ್ರಿಲ್, ಮೇ ತಿಂಗಳುಗಳಲ್ಲಿ ರೂ. 17,40,000 ದಷ್ಟು ಹಣ ಸಂಗ್ರಹಾತಿ ಆಗಿದೆ ಎಂದು ವಲಯ ಅರಣ್ಯಾಧಿಕಾರಿ ಹಾಗೂ ದುಬಾರೆಯ ಉಸ್ತುವಾರಿ ರÀಂಜನ್ ಅವರು ‘ಶಕ್ತಿ’ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ರ್ಯಾಫ್ಟಿಂಗ್, ಬೋಟಿಂಗ್, ಸಾಕಾನೆ ಶಿಬಿರ ಪ್ರವಾಸಿಗರ ಮನಸೆಳೆಯುತ್ತಿತ್ತು. ಇದೀಗ ನಿರ್ವಹಣಾ ಕಾರ್ಯದಲ್ಲಿ ಅಲ್ಲಿನ ಸಿಬ್ಬಂದಿ ತೊಡಗಿದ್ದು, ಪ್ರತಿದಿನ ರೂ.5,000 ದಷ್ಟು ಖರ್ಚು ಆಗುತ್ತದೆ ಎಂದು ರಂಜನ್ ತಿಳಿಸಿದ್ದಾರೆ.
“ದುಬಾರೆ 30 ವರ್ಷಗಳ ಹಿಂದೆ ಇದ್ದ ಹಾಗೆ ಅನಾಥವಾಗಿದೆ. ನಾನು ಈಗ ಸ್ವಂತ ತೋಟ ನೋಡಿಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ” ಎಂದು ಅಲ್ಲಿನ ಉದ್ಯಮಿ ರತೀಶ್ ವೇದನೆ ಹಂಚಿಕೊಂಡಿದ್ದಾರೆ.
ಇರ್ಪು: ಶೂನ್ಯ ವಹಿವಾಟು
ಜಿಲ್ಲೆಯ ಇನ್ನೊಂದು ಪ್ರಸಿದ್ಧ ಜಲಪಾತ ಇರ್ಪು ಜಲಪಾತಕ್ಕೆ 2019 ಮಾರ್ಚ್‍ನಲ್ಲಿ 6,514 ಭಾರತೀಯರು, 115 ವಿದೇಶಿಯರು, ಏಪ್ರಿಲ್‍ನಲ್ಲಿ 11,807 ಭಾರತೀಯರು, 53 ವಿದೇಶಿಯರು ಹಾಗೂ ಮೇ ತಿಂಗಳಿನಲ್ಲಿ 15,523 ಭಾರತೀಯರು, 19 ವಿದೇಶಿಯರು ಭೇಟಿ ನೀಡಿದ್ದರು. ಈ ಪೈಕಿ ಸುಮಾರು ರೂ.9 ಲಕ್ಷದಷ್ಟು ಹಣ ಸಂಗ್ರಹವಾಗಿತ್ತು. ಈ ವರ್ಷ 3 ತಿಂಗಳಿನಲ್ಲಿ ವಹಿವಾಟು ಸ್ಥಗಿತಗೊಂಡಿದೆ ಎಂದು ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ಮಾಹಿತಿ ಇತ್ತಿದ್ದಾರೆ.
ತಲಕಾವೇರಿ
ಮುಜರಾಯಿ ಇಲಾಖೆಯಡಿ ಬರುವ ಹಲವು ದೇಗುಲಗಳಲ್ಲಿ ಪುಣ್ಯಕ್ಷೇತ್ರ ತಲಕಾವೇರಿಯೂ ಒಂದು. ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲ ದೇವಾಲಯಕ್ಕೆ ಸಿಬ್ಬಂದಿ ವೇತನ, ನೈವೇದ್ಯ, ಪೂಜೆ ಸೇರಿದಂತೆ ಇತರ ನಿರ್ವಹಣಾ ಕೆಲಸಗಳಿಗೆ ಮಾಸಿಕ ರೂ.4 ರಿಂದ 4.5 ಲಕ್ಷ ಬೇಕಾಗುತ್ತದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಕಾರ್ಯನಿರ್ವಾಹಕ ಜಗದೀಶ್ ಹೇಳಿದ್ದಾರೆ.ಇದೀಗ ಅನ್ನದಾನ ಸ್ಥಗಿತಗೊಂಡಿರುವುದರಿಂದ ಅದಕ್ಕೆ ತಗಲುತ್ತಿದ್ದ ಪ್ರತ್ಯೇಕ ರೂ.2 ಲಕ್ಷ ಮಾಸಿಕ ವೆಚ್ಚ ಈಗ ಬೇಕಾಗಿಲ್ಲ. ಆದರೆ, ಉಳಿದಂತೆ ಖರ್ಚು ವೆಚ್ಚಗಳನ್ನು ಬ್ಯಾಂಕಿನಲ್ಲಿರಿಸಿದ್ದ ಹಣದಿಂದ ಭರಿಸಲಾಗುತ್ತಿದೆ ಎಂದು ತಿಳಿಸಿದರು.
2019 ರ ಮಾರ್ಚ್ ತಿಂಗಳಲ್ಲಿ ರೂ.4,64,541 ಏಪ್ರಿಲ್‍ನಲ್ಲಿ ರೂ.2,83,456 ಹಾಗೂ ಮೇನಲ್ಲಿ ಅಧಿಕ ಪ್ರವಾಸಿಗರು ಬಂದಿದ್ದು ರೂ. 10,75,555 ದೇವಸ್ಥಾನ ಸಮಿತಿಯ ಆದಾಯಕ್ಕೆ ಸೇರಿತ್ತು. ಈ ವರ್ಷದ 3 ತಿಂಗಳುಗಳಲ್ಲಿ ಯಾವುದೇ ಆದಾಯ ಬಾರದೆ ಇದ್ದರು, ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಿಂದ ಪಿಂಡ ಪ್ರದಾನ ಹಾಗೂ ಮುಡಿ ತೆಗೆಯಲು ವ್ಯವಸ್ಥೆ ಹಾಗೂ ದೇವಾಲಯ ತಾಮ್ರದ ಹೊದಿಕೆ ದುರಸ್ತಿ ಕಾರ್ಯಗಳು ಸುಮಾರು ರೂ.106 ಲಕ್ಷ ವೆಚ್ಚದಲ್ಲಿ ನಡೆಯುತ್ತಿದೆ ಎಂದು ಜಗದೀಶ್ ಮಾಹಿತಿ ನೀಡಿದ್ದಾರೆ.
ಒಟ್ಟು 30,715 ಭಾರತೀಯರು, 85 ವಿದೇಶಿಯರು 2019 ಮಾರ್ಚ್ ತಿಂಗಳಿನಲ್ಲಿ ತಲಕಾವೇರಿ, ಭಾಗಮಂಡಲಕ್ಕೆ ಭೇಟಿ ನೀಡಿದ್ದಾರೆ. ಏಪ್ರಿಲ್‍ನಲ್ಲಿ 70,500 ಭಾರತೀಯರು, 210 ವಿದೇಶಿಯರು ಹಾಗೂ ಮೇ ತಿಂಗಳಿನಲ್ಲಿ 65,750 ಭಾರತೀಯರು, 160 ವಿದೇಶಿಯರು ತಲಕಾವೇರಿ, ಭಾಗಮಂಡಲಕ್ಕೆ ಭೇಟಿ ನೀಡಿರುವುದಾಗಿ ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.
ನಗರದ ಐತಿಹಾಸಿಕ ದೇವಾಲಯ ಓಂಕಾರೇಶ್ವರದಲ್ಲಿ ಕಳೆದ ವರ್ಷ ಮಾರ್ಚ್‍ನಿಂದ ಮೇ ವರೆಗೆ 9 ಲಕ್ಷದಷ್ಟು ಹಣ ಸಂಗ್ರಹಾತಿ ಆಗಿದೆ. ಪ್ರಸಕ್ತ 3 ತಿಂಗಳಿನಲ್ಲಿ ನಿತ್ಯ ಪೂಜೆ ಕೇವಲ ಅರ್ಚಕರ ಹಾಜರಾತಿಯಲ್ಲಿ ಮಾತ್ರ ನಡೆಯುತ್ತಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಪುಲಿಯಂಡ ಜಗದೀಶ್ ತಿಳಿಸಿದ್ದಾರೆ.
ಹೋಂಸ್ಟೇ, ಹೊಟೇಲ್‍ಗಳಿಗೆ ನಷ್ಟ
ಜಿಲ್ಲೆಯಾದ್ಯಂತ 1065 ಹೋಂಸ್ಟೇಗಳು ನೋಂದಣಿಗೆ ಮುಂದಾಗಿದ್ದು, ಈ ಪೈಕಿ 798 ಹೋಮ್‍ಸ್ಟೇಗಳು ಮಾತ್ರ ಪ್ರವಾಸೋದ್ಯಮ ಇಲಾಖೆಗೆ ಹಣ ಪಾವತಿಸಿವೆ. ಇದರಲ್ಲಿ 396 ಮಾತ್ರ ಇಲಾಖೆಯಿಂದ ಪರಿಶೀಲನೆಗೊಂಡಿದ್ದು ಅಧಿಕೃತ ಎಂದು ಘೋಷಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ರಾಘವೇಂದ್ರ ಮಾಹಿತಿ ಇತ್ತಿದ್ದಾರೆ. ಜಿಲ್ಲೆಯಾದ್ಯಂತ ಇರುವ ಅಧಿಕೃತ ಹೋಂಸ್ಟೇಗಳಿಗೆ ಲಾಕ್‍ಡೌನ್‍ನಿಂದ ಸುಮಾರು ರೂ.3 ಕೋಟಿಯಷ್ಟು ನಷ್ಟವಾಗಿದೆ ಎಂದು ಜಿಲ್ಲಾ ಹೋಂಸ್ಟೇ ಸಂಘದ ಅಧ್ಯಕ್ಷ ಬಿ.ಜಿ ಅನಂತಶಯನ ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಈ ಸಂಸ್ಥೆಯೊಂದಿಗೆ ಜಿಲ್ಲೆಯಾದ್ಯಂತ ಒಟ್ಟು 280 ಉದ್ಯಮಗಳು ನೋಂದಾಯಿಸಿಕೊಂಡಿವೆ ಎಂದು ತಿಳಿಸಿದ್ದಾರೆ. ಪ್ರತಿನಿತ್ಯ ಈ ಉದ್ಯಮಗಳು ಸುಮಾರು 2.5 ಕೋಟಿಯಷ್ಟು ನಿತ್ಯ ವ್ಯವಹಾರ ನಡೆಸುತ್ತಿದ್ದವು ಎಂದು ಅಧ್ಯಕ್ಷರು ನೆನಪಿಸಿಕೊಂಡಿದ್ದಾರೆ.
ಮುಂದೇನು..?
ಜೂನ್ 8 ರಿಂದ ಜಿಲ್ಲೆಯಲ್ಲೂ ಆತಿಥ್ಯ ಕ್ಷೇತ್ರದ ಪುನರಾರಂಭಕ್ಕೆ ಸರಕಾರ ಅನುಮತಿ ನೀಡಿದೆಯಾದರೂ ಭವಿಷ್ಯದ ಬಗ್ಗೆ ಉದ್ಯಮಿಗಳಿಗೆ ಚಿಂತೆ ಇದೆ. ತಕ್ಷಣವೇ ಮಳೆಗಾಲವೂ ಆರಂಭವಾಗುವುದರಿಂದ ಸಹಜವಾಗಿಯೆ ವಹಿವಾಟು ಕುಂಠಿತಗೊಳ್ಳಲಿದೆ. ಜೊತೆಗೆ ಸರಕಾರ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಷರತ್ತುಗಳನ್ನು ವಿಧಿಸಿದ್ದು, ಇವನೆಲ್ಲ ಸಣ್ಣಪುಟ್ಟ ಹೋಂಸ್ಟೇ ವ್ಯವಸ್ಥೆಯಂತಹ ಉದ್ಯಮಿಗಳು, ಹೊಟೇಲ್‍ಗಳು ಅಳವಡಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಕೂಡ ಅನೇಕರಿಗೆ ಮೂಡಿದೆ. ಕೊರೊನಾ ಭೀತಿಯಿಂದ ಹಿಂದೆ ಬರುತ್ತಿದ್ದ ದೇಶ - ವಿದೇಶಗಳ ಪ್ರವಾಸಿಗರು ಜಿಲ್ಲೆಗೆ ಬರುತ್ತಾರೆಯೇ, ಬಂದರೂ ಸುರಕ್ಷಿತವೇ. ಇಂತಹವರ ಆತಿಥ್ಯ ಮಾಡುವ ಸಂದರ್ಭ ತಮ್ಮ ಸಂಸ್ಥೆಯ ನೌಕರರ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಸರಕಾರದ ಸೂಚನೆಗಳನ್ನು ಪಾಲಿಸುವಂತೆ ಅತಿಥಿಗಳಿಗೆ ಹೇಳಿದಾಗ ಅವುಗಳನ್ನು ಅನುಸರಿಸಲು ಒಪ್ಪದಿದ್ದಲ್ಲಿ ಏನು? 5ನೇ ಲಾಕ್‍ಡೌನ್‍ನಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ವಿಧಿಸಿರುವ ನಿಷೇಧಾಜ್ಞೆಯ ಸಂದರ್ಭದಲ್ಲಿ ಅವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕಾದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಮೊದಲಿನಂತೆಯೆ ನಿರ್ಬಂಧ ಹೇರಿದಂತಾಗುವದಿಲ್ಲವೇ? ಹೀಗೆ ಹತ್ತು - ಹಲವು ಪ್ರಶ್ನೆಗಳು ಈ ಕ್ಷೇತ್ರದ ಉದ್ಯಮಿಗಳನ್ನು ಕಾಡುತ್ತಿವೆ. ಜೊತೆಗೆ ಚೇತರಿಕೆಯ ಭರವಸೆ ಇಲ್ಲದೆ ಪೂರ್ಣ ಪ್ರಮಾಣದಲ್ಲಿ ನೌಕರರನ್ನು ನೇಮಿಸಿಕೊಳ್ಳಬೇಕೆ? ಎಂಬ ಜಿಜ್ಞಾಸೆ ಕೂಡ ಇದೆ. ಸ್ವಚ್ಛವಾಗಿರುವ ಕೊಡಗಿನಲ್ಲಿ ಪ್ರವಾಸಿಗರು ಬಂದು ಅಶಿಸ್ತಿನಲ್ಲಿ ವರ್ತಿಸದೆ ಕೊಡಗಿನ ಸುರಕ್ಷತೆ ಹಾಗೂ ಆರೋಗ್ಯ ಕೂಡ ಸರಿಯಿರುವಂತಾಗಬೇಕು ಎಂಬದು ಈ ಕ್ಷೇತ್ರದ ಅನುಭವಸ್ಥರ ಆಶಯ ಕೂಡ ಆಗಿದೆ.
- ಜಿ.ಆರ್. ಪ್ರಜ್ವಲ್