ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭಕ್ಕೆ ವಾರಗಳ ಮುನ್ನ ಕಾರ್ಮೋಡಗಳು ಕಂಡು ಬರುತ್ತದೆ. ಇನ್ನು ಮೂರು ತಿಂಗಳು ಮಳೆಯೋ ಮಳೆ ಎಂಬುದರ ಸಂಕೇತವಿದು. ಈ ವರ್ಷ ಕೊಡಗಿನ ಜನರ ಮನಸ್ಸಿನ ಪಾಲಿಗೆ ಕಾರ್ಮೋಡಗಳು ಎರಡು ತಿಂಗಳ ಮೊದಲೇ ಆವರಿಸಿಬಿಟ್ಟಿದೆ. ಲಾಕ್‍ಡೌನ್ ಸಂಕಷ್ಟದಿಂದಾಗಿ ಆರ್ಥಿಕತೆಯ ಬಿಕ್ಕಟ್ಟು ಕಾರ್ಮೋಡದ ರೀತಿ ಎಲ್ಲಾ ಉದ್ಯಮಿಗಳಲ್ಲೂ ಕವಿದಿದೆ. ಏಪ್ರಿಲ್-ಮೇ ತಿಂಗಳಲ್ಲಿ ಕೊಡಗಿನಲ್ಲಿ ಇಡೀ ವರ್ಷದ ವಹಿವಾಟು ಚೇತರಿಸಿಕೊಳ್ಳುವ ಸಮಯ. ಮಳೆಗಾಲದಲ್ಲಿ ಹೇಗಿದ್ದರೂ ವಹಿವಾಟಿಲ್ಲ. ಆದರೆ ಬೇಸಿಗೆಯಲ್ಲಿ ಉತ್ತಮ ವಹಿವಾಟಿನ ಮೂಲಕ ಮುಂದಿನ ತಿಂಗಳುಗಳ ನಷ್ಟವನ್ನು ಎದುರಿಸಲು ಕೊಡಗಿನ ವರ್ತಕರು ಸಿದ್ಧರಾಗುತ್ತಿದ್ದ ಸಮಯ. ಆದರೀಗ, ಯಾರಲ್ಲೂ ಚೈತನ್ಯವಿಲ್ಲ, ಉಲ್ಲಾಸವಿಲ್ಲ ಯಾರನ್ನೂ ಕೇಳಿದರೂ 2020ನೇ ವರ್ಷ ನಮ್ಮ ಪಾಲಿಗೆ ಮುಗಿದೇ ಹೋಗಿದೆ. ಮುಂದೆ ಹೇಗೆ ಜೀವನ ಸಾಗಿಸುವುದು ಎಂಬ ಚಿಂತೆಯ ಮಾತೇ ಕೇಳಿಬರುತ್ತಿದೆ.

ಭಾರತದ ರಾಷ್ಟ್ರಪತಿಯಾಗಿದ್ದ ಸಂದರ್ಭ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕಂಡಿದ್ದ 2020ನೇ ಅಭಿವೃದ್ಧಿಯ ಭಾರತದ ಸಂಕಲ್ಪ ಈ ವರ್ಷ ಭವಿಷ್ಯದ ಭಾರತದ ಬದಲಿಗೆ 20-30 ವರ್ಷಗಳ ಹಿಂದಿನ ಭಾರತಕ್ಕೆ ತೆರಳುವಂತೆ ಮಾಡಿದೆ. ಉಪಗ್ರಹಗಳನ್ನು ಉಡಾವಣೆ ಮಾಡುವುದು, ಚಂದಿರನ ಅಂಗಳದಲ್ಲಿ ಹೆಜ್ಜೆಯಿಡುವುದು, ಸಶಕ್ತ ಭಾರತ ಎಂಬೆಲ್ಲಾ ಕನಸುಗಳ ಸಾಕಾರದ ಬದಲಿಗೆ ಮಕ್ಕಳಿಗೆ ಹೇಳುವಂತೆ ಕೈತೊಳೆದುಕೊಳ್ಳಿ, ಮುಖ ಮುಚ್ಚಿಕೊಳಿ, ಉಗುಳಬೇಡಿ ಎಂಬ ಸ್ವಚ್ಛತೆಯ ಪ್ರಾಥಮಿಕ ಹಂತಗಳನ್ನು ದೊಡ್ಡವರಿಗೆ ಹೇಳಿಕೊಡುವ ದುಸ್ಥಿತಿಗೆ ದೇಶವಾಸಿಗಳು ತಲುಪಿಬಿಟ್ಟಿದ್ದೇವೆ. 2018 ಮತ್ತು 2019ರಲ್ಲಿ ಹಿಂದೆಂದೂ ಕಾಣದಂತೆ ಪ್ರಕೃತಿ ವಿಕೋಪ ಕಂಡಿದ್ದ ಕೊಡಗು ಜಿಲ್ಲೆಯ ಪಾಲಿಗೆ ಸತತ ಮೂರನೇ ವರ್ಷ ಆರ್ಥಿಕ ಸಂಕಷ್ಟ ಎದುರಾಗಿದೆ. ಮಳೆ ವಿಕೋಪದ ಸವಾಲು ಎದುರಿಸಿ ಮತ್ತೆ ಪುಟಿದೇಳುತ್ತಿದ್ದ ಸಂದರ್ಭವೇ ಕೊಡಗಿನ ಪಾಲಿಗೆ ಮತ್ತೊಂದು ಸವಾಲು ಎದುರಾಗಿದೆ. ಈ ಸಮಸ್ಯೆಯಿಂದ ಕೊಡಗು ಮತ್ತೆ ಮೇಲೇಳುವುದೇ ?

ಕೊಡಗು ಜಿಲ್ಲೆ ಮಳೆ ವಿಕೋಪ ಎದುರಿಸಿದ್ದ ಸಂದರ್ಭ ಇಡೀ ದೇಶವೇ ತನ್ನ ಪುಟ್ಟ ಸಹೋದರ ಜಿಲ್ಲೆಯ ನೆರವಿಗೆ ಧಾವಿಸಿತ್ತು. ಕೊಡಗಿನ ಜನ ನಮ್ಮವರು ಎಂದು ನಮ್ಮ ಕೈಹಿಡಿದು ಪ್ರಪಾತದಿಂದ ಮೇಲೇಳಲು ಸಹಾಯ ಮಾಡಿದ್ದರು. ಆದರೆ ಈ ಬಾರಿ ಇಡೀ ಜಗತ್ತೇ ಕೊರೊನಾ ಸುಳಿಗೆ ಸಿಲುಕಿ ನಲುಗಿದೆ. ಪ್ರತಿಯೋರ್ವರಿಗೂ ನೆರವು ಬೇಕಾದ ಸ್ಥಿತಿಯಲ್ಲಿ ಕೊಡಗಿನ ಸಹಾಯಕ್ಕೆ ಯಾರಾದರೂ ಬಂದಾರು ಎಂಬುದನ್ನು ನಿರೀಕ್ಷಿಸುವುದೇ ತಪ್ಪಾಗುತ್ತದೆ. ಹೀಗಾಗಿ ದೇಶದ ಪುಟ್ಟ ಜಿಲ್ಲೆ ತನ್ನ ಸ್ವಂತ ಶಕ್ತಿಯ ಆಧಾರದಲ್ಲಿ ಮತ್ತೆ ಮೇಲೇಳಲೇ ಬೇಕಾಗಿದೆ. ಪುಟಿದೇಳಬೇಕಾಗಿದೆ. ಭಾರತದ ವೀರಸೇನಾನಿಗಳ, ಧೀರಶೂರರ ನಾಡು ತನ್ನಲ್ಲಿನ ನೈಜ ಶಕ್ತಿಯನ್ನು ತೋರಿಸಲು ಕೊರೊನಾ ಸಂಕಷ್ಟ ಈಗ ಅವಕಾಶ ಮಾಡಿಕೊಟ್ಟಿದೆ. ಇಷ್ಟೊಂದು ಸಂಕಷ್ಟದ ನಡುವೇ ಕೊಡಗು ಮತ್ತೆ ಆರ್ಥಿಕವಾಗಿ ಮೇಲೇಳಲು ಸಾಧ್ಯವೇ ?

ಖಂಡಿತಾ ಸಾಧ್ಯವಿದೆ. ಕೊಡಗಿನ ಜನರ ತಾಳ್ಮೆ ಜಾಸ್ತಿಯೇ ಇದೆ. ಸೈರಣಾ ಶಕ್ತಿ ಕೊಡಗಿನವರಲ್ಲಿ ಹೆಚ್ಚೇ ಇದೆ. ಈ ಸಹನೆ, ತಾಳ್ಮೆಯೇ ಸಂಕಷ್ಟದÀ ಸಂದರ್ಭಗಳಲ್ಲಿಯೂ ಕೊಡಗಿನವರನ್ನು ವಿಷಾದ ಖಿನ್ನತೆಯಿಂದ ಕಾಪಾಡಿದ್ದು. ಸರಿಯಾಗಿ ಚಿಂತಿಸು-ಯೋಚಿಸು ಮುಂದೆ ಒಳ್ಳೆಯ ದಿನಗಳು ಬಂದೇ ಬರುತ್ತದೆ ಎಂಬ ಆಶಾಭಾವನೆ ಮೂಡಿಸಿದ್ದು. ಕೊಡಗು ಎಲ್ಲಾ ರಂಗ ಗಳಲ್ಲಿಯೂ ಮೇಲೇಳಲು ಸಾಧ್ಯವಿದೆ. ಆದರೆ ಸ್ವಂತಿಕೆಯ ಗುಣ ಮುಖ್ಯವಾಗ ಬೇಕಷ್ಟೆ. ನಾವೇ ನಮ್ಮವರ ಕಾಲೆಳೆಯದೇ ನಮ್ಮವರನ್ನು ನಾವೇ ಬೆಳೆಸಲು ಮುಂದಾಗಬೇಕಾಗಿದೆ. ಕೊಡಗು ಕಳೆದ 1 ದಶಕದಿಂದ ಪ್ರವಾಸೋದ್ಯಮವನ್ನೇ ಮುಖ್ಯವಾಗಿ ಅವಲಂಬಿಸಿದೆ. ಯಾರು ಏನೇ ಹೇಳಿದರೂ ಪ್ರವಾಸೋದ್ಯಮವೇ ಕೊಡಗಿನ ಬಹುತೇಕ ಜನತೆಯ ಪಾಲಿಗೆ ವರಮಾನ, ವರದಾನ ನೀಡುವ ಉದ್ಯಮವಾಗಿದೆ.

ಹೀಗಿರುವಾಗ ಹೊಸ ರೀತಿಯಲ್ಲಿ ಕೊಡಗು ಪ್ರವಾಸೋದ್ಯಮದ ಕಾಯಕಲ್ಪಕ್ಕೆ ಇದು ಸರಿಯಾದ ಸಮಯ. ಈಗಿರುವ ಪ್ರವಾಸಿ ತಾಣಗಳ ಜತೆಯೇ ಮತ್ತಷ್ಟು ಹೊಸ ತಾಣಗಳನ್ನು ಕಂಡುಹುಡುಕಬೇಕಾಗಿದೆ. ಇರುವ ತಾಣಗಳಲ್ಲಿ ಹೊಸ ತಲೆಮಾರಿನ, ಕೋವಿಡ್ ನಂತರದ ದಿನಗಳ ಪ್ರವಾಸೀ ಮನಸ್ಥಿತಿಗೆ ತಕ್ಕಂತೆ ಸೌಲಭ್ಯ ಕಲ್ಪಿಸಬೇಕಾಗಿದೆ. ಕೊಡಗಿನ ಸಂಸ್ಕøತಿ, ಪರಿಸರ ವನ್ನು ಪ್ರವಾಸಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಹೊಸ ಚಿಂತನೆಗಳು ಮೂಡಬೇಕಾಗಿದೆ.

ವಿದೇಶ ಪ್ರವಾಸ ತೆರಳುವುದು ಇನ್ನು ಕೆಲವು ವರ್ಷ ಸಾಧ್ಯವಾಗದ ಕಾರಣದಿಂದ ಪ್ರವಾಸಿಗರು ಖಂಡಿತಾ ದೇಶದೊಳಗೇ ಸುತ್ತುತ್ತಾರೆ. ಇಂಥ ಪ್ರವಾಸಿಗರನ್ನು ಕೊಡಗಿಗೆ ಸೆಳೆಯುವ ಪ್ರಯತ್ನ ನಡೆಯ ಬೇಕಾಗಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಇದೀಗ ‘‘ಲವ್ ಯುವರ್ ನೇಟಿವ್’’ ಎಂಬ ಯೋಜನೆ ಮೂಲಕ ನಿಮ್ಮೂರಿನಲ್ಲಿರುವ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕಳುಹಿಸುವ ಚಿಂತನೆಗೆ ಮುಂದಾಗಿದೆ. ಕೊಡಗಿನಲ್ಲಿಯೂ ಈ ಯೋಜನೆ ಪರಿಸರ ಸ್ನೇಹಿಯಾಗಿ ಜಾರಿಯಾಗಬೇಕಾಗಿದೆ.

ಕೊಡಗಿನ ನಿಸರ್ಗದ ಮಧ್ಯೆ ಯೋಗ, ಧ್ಯಾನ, ಚಾರಣಗಳಂಥ ವಿನೂತನ ಪ್ರವಾಸೀ ಯೋಜನೆ ಜಾರಿಗೆ ಇದು ಸಕಾಲ. ಅಂತೆಯೇ ತೋಟಗಳ ನಡುವಿನ ಕೆರೆಗಳಲ್ಲಿ ಗಾಳಹಾಕಿ ಮೀನುಹಿಡಿಯುವ ಪ್ರವಾಸೋದ್ಯಮಕ್ಕೂ ಬೇಡಿಕೆ ದೊರಕುವುದು ಖಂಡಿತಾ. ಸಾಹಸ ಆಧಾರಿತ ಪ್ರವಾಸೋದ್ಯಮ ಕೊಡಗಿನಲ್ಲಿ ಹೊಸರೂಪದೊಂದಿಗೆ ಜಾರಿಗೊಳ್ಳಬೇಕಾಗಿದೆ.

ಕೊಡಗಿಗೆ ಬರುವ ಯಾರಿಗೆ ಆಗಲಿ, ಕೊಡಗು ಸುರಕ್ಷಿತ ಜಿಲ್ಲೆ, ಅಂತೆಯೇ ಕೊಡಗಿನ ಪರಿಸರ ಮತ್ತು ನದಿ-ತೊರೆಗಳನ್ನು ಕಾಪಾಡುವುದು ನಿಮ್ಮೆಲ್ಲರ ಆದ್ಯತೆಯಾಗಿರಲಿ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ಮನದಟ್ಟು ಮಾಡುವ ಅಗತ್ಯವೂ ಮುಂದಿನ ದಿನಗಳಲ್ಲಿದೆ. ಇಡೀ ದೇಶದಲ್ಲಿಯೇ ಕೊರೊನಾ ನಿಯಂತ್ರಣದಲ್ಲಿರುವ ಜಿಲ್ಲೆಗಳಲ್ಲಿ ಕೊಡಗು ಕೂಡ ಒಂದು. ಹೀಗಾಗಿ ಭವಿಷ್ಯದಲ್ಲಿ ಕೊಡಗನ್ನು ಸುರಕ್ಷಿತ ಜಿಲ್ಲೆ ಎಂದು ಭಾವಿಸಿ ಪ್ರವಾಸಿಗರು ಇತ್ತ ಬಂದೇ ಬರುತ್ತಾರೆ. ಕೆಲವು ವರ್ಷಗಳ ಹಿಂದೆ ದೇಶದಲ್ಲಿ ಸುನಾಮಿ ಪ್ರಕೋಪ ಕಂಡುಬಂದಾಗ ಕಡಲತೀರದಿಂದ ಪ್ರವಾಸಿಗರು ಕೊಡಗಿನತ್ತ ಧಾವಿಸಿದ್ದರು. ಆಗಲೇ ಕೊಡಗಿನ ಪ್ರವಾಸೋದ್ಯಮಕ್ಕೆ ಚೇತರಿಕೆ ಸಿಕ್ಕಿತ್ತು. ಇದೇ ರೀತಿ ಮುಂದಿನ ತಿಂಗಳಿನಲ್ಲಿ ಪ್ರವಾಸಿಗರು ಮತ್ತೊಮ್ಮೆ ಸುನಾಮಿಯಂತೆ ಕೊಡಗಿನತ್ತ ಧಾವಿಸುವುದರಲ್ಲಿ ಸಂಶಯಬೇಡ. ಪ್ರವಾಸಿಗರಿಂದ ಈ ಮೊದಲು ಯಾವ ರೀತಿ ಸಮಸ್ಯೆಯಾಗಿದೆ ಎಂಬುದನ್ನು ಕಂಡುಕೊಂಡು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಿ ಜಾಗೃತಿಯ ಪ್ರವಾಸೋದ್ಯಮಕ್ಕೆ ಯೋಜನೆ ರೂಪಿಸಲೂ ಇದು ಸೂಕ್ತ ಅವಕಾಶ ನೀಡಿದ ದಿನಗಳಾಗಿದೆ. ದೇಶದ ಪ್ರಧಾನಿ ಕರೆ ನೀಡಿರುವ ಆತ್ಮನಿರ್ಭರ ಭಾರತ್ ಎಂಬ ಸಂದೇಶವನ್ನೇ ಬಳಸಿಕೊಂಡು ನಾವೂ ಆತ್ಮನಿರ್ಭರ ಕೊಡಗಿನ ಸ್ಥಾಪನೆಗೆ ಮುಂದಾಗಲೇ ಬೇಕಾಗಿದೆ. ಸ್ವಾವಲಂಭಿ, ಸ್ವಾಭಿಮಾನಿ ಕೊಡಗು ಮೇಲೇಳಬೇಕಾಗಿದೆ. ಆತ್ಮ ನಿರ್ಭರ ಜತೆಗೆ ಕೊಡಗಿನ ಜನತೆಗೆ ಆರ್ಥಿಕತೆಯ ಭಯವಿಲ್ಲದ ಆರ್ಥಿಕ ಅಭಯಕ್ಕೆ ಆತ್ಮ ನಿರ್ಭಯ ಕೂಡ ಪ್ರತಿಯೋರ್ವರ ಮನದಲ್ಲಿ ಮೂಡಬೇಕಾಗಿದೆ. ಕೊಡಗು ಚೇತರಿಸಿಕೊಳ್ಳಬೇಕಾದರೆ ಮೊದಲು ನಮಗೆ ನಮ್ಮಲ್ಲಿಯೇ ಉತ್ಪಾದನೆಯಾಗುವ ಪದಾರ್ಥಗಳ ಮೇಲೆ ವ್ಯಾಮೋಹ ಉಂಟಾಗಬೇಕು. ಕೊಡಗಿನ ಉತ್ಪಾದನೆಗೆ ಪೆÇ್ರೀತ್ಸಾಹ ನೀಡಿಕೆ ನಮ್ಮೆಲ್ಲರ ಆದ್ಯತೆಯಾಗಬೇಕು. ಸ್ಥಳೀಯವಾಗಿ ಬೆಳೆಯುವ ತರಕಾರಿ, ಹಣ್ಣುಗಳನ್ನು, ಆಹಾರ ಪದಾರ್ಥಗಳನ್ನು ಮೊದಲು ನಾವೇ ಖರೀದಿಸುವಂತಾಗಬೇಕು. ಮೊದಲು ಕೊಡಗಿನ ಉಳಿವು. ನಂತರ ಬೇರೆಯವರಿಗೆ ಉಪಕಾರಿಯಾಗುತ್ತೇವೆ ಎಂಬ ಮನೋಭಾವ ಹೆಚ್ಚಾಗಬೇಕು.

ಚೇಂಬರ್ ಆಫ್ ಕಾಮರ್ಸ್‍ನಂಥ ಪ್ರಮುಖ ಸಂಸ್ಥೆಗಳು ನಮ್ಮ ನೆಲದಲ್ಲಿಯೇ ಬೆಳೆಯುವ ಹಣ್ಣು, ಹೂವು, ತರಕಾರಿ, ಆಹಾರ ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕವಾದ ಯೋಜನಾ ಜಾಲ ರೂಪಿಸಿ ಹೊರಜಿಲ್ಲೆಗಳಲ್ಲಿ ಮಾರುಕಟ್ಟೆ ಕಂಡುಕೊಳ್ಳಲು ಇನ್ನಾದರೂ ಮುಂದಾಗಬೇಕು. ಪ್ರತೀಯೋರ್ವ ರಲ್ಲಿಯೂ ಈ ರೀತಿಯ ಚಿಂತನೆ ಮೂಡಿದರೆ ಖಂಡಿತವಾಗಿಯೂ ಕೊಡಗಿನ ಜನರು ತಮ್ಮವರಿಂದಲೇ ಮತ್ತೆ ಚೇತರಿಸಿಕೊಳ್ಳುತ್ತಾರೆ. ಅದು ಬಿಟ್ಟು, ಕೊಡಗಿನಲ್ಲಿ ಏನು ಸಿಗುತ್ತೆ ಎಂಬ ಮನೋಭಾವದಿಂದ ನಾವೇ ದೂರದೂರಿಗೆ ವಸ್ತುಗಳ ಶಾಪಿಂಗ್, ಪದಾರ್ಥಗಳ ಖರೀದಿಗೆ ತೆರಳಿದರೆ ಕೊಡಗನ್ನು ಬೇರೆ ಯಾರು ಮೇಲೆತ್ತಬೇಕು ?

‘‘ನನ್ನ ಕೊಡಗು-ನನ್ನ ಹೆಮ್ಮೆ’’ ಎಂಬ ಮನೋಚಿಂತನೆ ಪ್ರತಿಯೋರ್ವ ರಲ್ಲಿ ಬೇರೂರಬೇಕು. ಯಾವುದೇ ಸಮಾರಂಭಗಳಿರಲಿ ದುಂದುವೆಚ್ಚಕ್ಕೆ ಇನ್ನಾದರೂ ಕಡಿವಾಣ ಬೀಳಲೇಬೇಕು. ಅಂತÀವುಗಳಿಗೆ ಮಾಡಲಾಗುವ ವೆಚ್ಚವನ್ನು ಕೊಡಗಿನಲ್ಲಿಯೇ ಹೊಸದ್ದಾಗಿ ಸ್ವಂತ ಉದ್ಯಮ ಸ್ಥಾಪಿಸುವವರಿಗೆ ನೀಡುವಂತಾಗಬೇಕು.ಮನೆಯ ಮೂರು ಮಂದಿ ಮೂರು ಕಾರ್‍ನಲ್ಲಿ ಸಂಚರಿಸುವ ಬದಲಿಗೆ ಎಲ್ಲರೂ ಒಂದೇ ವಾಹನ ಬಳಸುವಂತಾದರೆ ವೆಚ್ಚ ಉಳಿದೀತು. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ಬಡಾವಣೆ ಗಳಲ್ಲಿನ ಪುಟ್ಟ ಅಂಗಡಿಗಳಲ್ಲಿ ಖರೀದಿ ಪ್ರಾಶಸ್ತ್ಯ ಪಡೆಯಬೇಕು. ರೆಸ್ಟೋರೆಂಟ್‍ಗಳಲ್ಲಿ ಕೊಡಗಿನ ಖಾದ್ಯಗಳು ಕೇಳುಗನ ಆದ್ಯತೆಯಾಗುವಂತೆ ಯೋಜನೆ ರೂಪಿಸಬೇಕು. ಹೊಸಹೊಸ ತಿನಿಸುಗಳ ಪರಿಚಯವೂ ಈಗ ಆಗಬೇಕು. ‘ನಾ ನಿನಗಾದರೆ ನಾ ನಿನಗೆ’ ಎಂಬ ಸಹಕಾರದ ಮನೋಭಾವ ಮೂಡಬೇಕು. ಇವೆಲ್ಲವೂ ಆಗಬೇಕಾದರೆ, ಇವೆಲ್ಲವೂ ಜಾರಿಗೊಳ್ಳಬೇಕಾದರೆ.. ಮೊದಲು ನಮ್ಮೂರಿನ ಬಗ್ಗೆ ನಮಗೆ ಅಭಿಮಾನವಿರಬೇಕು. ಹೆಮ್ಮೆಯಿರಬೇಕು.

ಹಾಗಾದಾಗ ಮಾತ್ರ, ಕೊಡಗು ಮುಂದೊಂದು ದಿನ ಭಾರತದಲ್ಲಿಯೇ ಕೊಡಗು ಬ್ರಾಂಡ್ ರೂಪದಲ್ಲಿ ಮಾದರಿ ಜಿಲ್ಲೆಯಾಗುತ್ತದೆ. ಕೊಡಗು ಮೇಲೆದ್ದ ರೀತಿ ನೋಡಿ ಎಂದು ಎಲ್ಲರೂ ಇತ್ತ ಗಮನಿಸಿ ಹುಬ್ಬೇರಿಸು ವಂತಾಗುತ್ತದೆ. ಹೀಗಾಗಿ ಭವಿಷ್ಯದಲ್ಲಿ ಕೊರೊನಾ ತರುವ ಪಾಸಿಟಿವ್ ಆತಂಕದ ನೆಗೆಟಿವ್ ಚಿಂತನೆಗಿಂತ ಕೊಡಗು ಆರ್ಥಿಕ ಚೈತನ್ಯ ಪಡೆಯುತ್ತದೆ ಎಂಬ ಪಾಸಿಟಿವ್ ಮನಸ್ಥಿತಿ ಎಲ್ಲರಲ್ಲಿರಲಿ.

ಕೊನೇ ಹನಿ

ಬೆಟ್ಟವೇ ಕುಸಿದುಬಿದ್ದಾಗ ಕೆಸರಿನ ಕೂಪದ ಮಧ್ಯೆ ಮೇಲೆದ್ದಿದ್ದೇವೆ. ಪ್ರವಾಹ ಬಂದು ಕೊಚ್ಚಿಹೋದಾಗ ಅಲೆಗಳ ಎದುರೂ ಈಜಿ ಸೈ ಎಂದಿದ್ದೇವೆ, ಬಿರುಗಾಳಿ, ಮಳೆ, ಗುಡುಗಿಗೂ ಅಂಜಲಿಲ್ಲ. ಅಳುಕಲಿಲ್ಲ. ಯಾಕೆಂದರೆ ಕಾವೇರಮ್ಮೆ, ಇಗ್ಗುತ್ತಪ್ಪನಂಥ ದೈವ ಬಲ ನಮಗಿದೆ. ಮತ್ತೆ ಪುಟಿದೇಳುವ ಇಚ್ಚಾಶಕ್ತಿ ನಮ್ಮಲ್ಲಿದೆ. ಮುಂದೆ ಆರ್ಥಿಕವಾಗಿ ಹೇಗೆ ಮೇಲೇಳುತ್ತೇವೆ ಎಂಬ ಚಿಂತೆಗಿಂತ ನಾವು ಈ ಮೊದಲೂ ಸವಾಲುಗಳನ್ನು ಸ್ವೀಕರಿಸಿ ಮೇಲೆದ್ದು ಬಂದವರು ಎಂಬ ಚಿಂತನೆ ನಮ್ಮದಾಗಿರಲಿ. ಪ್ರತಿಯೋರ್ವರ ಸಂಕಲ್ಪವೂ ಆಗಿರಲಿ. ಅಯ್ಯೋ ಬಿಡ್ರಿ, ಮಳೆ ಕಂಡಾಗಿದೆ. ಪ್ರವಾಹ ನೋಡಿದ್ದೇವೆ. ಇದೇನಿದು ಲಾಕ್‍ಡೌನ್ ಸಮಸ್ಯೆ ಕೊಡಗನ್ನು ನಾವು ಹೇಗೆ ಕಾಪಾಡಿದ್ದೇವೆಯೋ ಹಾಗೇ ಕೊಡಗು ನಮ್ಮನ್ನೆಲ್ಲಾ ಖಂಡಿತಾ ಕಾಪಾಡುತ್ತದೆ. ‘ತಲ್ಲಣಿಸದಿರು ಕಂಡ್ಯಾ ತಾಳು ಮನವೇ’ ಒಳ್ಳೆಯ ದಿನಗಳು ಎಲ್ಲರದಾಗಲಿ.

(ಲಾಕ್‍ಡೌನ್ ಡೈರಿ ಅಂಕಣ ಇಂದಿಗೆ ಮುಕ್ತಾಯ ಗೊಂಡಿದೆ)