ಸಾಂತ್ವನ ಯೋಜನೆ ಮುಂದುವರಿಕೆ

ಬೆಂಗಳೂರು, ಮೇ 29: ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯರಿಗೆ ಸಮಾಲೋಚನೆ ಸೇರಿದಂತೆ ಅಗತ್ಯ ನೆರವು ಒದಗಿಸುತ್ತಿರುವ ಸಾಂತ್ವನ ಯೋಜನೆಯನ್ನು ಮುಂದು ವರೆಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಸೂಚಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾ ಡುತ್ತಿದ್ದರು. ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಒನ್ ಸ್ಟಾಪ್ ಕೇಂದ್ರಗಳನ್ನು ಪ್ರಾರಂಭಿಸಿರುವುದರಿಂದ ಸಾಂತ್ವನ ಯೋಜನೆಯನ್ನು ಸ್ಥಗಿತಗೊಳಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ, ದೌರ್ಜನ್ಯ ಕ್ಕೊಳಗಾದ ಮಹಿಳೆಯರಿಗೆ ಸಾಂತ್ವನ ಯೋಜನೆ ನೆರವು ನೀಡುತ್ತಿ ರುವುದರಿಂದ ಈ ಯೋಜನೆಯನ್ನು ಮುಂದುವರೆಸಲು ತೀರ್ಮಾನಿ ಸಲಾಯಿತು. ಭಾಗ್ಯಲಕ್ಷ್ಮಿ ಯೋಜನೆಯನ್ನು ಅಂಚೆ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡು ಸುಕನ್ಯಾ ಸಮೃದ್ಧಿ ಯೋಜನೆಯಡಿ ಅನುಷ್ಠಾನ ಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ಕೋವಿಡ್-19 ಹಿನ್ನೆಲೆ ಉಂಟಾದ ಲಾಕ್‍ಡೌನ್ ಸಂದರ್ಭದಲ್ಲಿ ಇಲಾಖೆಯು ಆಹಾರ ಧಾನ್ಯಗಳನ್ನು ಪ್ರತಿ ಫಲಾನುಭವಿಗಳ ಮನೆ ಬಾಗಿಲಿಗೆ ವಿತರಿಸಿದೆ. ಇದೇ ಅವಧಿಯಲ್ಲಿ 278 ಬಾಲ್ಯ ವಿವಾಹಗಳನ್ನು ತಡೆಹಿಡಿಯಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮಾಸ್ಕ್‍ಗಳನ್ನು ಹೊಲಿದು ವಿತರಿಸಿದ್ದಾರೆ ಎಂದು ಸಚಿವರಾದ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದರು.

ಲಾಕ್‍ಡೌನ್ ಮುಂದುವರಿಕೆ ಪ್ರಸ್ತಾಪ

ನವದೆಹಲಿ, ಮೇ 29: ಮೇ 31 ರ ನಂತರವೂ ಲಾಕ್‍ಡೌನ್‍ನ್ನು ಮುಂದುವರಿಸಬೇಕೆ ಎಂಬ ಬಗ್ಗೆ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಅಭಿಪ್ರಾಯ ಸಂಗ್ರಹಿಸಿದ್ದಾರೆ. ದೂರವಾಣಿ ಮೂಲಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಅಮಿತ್ ಶಾ ಮಾತುಕತೆ ನಡೆಸಿದ್ದು, ಲಾಕ್‍ಡೌನ್ ಮುಂದುವರಿಕೆ ಸಂಬಂಧ ಸಂಗ್ರಹಿಸಿರುವ ಅಭಿಪ್ರಾಯ ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸಿದ್ದಾರೆ. ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ಕೊರೊನಾ ವೈರಸ್ ತಡೆಗೆ ರಾಷ್ಟ್ರಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದರು. ಈ ಲಾಕ್‍ಡೌನ್ ತಾ. 31 ವರೆಗೂ ನಾಲ್ಕು ಭಾಗಗಳಲ್ಲಿ ಮುಂದುವರೆದಿದೆ. ಮೇ 31ಕ್ಕೆ 4.0 ಹಂತದ ಲಾಕ್‍ಡೌನ್ ಮುಕ್ತಾಯಗೊಳ್ಳಲಿದ್ದು, ಇದಕ್ಕೂ 3 ದಿನಗಳ ಮುನ್ನ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಜೂ. 1 ರಿಂದ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಬೇಕಾದ ವಲಯಗಳು, ಆತಂಕ ಇರುವ ಕ್ಷೇತ್ರಗಳ ಬಗ್ಗೆ ರಾಜ್ಯಗಳ ಮುಖ್ಯಮಂತ್ರಿಗಳಿಂದ ಮಾಹಿತಿ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಅಮಿತ್ ಶಾ ಈ ಕುರಿತ ವರದಿಯನ್ನು ತಲುಪಿಸಿದ್ದಾರೆ.

ಬಡವರ ಕೈಗೆ ನೇರವಾಗಿ ಸಿಗಲಿದೆ ಹಣ

ನವದೆಹಲಿ, ಮೇ 29: ದೇಶದಲ್ಲಿ ಮಾರಕ ಕೊರೊನಾ ವೈರಸ್ ಬಿಕ್ಕಟ್ಟು ಉಲ್ಬಣಿಸಿದರೆ ದೇಶದ ಬಡವರ ಕೈಗೆ ನೇರವಾಗಿ ಹಣ ನೀಡುವ ವ್ಯವಸ್ಥೆಯ ಕುರಿತು ಆಲೋಚಿಸಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ. ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ದೇಶದ ಕೋಟ್ಯಂತರ ಬಡವರು, ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಅಕ್ಷರಶಃ ನಿರಾಶ್ರಿತರಾಗಿದ್ದರು. ಒಪ್ಪೊತ್ತಿನ ಊಟವೂ ಇಲ್ಲದೆ ಕಂಗಾಲಾಗಿದ್ದರು. ಅಲ್ಲದೆ ತಮ್ಮ ತಮ್ಮ ತವರಿಗೆ ತೆರಳಲು ಈಗಲೂ ಹೆಣಗಾಡುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಲಾಕ್‍ಡೌನ್‍ನಿಂದಾಗಿ ಸಮಾಜದ ಈ ವರ್ಗ ಬೀದಿಗೆ ಬಿದ್ದಿತ್ತು. ಅವರ ನಿತ್ಯ ಸಂಪಾದನೆ ಸ್ಥಗಿತವಾಗಿತ್ತು. ಕುಟುಂಬ ಪೋಷಣೆ ಕಷ್ಟಕರವಾಗಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿತ್ತು. ಆದರೆ ಈ ಆರ್ಥಿಕ ಪ್ಯಾಕೇಜ್ ಸಂಪೂರ್ಣವಾಗಿ ಸಂತ್ರಸ್ತರ ಕೈಗೆ ತಲುಪುತ್ತಿಲ್ಲ. ಹೀಗಾಗಿ ಕೇಂದ್ರ ವಿತ್ತ ಸಚಿವಾಲಯ ದೇಶದ ಬಡವರ ಕೈಗೆ ನೇರವಾಗಿ ಹಣ ನೀಡುವ ವ್ಯವಸ್ಥೆಯ ಕುರಿತು ಆಲೋಚಿಸುತ್ತಿದೆ ಎನ್ನಲಾಗಿದೆ. ವಿತ್ತ ಸಚಿವಾಲಯದ ಮೂಲಗಳು ತಿಳಿಸಿರುವಂತೆ ಕೇಂದ್ರ ವಿತ್ತ ಸಚಿವಾಲಯ ಕಾರ್ಮಿಕ ಸಚಿವಾಲಯದಿಂದ ಲಾಕ್‍ಡೌನ್ ಸಂದರ್ಭ ಉಂಟಾದ ಉದ್ಯೋಗ ನಷ್ಟ ಮತ್ತು ವೇತನ ಕಡಿತದ ದತ್ತಾಂಶ ಕೇಳಿದೆ. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಮುದ್ರಣಗೊಂಡ ನೋಟುಗಳನ್ನು ಚಲಾವಣೆಗೆ ತರುವ ಚಿಂತನೆಯಲ್ಲಿ ತೊಡಗಿದೆ ಎಂದು ಮಾಹಿತಿ ನೀಡಿವೆ.