ವೀರಾಜಪೇಟೆ, ಮೇ 29: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಹಗಲು ಇರುಳೆನ್ನದೆ ದುಡಿಯುತ್ತಿರುವ ವೈದ್ಯರು, ಶುಶ್ರೂಷಕಿಯರು, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿಯ ಸ್ವಚ್ಛತಾ ಸಿಬ್ಬಂದಿಗಳನ್ನು ಸಮಾಜ ಸೇವೆಯ ಹಿತದೃಷ್ಟಿಯಿಂದ ಗೌರವಿಸುವುದು ಎಲ್ಲರ ಕರ್ತವ್ಯ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಾಫಿ ಹೇಳಿದರು.

ವೀರಾಜಪೇಟೆಯ ಕೊರೊನಾ ವಾರಿಯರ್ಸ್ ಬೆಂಬಲಿತ ಕೂಟದ, ಮುಸ್ಲೀಂ ಬಾಂಧವರು, ಮದೀನ ಎಜುಕೇಶನ್, ಮುಸ್ಲಿಂ ಕೂಟದ ಪ್ರಮುಖರಾದ ಆರ್.ಕೆ. ಅಬ್ದುಲ್ ಸಲಾಂ, ಎಸ್.ಹೆಚ್. ಮೈನುದ್ದೀನ್, ಉದ್ಯಮಿ ಎಂ.ಕೆ. ಕಬೀರ್ ಹಾಗೂ ಎಸ್.ಹೆಚ್. ಮತೀನ್ ಇವರುಗಳು ಸೇರಿ ವಾರಿಯರ್ಸ್ ತಂಡಗಳ ಜೊತೆಯಲ್ಲಿ ರಂಜಾನ್ ಹಬ್ಬ ಆಚರಣೆ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಹಮ್ಮದ್ ರಾಫಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಹಾಗೂ ಪಟ್ಟಣ ಪಂಚಾಯಿತಿಯ ಸದಸ್ಯರುಗಳು ಭಾಗವಹಿಸಿದ್ದರು.

ರಂಜಾನ್ ಹಬ್ಬದ ಆಚರಣೆಯ ಪ್ರಯುಕ್ತ ಕೊರೊನಾ ವಾರಿಯರ್ಸ್ ತಂಡಗಳಿಗೆ ರಂಜಾನ್ ಸಾಂಪ್ರದಾಯಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು.