ವೀರಾಜಪೇಟೆ, ಮೇ 29: ಬೇತರಿ ಗ್ರಾಮದ ಬಳಿಯ ನಾಲ್ಕೇರಿ ಕಾವೇರಿ ಹೊಳೆಯಲ್ಲಿ ಜೋಶಿ (45) ಎಂಬಾತನ ಮೃತ ದೇಹ ಇಂದು ಬೆಳಿಗ್ಗೆ ದೊರೆತಿದೆ.

ಮೃತ ಜೋಶಿ ಕೇರಳದ ನಿವಾಸಿಯಾಗಿದ್ದು, ನಾಲ್ಕು ವರ್ಷಗಳ ಹಿಂದೆ ಅರಮೇರಿ ಗ್ರಾಮಕ್ಕೆ ಬಂದು ಕಾಫಿ ತೋಟದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ತೋಟದ ಮಾಲೀಕರು ಮೃತದೇಹ ಜೋಶಿಯದ್ದೆಂದು ಪತ್ತೆ ಹಚ್ಚಿ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಮೃತ ಜೋಶಿ ಕಂಠಪೂರ್ತಿ ಮದ್ಯ ಸೇವಿಸುತ್ತಿದ್ದು ಅದೇ ಗುಂಗಿನಲ್ಲಿ ಕದನೂರು ಗ್ರಾಮದ ಉಪ ಹೊಳೆ ಹಾಗೂ ಬೇತರಿ ಗ್ರಾಮದ ಕಾವೇರಿ ಹೊಳೆ ಸೇರುವ ನಾಲ್ಕೇರಿ ಹೊಳೆಯ ಜಂಕ್ಷನ್‍ನಲ್ಲಿ ಆಕಸ್ಮಿಕವಾಗಿ ಹೊಳೆಗೆ ಬಿದ್ದಿರಬಹುದೆಂದು ಪೊಲೀಸ್ ವಲಯದಲ್ಲಿ ಶಂಕಿಸಲಾಗಿದೆ. ವೀರಾಜಪೇಟೆ ಗ್ರಾಮಾಂತರ ಪೊಲೀಸರು ಆಕಸ್ಮಿಕ ಸಾವಿನ ಕುರಿತು ಪ್ರಕರಣ ದಾಖಲಿಸಿದ್ದಾರೆ.