ಮಡಿಕೇರಿ, ಮೇ 29: ಸುಂಟಿಕೊಪ್ಪದ ವಿಕಾಸ್ ಜನಸೇವಾ ಟ್ರಸ್ಟ್ನ ಜೀವನ ದಾರಿ ಆಶ್ರಮಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ಪರಿಶೀಲಿಸಿದರು. ಟ್ರಸ್ಟ್ ಅಧ್ಯಕ್ಷ ಹೆಚ್.ಕೆ. ರಮೇಶ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಆಶ್ರಮಕ್ಕೆ ನಿಯಮಾನುಸಾರ ಅಗತ್ಯ ನೆರವು ಕಲ್ಪಿಸುವುದಾಗಿ ಭರವಸೆ ನೀಡಿದರು. ಕೋವಿಡ್-19 ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದ ಅವರು ಆಶ್ರಮದಲ್ಲಿದ್ದವರ ಯೋಗಕ್ಷೇಮ ವಿಚಾರಿಸಿದರು.
ಮಡಿಕೇರಿಯ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀಶಕ್ತಿ ವೃದ್ಧಾಶ್ರಮಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಎಲ್ಲಾ ವಯೋವೃದ್ಧರ ಯೋಗಕ್ಷೇಮ ವಿಚಾರಿಸಿದರು. ಹಿರಿಯ ಜೀವಗಳ ಆರೋಗ್ಯದ ಮೇಲೆ ನಿಗಾ ಇಡುವಂತೆ ಸಿಬ್ಬಂದಿಗಳಿಗೆ ಸೂಚಿಸಿದರು. ಅನಾಥ ಹಾಗೂ ನಿರ್ಗತಿಕ ಮಹಿಳೆಯರ ಆಶ್ರಯ ತಾಣವಾಗಿರುವ ಮಡಿಕೇರಿಯ ತನಲ್ ಸಂಸ್ಥೆಗೂ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಆಶ್ರಯ ಪಡೆದವರ ಆರೋಗ್ಯ ವಿಚಾರಿಸಿದರು. ಸಂಸ್ಥೆಯ ಮೇಲುಸ್ತುವಾರಿ ಎಂ.ಹೆಚ್. ಮೊಹಮ್ಮದ್ ಮುಸ್ತಫ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅರುಂಧತಿ, ಹಿರಿಯ ನಾಗರಿಕರ ಮತ್ತು ವಿಶೇಷಚೇತನರ ಕಲ್ಯಾಣ ಇಲಾಖೆ ಅಧಿಕಾರಿ ಸಂಪತ್ ಕುಮಾರ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.
ಕೂಡಿಗೆ: ಕೂಡಿಗೆಯಲ್ಲಿರುವ ಶ್ರೀ ಶಕ್ತಿ ವೃದ್ಧಾಶ್ರಮಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ವೃದ್ಧರ ಯೋಗಕ್ಷೇಮವನ್ನು ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ನಾಲ್ಕು ವೃದ್ಧಾಶ್ರಮಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಶೇಷಚೇತನ ಮತ್ತು ಹಿರಿಯರ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ಮಾಡಲಾಗಿದೆ. ಈ ಕೇಂದ್ರಗಳ ಸಂಪೂರ್ಣ ಮಾಹಿತಿಗಳನ್ನು ಪಡೆಯಲಾಗಿದೆ. ಸಮಸ್ಯೆಗಳು ಇದ್ದರೆ ಶೀಘ್ರವಾಗಿ ತಿಳಿಸುವಂತೆ ಆಯಾ ಕೇಂದ್ರಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭ ಅಧಿಕಾರಿಗಳು, ಕೂಡಿಗೆ ವೃದ್ಧಾಶ್ರಮದ ವ್ಯವಸ್ಥಾಪಕ ಚಂದ್ರು, ಮಡಿಕೇರಿ ಕೇಂದ್ರ ಹೆಚ್.ಆರ್. ಸತೀಶ್ ಇದ್ದರು.