ಕುಶಾಲನಗರ, ಮೇ 29: ಕುಶಾಲನಗರದಲ್ಲಿ ಕಳೆದ 6 ವರ್ಷಗಳಿಂದ ನಿರ್ಮಾಣವಾಗುತ್ತಿರುವ ಒಳಚರಂಡಿ ಕಾಮಗಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋಟಿಗಟ್ಟಲೆ ಹಣ ಪೋಲಾಗುವುದರೊಂದಿಗೆ ಕುಶಾಲನಗರ ಪಟ್ಟಣದ ಮತ್ತು ಜೀವನದಿ ಕಾವೇರಿಯ ಸ್ವಚ್ಛತೆ ಹಿನ್ನೆಲೆ ಕೈಗೆತ್ತಿಕೊಂಡ ಯೋಜನೆಯೊಂದು ಇನ್ನೂ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದೆ.

ಇದೀಗ ಯೋಜನೆಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಮೀಸಲಾಗಿರುವ ಜಾಗವನ್ನು ಮಣ್ಣು ತುಂಬಿ ಒತ್ತುವರಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಂದಾಜು 53 ಕೋಟಿ ವೆಚ್ಚದ ಈ ಯೋಜನೆ ಮೂರು ವರ್ಷಗಳ ಹಿಂದೆಯೇ ಪೂರ್ಣ ಗೊಳ್ಳಬೇಕಿತ್ತು. ತ್ಯಾಜ್ಯ ಸಂಸ್ಕರಣಾ ಘಟಕದ ಕಾಮಗಾರಿ ನಡೆಯದ ಹಿನ್ನೆಲೆ ಯೋಜನೆ ಅಪೂರ್ಣ ಗೊಂಡಿದೆ. ಇನ್ನು ಕೆಲವೆಡೆ ಕಾಮಗಾರಿಗೆ ಅಡ್ಡಿ ಮಾಡಿದ ಹಿನ್ನೆಲೆ ಕೆಲಸ ನಡೆಯದೆ ಕುಶಾಲನಗರ ಒಳಚರಂಡಿ ಕಾಮಗಾರಿ ಸ್ಥಗಿತಗೊಂಡಿರುವುದು ಕಾಣಬಹುದು.

ಇದೀಗ ಕುಶಾಲನಗರ ಹಾರಂಗಿ ರಸ್ತೆಯ ವಾಲ್ಮೀಕಿ ಭವನದ ಬಳಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಎರಡು ಎಕರೆಗೂ ಅಧಿಕ ವಿಸ್ತೀರ್ಣದ ಜಾಗ ಮಂಜೂರಾಗಿದ್ದು ಈ ಜಾಗದಲ್ಲಿ ಅಕ್ರಮ ದಾಖಲೆ ಸೃಷ್ಠಿಸಿ ವ್ಯಕ್ತಿಯೊಬ್ಬರು ಲಾರಿಯಲ್ಲಿ ಮಣ್ಣು ತಂದು ತುಂಬಿಸುತ್ತಿರುವುದು ಕಂಡುಬಂದಿದೆ. ಇದಕ್ಕೆ ಸ್ಥಳೀಯ ರಾಜಕಾರಣಿಯೊಬ್ಬರ ಕುಮ್ಮಕ್ಕು ಇರುವುದಾಗಿ ಪತ್ರಿಕೆ ಯೊಂದಿಗೆ ದೂರು ಕೇಳಿಬಂದಿವೆ.

ಅಧಿಕಾರಿಗಳು ತಕ್ಷಣ ಈ ಜಾಗವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಜಾಗ ಖಾಸಗಿಯವರ ಪಾಲಾಗದಂತೆ ತಕ್ಷಣ ಎಚ್ಚರವಹಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.