ಸೋಮವಾರಪೇಟೆ, ಮೇ 29: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕಂಡುಬಂದಿರುವ ಡೆಸರ್ಟ ಲೋಕಸ್ಟ್ ರಕ್ಕಸ ಮಿಡತೆಗಳ ಹಾವಳಿಯಿಂದ ಆ ಭಾಗದ ಕೃಷಿಕರು ಕಂಗಾಲಾಗಿದ್ದರೆ, ದಕ್ಷಿಣ ಭಾರತದಲ್ಲಿರುವ ಕರ್ನಾಟಕದ ಕಾಶ್ಮೀರ ಎಂದೇ ಹೆಸರಾಗಿರುವ ಕೊಡಗಿನ ಕಾಫಿ ತೋಟದಲ್ಲೂ ನೂರಾರು ಮಿಡತೆಗಳ ಹಿಂಡು ಕಂಡು ಬಂದಿದ್ದು, ಬೆಳೆಗಾರ ವರ್ಗದಲ್ಲಿ ಭೀತಿ ಸೃಷ್ಟಿಸಿದೆ. ಸೋಮವಾರಪೇಟೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗನಳ್ಳಿ ಗ್ರಾಮದ ಕಾಫಿ ತೋಟವೊಂದರಲ್ಲಿ ನೂರಾರು ಮಿಡತೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ತೋಟ ಮಾಲೀಕರಲ್ಲಿ ಆತಂಕ ಹೆಚ್ಚಿಸಿದೆ.ಹಸಿರು ಕಾಫಿ ಎಲೆಗಳ ಮೇಲೆ ಗುಂಪು ಗುಂಪಾಗಿ ಕಂಡುಬರುತ್ತಿರುವ ಮಿಡತೆಗಳು, ಹಚ್ಚಹಸಿರಿನ ಕಾಫಿ ಎಲೆಗಳನ್ನು ತಿನ್ನುತ್ತಿವೆ. ಮಿಡತೆಗಳು ಕುಳಿತ ಜಾಗದಲ್ಲಿ ಎಲೆಗಳು ಕಣ್ಮರೆಯಾಗುತ್ತಿದ್ದು, ಇವುಗಳ ಸಂತತಿ ಹೆಚ್ಚಿದರೆ ಭವಿಷ್ಯದಲ್ಲಿ ಹೆಚ್ಚಿನ ಅಪಾಯ ಕಟ್ಟಿಟ್ಟ ಬುತ್ತಿ ಎಂದೇ ವಿಶ್ಲೇಷಿಸ ಲಾಗುತ್ತಿದೆ. ಈಗಾಗಲೇ ನೆರೆಯ ಪಾಕಿಸ್ತಾನದಿಂದ ದಂಡೆತ್ತಿ ಬಂದಿರುವ ಡೆಸರ್ಟ ಲೋಕಸ್ಟ್ ರಕ್ಕಸ ಮಿಡತೆಗಳು ಉತ್ತರ ಭಾರತದ ಒಂದೊಂದೇ ರಾಜ್ಯಗಳಿಗೆ ತಮ್ಮ ಸಾಮಾಜ್ರ್ಯ ವಿಸ್ತರಿಸುತ್ತಿವೆ. ಈಗಾಗಲೇ 7 ರಾಜ್ಯಗಳಲ್ಲಿ ತನ್ನ ಹಾವಳಿ ಪ್ರಾರಂಭಿಸಿರುವ ಮಿಡತೆಗಳು, ಒಂದು ಅಂದಾಜಿನ ಪ್ರಕಾರ 20 ಜಿಲ್ಲೆಗಳ 303 ಪ್ರದೇಶಗಳಲ್ಲಿನ 47 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿನ ಬೆಳೆಗಳಿಗೆ ಮುತ್ತಿಗೆ ಹಾಕಿವೆ. ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಹರಿಯಾಣ ರಾಜ್ಯಗಳಲ್ಲಿ ಕಂಡುಬಂದ ಮಿಡತೆಗಳು ಗುರುವಾರ ಉತ್ತರಪ್ರದೇಶ ಮತ್ತು ಪಂಜಾಬ್ ಗಡಿಯಲ್ಲೂ ಕಂಡುಬಂದಿವೆ ಎಂದು ವರದಿಗಳು ತಿಳಿಸಿದ್ದು, ಆಯಾ ರಾಜ್ಯಗಳಲ್ಲಿ ಮಿಡತೆಗಳಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಲಾಗುತ್ತಿದೆ.
(ಮೊದಲ ಪುಟದಿಂದ) ನಾಶವಾಗಲಿದ್ದು, ಪರಿಣಾಮವಾಗಿ ಕೃಷಿ ಕ್ಷೇತ್ರದ ಮೇಲೆ ಭಾರೀ ಹೊಡೆತ ನೀಡುತ್ತವೆ. ಅಂತಿಮವಾಗಿ ಇದು ಮನುಷ್ಯರ ಆಹಾರಕ್ಕೂ ಕುತ್ತುತರುತ್ತವೆ. ಈಗಾಗಲೇ ದೇಶದ ಉತ್ತರ ರಾಜ್ಯಗಳಲ್ಲಿ ಕಂಡುಬಂದಿರುವ ಡೆಸರ್ಟ ಲೋಕಸ್ಟ್ ಮಿಡತೆಗಳು ಕರ್ನಾಟಕದ ಉತ್ತರ ಗಡಿಭಾಗಕ್ಕೂ ಆಗಮಿಸುವ ಆತಂಕ ವಿದ್ದು, ಕೃಷಿ ಇಲಾಖೆ ಇವುಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮಗಳ ಸಿದ್ಧತೆಯಲ್ಲಿದೆ. ಒಟ್ಟಾರೆ ಈ ದೈತ್ಯ ಮಿಡತೆಗಳ ದಂಡು ಕೊಡಗಿಗೆ ಕಾಲಿಟ್ಟರೆ ಹಸಿರಿನ ಪ್ರದೇಶಕ್ಕೆ ಕುತ್ತು ಬರಬಹುದು ಎಂದು ಸಂಶಯಿಸಲಾಗಿದೆ.
ಡೆಸರ್ಟ ಲೋಕಸ್ಟ್ಗಳಾ?: ಸೋಮವಾರಪೇಟೆ ಸಮೀಪದ ಸಿಂಗನಳ್ಳಿ ಗ್ರಾಮದ ರವೀಂದ್ರ ಅವರ ಕಾಫಿ ತೋಟದಲ್ಲಿ ಕಂಡುಬಂದ ಮಿಡತೆಗಳು ಉತ್ತರ ಭಾರತದಲ್ಲಿ ಹಾವಳಿ ಎಬ್ಬಿಸುತ್ತಿರುವ ದೈತ್ಯ ಡೆಸರ್ಟ ಲೋಕಸ್ಟ್ ಮಿಡತೆಗಳಾ? ಎಂಬ ಅನುಮಾನ ಮೂಡು ವಂತಾಗಿದೆ. ನೂರಾರು ಮಿಡತೆಗಳು ಗುಂಪುಗುಂಪಾಗಿ ಕಾಫಿ ತೋಟದಲ್ಲಿ ಕಂಡುಬಂದಿದ್ದು, ತೋಟದ ಮಾಲೀಕ ರವೀಂದ್ರ ಅವರಲ್ಲಿ ಆತಂಕ ಸೃಷ್ಟಿಸಿದೆ. ಎಲೆಗಳ ಮೇಲೆ ಕುಳಿತ ಮಿಡತೆಗಳು ಹಸಿರಿನ ಎಲೆಗಳನ್ನು ತಿನ್ನುತ್ತಿವೆ. ಇದೀಗ ಕಾಫಿ ತೋಟ ಹಚ್ಚಹಸಿರಿನಿಂದ ಕೂಡಿದ್ದು, ಮಿಡತೆಗಳು ಅಷ್ಟು ಸುಲಭವಾಗಿ ಕಣ್ಣಿಗೆ ಕಾಣಿಸುತ್ತಿಲ್ಲ. ತೋಟದಲ್ಲಿ ಎಷ್ಟು ಮಿಡತೆಗಳಿರಬಹುದು ಎಂಬ ಅಂದಾಜೂ ಸಿಗುತ್ತಿಲ್ಲ. ಇದರೊಂದಿಗೆ ಈ ಮಿಡತೆಗಳು ರವೀಂದ್ರ ಅವರ ತೋಟದಲ್ಲಿ ಮಾತ್ರವಿದೆಯಾ ? ಸುತ್ತಮುತ್ತಲ ತೋಟಗಳಲ್ಲೂ ಬೀಡುಬಿಟ್ಟಿವೆಯಾ? ಎಂಬ ಬಗ್ಗೆಯೂ ಸ್ಪಷ್ಟತೆಯಿಲ್ಲವಾಗಿದೆ. ತಮ್ಮ ತೋಟದಲ್ಲಿ ನೂರಾರು ಮಿಡತೆಗಳು ಕಂಡುಬಂದ ಹಿನ್ನೆಲೆ ರವೀಂದ್ರ ಅವರು ಅವುಗಳ ಮೇಲೆ ನಿನ್ನೆ ಕೀಟನಾಶಕ ಸಿಂಪಡಿಸಿದ್ದು, ಇಂದು ಮಿಡತೆಗಳು ಕಣ್ಮರೆಯಾಗಿವೆ. ಕೀಟನಾಶಕದಿಂದ ಮಿಡತೆಗಳು ಸಾವನ್ನಪ್ಪಿದವಾ ? ಅಥವಾ ಬೇರೆಡೆಗೆ ಹಾರಿ ಹೋದವಾ ? ಎಂಬ ಬಗ್ಗೆಯೂ ಸ್ಪಷ್ಟತೆಯಿಲ್ಲ. ಈ ಬಗ್ಗೆ ‘ಶಕ್ತಿ’ ಯೊಂದಿಗೆ ಮಾತನಾಡಿದ ರವೀಂದ್ರ ಅವರು, ಇದೇ ಮೊದಲ ಬಾರಿಗೆ ಇಂತಹ ಮಿಡತೆಗಳ ದಂಡು ತೋಟದಲ್ಲಿ ಕಂಡುಬಂದಿದ್ದು, ಅವುಗಳು ಕುಳಿತ ಸ್ಥಳದಲ್ಲಿದ್ದ ಕಾಫಿ ಎಲೆಗಳನ್ನು ತಿಂದು ನಾಶಪಡಿಸಿವೆ. ಹಚ್ಚಹಸಿರಿನ ಎಲೆಗಳೇ ಇವುಗಳ ಆಹಾರ ಎಂಬದು ವೇದ್ಯವಾಗಿದ್ದು, ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಇಂತಹ ಮಿಡತೆಗಳಿಂದ ಕೃಷಿಯನ್ನು ರಕ್ಷಿಸಬೇಕಿದೆ’ ಎಂದು ಅಭಿಪ್ರಾಯಿಸಿದ್ದಾರೆ.
ರಕ್ಕಸ ಮಿಡತೆಗಳಲ್ಲ: ಸಿಂಗನಳ್ಳಿಯಲ್ಲಿ ಕಂಡುಬಂದ ಮಿಡತೆಗಳ ಗುಂಪು ಡೆಸರ್ಟ ಲೋಕಸ್ಟ್ ರಕ್ಕಸ ಮಿಡತೆಗಳ ಗುಂಪಲ್ಲ. ಇವುಗಳು ಸಾಧಾರಣ ತಳಿಯ ಮಿಡತೆಗಳಾಗಿದ್ದು, ಇವುಗಳಿಂದ ಕೃಷಿಗೆ ಹೆಚ್ಚಿನ ಹಾನಿಯಿಲ್ಲ ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರುಳೀಧರ್ ‘ಶಕ್ತಿ’ಗೆ ತಿಳಿಸಿದ್ದಾರೆ. ಸಿಂಗನಳ್ಳಿ ಗ್ರಾಮಕ್ಕೆ ಕಾಫಿ ಮಂಡಳಿಯ ಸಿಬ್ಬಂದಿಗಳಾದ ಲಕ್ಷ್ಮೀಕಾಂತ್, ಮಾಚಯ್ಯ ಅವರುಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಬಯಲು ಸೀಮೆಯಲ್ಲಿ ಹಸಿರು ವಲಯ ಕಡಿಮೆ ಇದ್ದು, ಲಕ್ಷಾಂತರ ಮಿಡತೆಗಳು ಒಂದೇ ಬಾರಿ ಧಾಳಿಯಿಟ್ಟರೆ ಕೃಷಿ ಹಾನಿಯಾಗುತ್ತವೆ. ಆದರೆ ಕೊಡಗಿನಂತಹ ಹಸಿರು ವಲಯಕ್ಕೆ ಅಂತಹ ರಕ್ಕಸ ಮಿಡತೆಗಳು ಬಂದರೂ ಅಷ್ಟಾಗಿ ತೊಂದರೆಯಿಲ್ಲ ಎಂದರು. ಲಕ್ಷಾಂತರ ಮಿಡತೆಗಳು ಬಂದರೂ ಅಲ್ಲಲ್ಲಿ ಹಂಚಿ ಹೋಗುತ್ತವೆ. ಇಲ್ಲಿನ ಅರಣ್ಯ, ಕಾಡು, ಬೇಲಿಯಲ್ಲೂ ಹಸಿರಿನ ಎಲೆಗಳಿವೆ. ಆದರೆ ಬಯಲು ಸೀಮೆಯಲ್ಲಿ ಕಾಡುಗಳ ಪ್ರಮಾಣ ಕಡಿಮೆಯಿದ್ದು, ಕೃಷಿ ಕೈಗೊಂಡರೆ ಫಸಲಿನ ಹಸಿರಿಗೆ ಮಿಡತೆಗಳು ಧಾಳಿ ನಡೆಸುತ್ತವೆ. ಹಾಗಾಗಿ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಅಭಿಪ್ರಾಯಿಸಿದ್ದಾರೆ.
- ವಿಜಯ್ ಹಾನಗಲ್