ಮಡಿಕೇರಿ, ಮೇ 29: ಆಸ್ತಿ ತೆರಿಗೆ ಹೆಚ್ಚಳ ಕುರಿತಂತೆ ರಾಜ್ಯ ಸರಕಾರ ತೆರಿಗೆದಾರರಿಗೆ ಸಣ್ಣ ಅನುಕೂಲ ಕಲ್ಪಿಸಿದ್ದು ಶೇ. 5ರ ರಿಯಾಯಿತಿ ಕಾಲಾವಧಿಯನ್ನು ಈ ತಿಂಗಳ ಅಂತ್ಯದ ಬದಲಾಗಿ ಜುಲೈ ಅಂತ್ಯ ದವರೆಗೆ ವಿಸ್ತರಿಸಿದ್ದು ತೆರಿಗೆದಾರರು ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿದೆ. ಮಡಿಕೇರಿ ನಗರಸಭೆ ಸೇರಿದಂತೆ ವೀರಾಜಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿಗಳಲ್ಲಿ ಆಸ್ತಿ ತೆರಿಗೆ ಶೇ. 15 ರಿಂದ 20 ರಷ್ಟು ಏರಿಕೆ ಆಗಿರುವ ಬಗ್ಗೆ ‘ಶಕ್ತಿ’ಯಲ್ಲಿ ವಿಸ್ತøತ ವರದಿ ಪ್ರಕಟಗೊಂಡಿತ್ತು. ತಕ್ಷಣ ಸ್ಪಂದಿಸಿದ್ದ ಶಾಸಕ ಅಪ್ಪಚ್ಚು ರಂಜನ್ ಅವರು ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದರು. ಅಲ್ಲದೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಕೂಡ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಮಡಿಕೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿವರವಾದ ಮನವಿಯನ್ನು ಸಲ್ಲಿಸಿತ್ತು.ಸ್ಥಳದಲ್ಲೇ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ ಸಚಿವರು ಈ ಬಗ್ಗೆ ಜಿಲ್ಲಾಧಿಕಾರಿ ಅವರು ಹೆಚ್ಚುವರಿ ಆಗಿರುವ ತೆರಿಗೆಯನ್ನು ಕಡಿಮೆ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲು ಸೂಚಿಸಿದ್ದರು. ಅಲ್ಲದೆ, ಬೆಂಗಳೂರಿಗೆ ತೆರಳಿದ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ರವಿಶಂಕರ್ ಅವರು ಸುತ್ತೋಲೆ ಕಳುಹಿಸಿದ್ದು ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ರಿಯಾಯಿತಿ ದರದಲ್ಲಿ ಆಸ್ತಿ ತೆರಿಗೆಯನ್ನು ಪಾವತಿ ಸಲು ಇದ್ದ ಮೇ 30ರ ಕಾಲಾವಧಿ ಯನ್ನು ಜುಲೈ 31ರ ವರೆಗೆ ವಿಸ್ತರಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ ಆಸ್ತಿ ತೆರಿಗೆ ಪಾವತಿ ಮೇಲಿನ ಪಾವತಿ ವಿಳಂಬ ದಂಡ ವನ್ನು ಜುಲೈ 1ರ ಅನ್ವಯ ಬದಲಾಗಿ ನವೆಂಬರ್ ಒಂದಕ್ಕೆ ವಿಸ್ತರಿಸಿ ಆದೇಶವನ್ನು ಹೊರಡಿಸಲಾಗಿದೆ.
ರಿಯಾಯಿತಿ ಹಾಗೂ ದಂಡಕ್ಕೆ ಸಂಬಂಧಿಸಿದಂತೆ ನೂತನ ಆದೇಶ ಜಾರಿಗೊಳಿಸಲಾಗಿದೆಯಾದರೂ ಹೆಚ್ಚಳವಾದ ಆಸ್ತಿ ತೆರಿಗೆ ಬಗ್ಗೆ ಯಾವುದೇ ಪ್ರಸ್ತಾವನೆ ಮಾಡದಿ ರುವುದು ತೆರಿಗೆದಾರರಲ್ಲಿ ಆತಂಕ ಮೂಡಿಸಿದೆ. ಆದರೂ ಮುಂದಿನ ದಿನಗಳಲ್ಲಿ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ಹೊಂದಿದ್ದಾರೆ.