ಸೋಮವಾರಪೇಟೆ, ಮೇ 29: ಕಳೆದ ಕೆಲ ವರ್ಷಗಳಿಂದ ಮುನ್ನೆಲೆಗೆ ಬಂದಿರುವ ಸೀಡ್‍ಬಾಲ್ ಕಲ್ಪನೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಕೆಗೆ ಬರುತ್ತಿದೆ. ಮಳೆಗಾಲದಲ್ಲಿ ಬರಡು ಪ್ರದೇಶದಲ್ಲಿ ಸೀಡ್‍ಬಾಲ್‍ಗಳನ್ನು ಎಸೆಯುವ ಮೂಲಕ ವಿವಿಧ ಜಾತೀಯ ಗಿಡಗಳ ಬೆಳವಣಿಗೆಗೆ ಇದು ಸಹಕಾರಿಯಾಗುತ್ತಿದೆ. ಸೋಮವಾರ ಪೇಟೆ ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಾ ಪ್ರಮುಖರಾದ ಸಿ.ಪಿ. ದಿವ್ಯಕುಮಾರ್ ಅವರ ಶಾಂತಳ್ಳಿಯ ಮನೆಯಲ್ಲಿ ವಿವಿಧ ತಳಿಯ ಗಿಡಗಳ 350 ಬೀಜದುಂಡೆಗಳು ಸಿದ್ಧವಾಗಿವೆ. ಲಾಕ್‍ಡೌನ್ ಹಿನ್ನೆಲೆ ಮಕ್ಕಳೂ ಮನೆಯಲ್ಲಿಯೇ ಉಳಿದಿದ್ದು, ಸದ್ಯದ ಕೃಷಿ ಕಾರ್ಯವೂ ಮುಗಿದಿರುವದ ರಿಂದ ದಿವ್ಯಕುಮಾರ್ ಅವರು ಮಕ್ಕಳನ್ನು ಸೇರಿಸಿಕೊಂಡು ಹುಣಸೆ, ಹಲಸು, ಸಪೋಟ, ಹಾಲಿಹಣ್ಣುಗಳ ಬೀಜ ದುಂಡೆಗಳನ್ನು ತಯಾರಿಸಿದ್ದು, ಮಳೆ ಪ್ರಾರಂಭ ವಾಗುತ್ತಲೇ ಅರಣ್ಯ ಪ್ರದೇಶದಲ್ಲಿನ ಬರಡು ಸ್ಥಳದಲ್ಲಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮುಂದಿನ ತಿಂಗಳ 5 ರಂದು ಪರಿಸರ ದಿನಾಚರಣೆಯ ಹಿನ್ನೆಲೆ ತಾಲೂಕಿನಾದ್ಯಂತ ಸಂಘದ ಕಾರ್ಯಕರ್ತರ ಮನೆಗಳಲ್ಲಿ ಸೀಡ್‍ಬಾಲ್ ತಯಾರಿ ಕಾರ್ಯ ನಡೆಯುತ್ತಿದೆ. ಪರಿಸರವನ್ನು ಸಂರಕ್ಷಿಸಿದರೆ ಮಾತ್ರ ಮಾನವ ಸಹಜವಾಗಿ ಜೀವಿಸಲು ಸಾಧ್ಯ. ಈ ಹಿನ್ನೆಲೆ ಪ್ರತಿ ಮನೆಗಳಿಂದಲೂ ಸೀಡ್ ಬಾಲ್ ತಯಾರಿ ನಡೆಯಬೇಕು ಎಂಬದು ಸಂಘದ ಅಪೇಕ್ಷೆಯಾಗಿದೆ ಎಂದು ಆರ್‍ಎಸ್‍ಎಸ್‍ನ ಪ್ರಮುಖರು ತಿಳಿಸಿದ್ದಾರೆ. ಈ ಸೀಡ್ ಬಾಲ್‍ಗಳನ್ನು ಮಳೆಗಾಲದಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಹಾಕಲಾಗುವದು. ಇದರೊಂದಿಗೆ ಉತ್ತಮ ಪರಿಸರ ನಿರ್ಮಾಣಕ್ಕೆ ಪೂರಕವಾಗಿ ಮನೆಯಲ್ಲಿ ಪೈಪ್ ಕಾಂಪೋಸ್ಟ್ ತಯಾರಿಯೂ ನಡೆಯುತ್ತಿದೆ ಎಂದು ಸಂಘದ ಪ್ರಮುಖರು ಮಾಹಿತಿ ನೀಡಿದ್ದಾರೆ.