ಕೂಡಿಗೆ, ಮೇ 29: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಅನೇಕ ಕೊಳವೆ ಬಾವಿಗಳಿಂದ ಬರುತ್ತಿರುವ ನೀರು ಕುಡಿಯಲು ಮತ್ತು ವ್ಯವಸಾಯಕ್ಕೆ ಬಳಕೆ ಮಾಡಲು ಯೋಗ್ಯ ವಾಗುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು. ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಅಲ್ಲಿನ 30ಕ್ಕೂ ಹೆಚ್ಚು ಗ್ರಾಮಸ್ಥರು ಕೊಳವೆ ಬಾವಿ ನೀರಿನ ಸಮಸ್ಯೆಗಳ ಬಗ್ಗೆ ಮನವಿ ಪತ್ರವನ್ನು ಸಲ್ಲಿಸಿದರು. ಮನವಿ ಪತ್ರದ ಹಿನ್ನೆಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಬಂಧಿಸಿದ ಇಲಾಖೆ ಮತ್ತು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ, ತಾಲೂಕು ತಹಶೀಲ್ದಾರರ ಕಚೇರಿಗೆ ಪತ್ರವನ್ನು ಕಳುಹಿಸಲಾಗಿತ್ತು.
ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ತೋಟಗಾರಿಕೆ ಇಲಾಖೆಯ ಅಧಿಕಾರಿ ಕಾವ್ಯ ಅವರು ಬಸವನತ್ತೂರು ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ರೈತರುಗಳಾದ ಲಿಂಗಯ್ಯ, ಶಿವಕುಮಾರ್, ವರದರಾಜ್ ದಾಸ್, ಗೋವಿಂದ್ ರಾಜ್ ದಾಸ್, ದೇವರಾಜ್, ಲಿಂಗರಾಜ್, ಲಕ್ಮಯ್ಯ ಸೇರಿದಂತೆ ಅನೇಕ ರೈತರು ಹಾಜರಿದ್ದರು.