ಸುಂಟಿಕೊಪ್ಪ, ಮೇ 29: ಪುಟ್ಟ ಗ್ರಾಮದ ಹಲವೆಡೆ ಉರಿಯದ ಬೀದಿದೀಪ. ಅವೈಜ್ಞಾನಿಕವಾಗಿ ಅರ್ಧಕ್ಕೆ ನಿರ್ಮಿಸಿದ ಗಟಾರದಿಂದ ಮನೆಯೊಳಗೆ ಪ್ರವಹಿಸುವ ಕೊಳಚೆ ನೀರು. ಒಂದೆಡೆ ಡಾಮರು ಕಾಣದ ಹಾದಿ. ಇನ್ನೊಂದೆಡೆ ಗುಂಡಿ ಬಿದ್ದಿರುವ ರಸ್ತೆ. ಹೊಂಡಾವೃತ ರಸ್ತೆಯಿಂದಾಗಿ ಗ್ರಾಮದ ಒಳಗೆ ಬಾರದ ಗ್ಯಾಸ್ ಸರಬರಾಜು ಮಾಡುವ ವಾಹನ. ಅನೇಕ ಮಂದಿ ಬಡ ಜನತೆಗೆ ಇನ್ನೂ ಸಿಗದ ಆಹಾರ ಕಿಟ್. ಈ ಎಲ್ಲಾ ಅವ್ಯವಸ್ಥೆಗಳ ನಡುವೆ ಕಾಡಾನೆಗಳ ಹಾವಳಿ ಒಂದೆಡೆಯಾದರೆ ಸಾಲ ಮರುಪಾವತಿಸಿ ಎಂದು ಹಿಂದೆ ಬಿದ್ದಿರುವ ಮೈಕ್ರೋ ಫೈನಾನ್ಸ್ ಎಂಬ ಬೇತಾಳಗಳ ಕಾಟ. ಸರಕಾರ ಉಚಿತವಾಗಿ ಅನ್ನಭಾಗ್ಯವನ್ನು ಕರುಣಿಸುತ್ತಿದ್ದರೂ ಬೇರೆ ಸಾಮಗ್ರಿಗಳನ್ನು ಖರೀದಿಸಬೇಕೆನ್ನುವ ಸೊಸೈಟಿಯ ಅಲಿಖಿತ ನಿಯಮ. 120 ಕುಟುಂಬಗಳ 600ಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಇಲ್ಲಿ ಸರ್ವ ಧರ್ಮೀಯರು, ವಿವಿಧ ಜಾತಿಯವರು ಸೌಹಾರ್ಧತೆಯಿಂದ ಜೀವಿಸುತ್ತಿದ್ದಾರೆ. ಪುಟ್ಟ ಭಾರತ ಎಂತಲೂ ಕರೆಯಬಹುದಾದರೂ ಇಲ್ಲಿನ ಜನತೆಗೆ ಈ ಮೇಲಿನ ಸಮಸ್ಯೆಗಳೇ ದೊಡ್ಡ ಭಾರವಾಗಿದೆ. ಅಂದದ ಜೀವನ ನಡೆಸಬೇಕಾದ ಅಂದಗೋವೆ ಪೈಸಾರಿಯ ನಿವಾಸಿಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಅಂಧಕಾರ ಕ್ಕೊಳಗಾಗುವಂತಾಗಿದೆ.

ಬೀದಿ ದೀಪ ಉರಿಯುತ್ತಿಲ್ಲ : ಸುಂಟಿಕೊಪ್ಪ - ಕುಶಾಲನಗರ ನಡುವಿನ ರಾಷ್ಟ್ರೀಯ ಹೆದ್ದಾರಿ ಬದಿಯ 7ನೇ ಹೊಸಕೋಟೆಯಿಂದ ಕೂಗಳತೆ ದೂರದಲ್ಲಿ ಅಂದಗೋವೆ ಪೈಸಾರಿ ಇದೆ. ಗ್ರಾಮವು ನಾಲ್ಕು ಕಿ.ಮೀ. ದೂರದಲ್ಲಿರುವ ಈ ಪ್ರದೇಶ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೊಳಪಟ್ಟಿದೆ.

ಮೂವರು ಸದಸ್ಯರು ಗ್ರಾಮವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಅಂದಗೋವೆ ಪೈಸಾರಿ ಮೂಲಭೂತ ಸೌಲಭ್ಯಗಳಿಂದ ಬಹು ಹಿಂದಕ್ಕೆ ಹೋಗಿದೆ. ಗ್ರಾಮದ ಹಲವೆಡೆ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ.

ಆದರೆ ಕೆಲವು ಕಡೆಗಳಲ್ಲಿ ಬೀದಿದೀಪ ಅಳವಡಿಸದಿರುವುದರಿಂದ ರಾತ್ರಿಯ ವೇಳೆ ತುರ್ತು ಸಂದರ್ಭಗಳಲ್ಲಿ ಬೆಳಕಿಲ್ಲದೇ ಗ್ರಾಮದಲ್ಲಿ ತಿರುಗಾಡಲು ತೊಂದರೆಯಾಗುತ್ತಿದೆ. ಯಾರಾದರೂ ಕಿಡಿಗೇಡಿಗಳು ಕತ್ತಲೆಯಲ್ಲಿ ಮೈಮೇಲೆ ಎರಗಿದರೆ ದೇವರ ಮೊರೆ ಹೋಗುವುದು ಅನಿವಾರ್ಯವಾಗಿದೆ.

ಮದಗಜಗಳ ದಾಂಧಲೆ: ಪಕ್ಕದಲ್ಲಿಯೇ ಅತ್ತೂರು ಮೀಸಲು ಅರಣ್ಯವಿರುವುದರಿಂದ ಕಾಡಾನೆಗಳು ಹತೋಟಿ ಇಲ್ಲದೇ ಗ್ರಾಮದೊಳಗೆ ಧಾಂಗುಡಿ ಇಡುತ್ತಿರುತ್ತವೆ. ಬೀದಿ ದೀಪ ಉರಿಯದ ವಿದ್ಯುತ್ ಕಂಬಗಳ ಬಳಿ ಸುಳಿದಾಡುವ ಮದಗಜಗಳ ಇರುವಿಕೆ ಅರಿಯದೇ ಅವುಗಳ ಬಾಲ ಸೋಂಕಿದರೂ ಹೃದಯಾಘಾತ ಕ್ಕೊಳಗಾಗಿ ಜೀವ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳು ನಿರಂತರವಾಗಿ ಲಗ್ಗೆಯಿಡುತ್ತಿರುವುದರಿಂದ ಕಾಫಿ ತೋಟದ ಗಿಡಗಳು ಧ್ವಂಸವಾಗುವು ದರೊಂದಿಗೆ ಬಾಳೆ, ಹಲಸು ಮತ್ತಿತರ ಫಸಲು ಹೇಳ ಹೆಸರಿಲ್ಲದಂತಾಗುತ್ತಿವೆ.

ಮನೆಯೊಳಗೆ ಚರಂಡಿ ನೀರು : ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಯಿಂದ ರೂ. 1 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಚರಂಡಿಯ ಕೊನೆ ಭಾಗದಲ್ಲಿ ಮಳೆ ಅಥವಾ ಕೊಳಚೆ ನೀರು ಮುಂದಕ್ಕೆ ಹರಿದು ಹೋಗದಂತೆ ಬಂದ್ ಮಾಡಲಾಗಿದೆ. ಇದರಿಂದ ಮಳೆ ಅಥವಾ ಕೊಳಚೆ ನೀರು ಮುಂದಕ್ಕೆ ಹರಿದು ಹೋಗಲಾಗದೆ ಗಟಾರದ ಬದಿಯಲ್ಲಿರುವ ಎರಡು ಮನೆಯೊಳಗೆ ಪ್ರವಹಿಸುತ್ತಿದೆ. ಮನೆಯೊಳಗೆ ಮತ್ತು ಆವರಣದಲ್ಲಿ ಕೊಳಚೆ ನೀರು ನಿಂತು ದುರ್ವಾಸನೆಯೊಂದಿಗೆ ಸೊಳ್ಳೆ ಮತ್ತಿತರ ಕ್ರಿಮಿ- ಕೀಟಗಳು ಹೆಚ್ಚಾಗಿ ಈ ಮನೆಗಳ ನಿವಾಸಿಗಳು ಮತ್ತು ಜಾನುವಾರುಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವಂತಾಗಿದೆ.

ಗಗನ ಕುಸುಮವಾದ ಆಹಾರ ಕಿಟ್: ಈ ಗ್ರಾಮದ ಬಹುತೇಕ ಮಂದಿ ಬಡ ಕೂಲಿ ಕಾರ್ಮಿಕರಾಗಿದ್ದು ಲಾಕ್ ಡೌನ್ ಆರಂಭವಾದಲ್ಲಿಂದ ಕೂಲಿ ದೊರೆಯದೆ ದಿನನಿತ್ಯದ ಆಹಾರ ಪದಾರ್ಥದ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಎಲ್ಲೆಡೆ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಈ ಗ್ರಾಮದ ಬಹುತೇಕ ಮಂದಿಗೆ ಆಹಾರ ಕಿಟ್ ದೊರೆಯದೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಇತರ ಸಾಮಗ್ರಿ ಖರೀದಿಸಿ : ಸರಕಾರ ಉಚಿತವಾಗಿ ಪಡಿತರ ವಿತರಿಸುತ್ತಿದೆ. ಆದರೆ ಈ ಗ್ರಾಮಸ್ಥರು ಅವಲಂಬಿಸಿರುವ 7ನೇ ಹೊಸ ಕೋಟೆಯ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತವಾಗಿ ಅಕ್ಕಿ ದೊರೆಯುತ್ತಿದೆ ಯಾದರೂ ಕನಿಷ್ಟ ರೂ. 100 ಮೌಲ್ಯದ ಇತರ ಸಾಮಗ್ರಿಗಳನ್ನು ಖರೀದಿಸಬೇಕೆಂಬ ಅಲಿಖಿತ ಫರ್ಮಾನು ಹೊರಡಿಸಿ ಅನ್ನ ಭಾಗ್ಯಕ್ಕೆ ಕನ್ನ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ.

ರಸ್ತೆಯೊಳಗೆ ಹೊಂಡ : ಇಲ್ಲಿನ ಬಹುತೇಕ ರಸ್ತೆಗಳು ಹೊಂಡಗಳಿಂದ ಆವೃತವಾಗಿರುವುದರಿಂದ ಗ್ಯಾಸ್ ವಾಹನ ಗ್ರಾಮದೊಳಗೆ ಬರಲು ಹಿಂದೇಟು ಹಾಕುತ್ತಿದೆ. ಇದರಿಂದಾಗಿ ಪುರುಷÀರಿಲ್ಲದ ಮನೆಯ ಮಹಿಳೆಯರೂ ಸೇರಿದಂತೆ ಇನ್ನಿತರ ನಿವಾಸಿಗಳು ಅನತಿ ದೂರದಲ್ಲಿರುವ ಹೆದ್ದಾರಿಗೆ ಖಾಲಿ ಸಿಲಿಂಡರನ್ನು ಹೊತ್ತೊಯ್ದು ನಂತರ ತುಂಬಿದ ಸಿಲಿಂಡರನ್ನು ತರಬೇಕಾಗಿದೆ. ದಶಕದ ಹಿಂದೆ ಜಲ್ಲಿ ಕಲ್ಲಿನಿಂದ ಮೆಟ್ಲಿಂಗ್ ಮಾಡಿದ ರಸ್ತೆ ಇನ್ನೂ ಕೂಡ ಡಾಂಬರ್ ಭಾಗ್ಯ ಕಂಡಿರುವುದಿಲ್ಲ.

-ರಾಜು ರೈ