ಕುಶಾಲನಗರ, ಮೇ 27: ಕೊರೊನಾ ವೈರಸ್‍ನಿಂದ ರಕ್ಷಣೆ ಪಡೆಯುವುದರೊಂದಿಗೆ ಕೊಡಗು ಜಿಲ್ಲೆಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಕಳೆದ 60 ದಿನಗಳಿಂದ ಹರಸಾಹಸ ಪಟ್ಟ ಕುಶಾಲನಗರ ಗಡಿಭಾಗದ ಕೋವಿಡ್-19 ತಪಾಸಣಾ ಕೇಂದ್ರದ ನೂರಾರು ಸಂಖ್ಯೆಯ ಕೊರೊನಾ ವಾರಿಯರ್ಸ್‍ಗೆ ಇದೀಗ ಬಹುತೇಕ ನಿರಾಳರಾದಂತೆ ಕಂಡುಬರುತ್ತಿದ್ದಾರೆ. ಮಾರ್ಚ್ 22 ರಿಂದ ಪ್ರಾರಂಭಗೊಂಡ ಸ್ವಯಂ ಬಂದ್ ನಂತರದ ಎರಡು ತಿಂಗಳ ಲಾಕ್‍ಡೌನ್ ಅವಧಿಯಲ್ಲಿ ಕುಶಾಲನಗರ ಕೊಪ್ಪ ಗಡಿಭಾಗದ ತಪಾಸಣಾ ಕೇಂದ್ರದಲ್ಲಿ ಪೊಲೀಸ್, ಕಂದಾಯ ಮತ್ತು ಆರೋಗ್ಯ ಇಲಾಖೆಯ ಸುಮಾರು 500ಕ್ಕೂ ಅಧಿಕ ಮಂದಿ ಕೊರೊನಾ ವಾರಿಯರ್ಸ್ ಕರ್ತವ್ಯ ನಿರತರಾಗಿದ್ದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಪಿ. ಸುಮನ್ ಅವರ ಮಾರ್ಗದರ್ಶನದಲ್ಲಿ ತಹಶೀಲ್ದಾರ್ ಗೋವಿಂದರಾಜ್ ನೇತೃತ್ವದಲ್ಲಿ ಸೋಮವಾರಪೇಟೆ ತಾಲೂಕಿನ ಕಂದಾಯ ನಿರೀಕ್ಷಕರುಗಳು, ಸಿಬ್ಬಂದಿಗಳು, ಡಿವೈಎಸ್ಪಿ ಹೆಚ್.ಎಂ. ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎಂ. ಮಹೇಶ್ ನೇತೃತ್ವದಲ್ಲಿ ಸುಂಟಿಕೊಪ್ಪ, ಕುಶಾಲನಗರ ವ್ಯಾಪ್ತಿಯ ಠಾಣಾಧಿಕಾರಿಗಳು, ಸಹಾಯಕ ಠಾಣಾಧಿಕಾರಿಗಳು, ಸಿಬ್ಬಂದಿಗಳು, ಹೋಂ ಗಾಡ್ರ್ಸ್ ಕರ್ತವ್ಯ ನಿರ್ವಹಿಸಿದರೆ ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ನೋಡಲ್ ಅಧಿಕಾರಿ ವರದರಾಜು, ನೇತೃತ್ವದಲ್ಲಿ ವೈದ್ಯರು ಸೇರಿದಂತೆ 300ಕ್ಕೂ ಅಧಿಕ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಯುದ್ದೋಪಾದಿ ಯಲ್ಲಿ ಕರ್ತವ್ಯ ನಿರತರಾಗಿದ್ದು ಕಂಡುಬಂದಿತ್ತು.
ಲಾಕ್‍ಡೌನ್ ಸಂದರ್ಭ ಕೊಡಗು ಜಿಲ್ಲೆಗೆ ಬೆಂಗಳೂರು, ಮೈಸೂರು, ಹಾಸನ ಭಾಗದಿಂದ ಬರುವ ಎಲ್ಲಾ ವಾಹನಗಳಿಗೆ ಕುಶಾಲನಗರದ ತಪಾಸಣಾ ಕೇಂದ್ರ ಏಕೈಕ ಪ್ರವೇಶದ್ವಾರವಾಗಿದ್ದ ಹಿನ್ನೆಲೆ ದಿನದ 24 ಗಂಟೆಗಳ ಕಾಲ ನಿರಂತರ ಗಮನಿಸಬೇಕಾದ ಅವಶ್ಯಕತೆ ಉಂಟಾಗಿತ್ತು. ಕೇವಲ 15 ದಿನಗಳಲ್ಲಿ ಕೊಡಗು ಜಿಲ್ಲೆಗೆ ಈ ಗೇಟ್ ಮೂಲಕ 9 ಸಾವಿರಕ್ಕೂ ಅಧಿಕ ಜನರು ಪ್ರವೇಶಿಸಿದ್ದು, ಜಿಲ್ಲೆಯ ಮೂಲಕ 25 ಸಾವಿರಕ್ಕೂ ಅಧಿಕ ಪ್ರಯಾಣಿಕರು ದಕ್ಷಿಣ ಕನ್ನಡ, ಉಡುಪಿ ಮತ್ತಿತರ ಕಡೆಗೆ ತೆರಳಿರುವ ದಾಖಲೆಗಳನ್ನು ಕಾಣಬಹುದು. ಅಲ್ಲದೆ ನೆರೆಯ ರಾಜ್ಯಗಳಿಂದ ಬಂದ ನೂರಾರು ಪ್ರಯಾಣಿಕರನ್ನು ಕ್ವಾರಂಟೈನ್‍ಗೆ ಒಳಪಡಿಸುವ ಕೆಲಸವೂ ನಡೆದಿತ್ತು.
ಪ್ರಾರಂಭದಲ್ಲಿ ಕುಶಾಲನಗರ ಗಡಿಭಾಗದ ಕೋವಿಡ್ ತಪಾಸಣಾ ಕೇಂದ್ರ ರಾಜ್ಯದಾದ್ಯಂತ ಹೆಸರಾಗುವುದರೊಂದಿಗೆ ಗಡಿಭಾಗದ ಕೇಂದ್ರದಲ್ಲಿ ಅಕ್ರಮವಾಗಿ ನುಸುಳಿ ಒಳಬರುವ ಪ್ರಕರಣಗಳು ಪತ್ತೆಯಾದವು. ಒಂದೆಡೆ ಗಡಿಭಾಗದಿಂದ ನದಿ ದಾಟಿ ಹಲವರು ಒಳನುಗ್ಗಿದರೆ ಇನ್ನು ಪ್ರಕರಣವೊಂದರಲ್ಲಿ ಬೆಂಗಳೂರಿನಿಂದ ಅಂಬ್ಯುಲೆನ್ಸ್ ವಾಹನವೊಂದರಲ್ಲಿ ರೋಗಿಯಂತೆ ನಟಿಸಿ ಸಿಕ್ಕಿಹಾಕಿಕೊಂಡ ಜನರೂ ಇದ್ದಾರೆ. ಕಂಟೇನರ್ ಒಂದರಲ್ಲಿ 30-40 ಜನರನ್ನು ತುಂಬಿಸಿ ತಮಿಳುನಾಡಿಗೆ ಸಾಗಿಸುವ ಪ್ರಕರಣವೂ ಇದೇ ಗೇಟ್‍ನಲ್ಲಿ ಪತ್ತೆಯಾಗಿತ್ತು. ಇಂತಹ ಹಲವರನ್ನು ಪತ್ತೆಹಚ್ಚಿ ಕ್ವಾರಂಟೈನ್‍ಗೆ ಒಳಪಡಿಸಿದ ಹಲವು ಪ್ರಕರಣಗಳು ಈ ಗಡಿ ಕೇಂದ್ರದಲ್ಲಿ ಕಂಡುಬಂದಿತ್ತು. ಇದರ ನಡುವೆ ಗೇಟ್‍ಗೆ ವಾಹನಗಳು ಬರುತ್ತಿದ್ದಂತೆಯೇ ಜಿಲ್ಲೆಗೆ ಪ್ರವೇಶಿಸಲು ಮುಖ್ಯಮಂತ್ರಿಗಳ ಕಚೇರಿ ಸೇರದಂತೆ ಹಲವು ಗಣ್ಯರು ಪ್ರಭಾವ ಬೀರಿದ್ದರೂ ಅದು ಕೂಡ ಈ ಕೇಂದ್ರದಲ್ಲಿ ಉಪಯೋಗಕ್ಕೆ ಬಂದಿಲ್ಲ ಎಂದರೆ ತಪ್ಪಾಗಲಾರದು.
ನಕಲಿ ಪಾಸ್‍ಗಳನ್ನು ಪಡೆದುಕೊಂಡು ಐಷರಾಮಿ ಕಾರುಗಳಲ್ಲಿ ಬಂದು ಹೋಗುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚುವಲ್ಲಿಯೂ ಈ ಕೊರೊನಾ ವಾರಿಯರ್ಸ್ ಯಶಸ್ವಿಯಾಗಿದ್ದಾರೆ. ಹಲವು ಐಷಾರಾಮಿ ವಾಹನಗಳು ಕೂಡ ಪೊಲೀಸರ ವಶಕ್ಕೆ ಪಡೆದು ನಂತರ ಬಿಡುಗಡೆಗೊಂಡಿದ್ದ ಪ್ರಕರಣಗಳು ನಡೆದಿದೆ. ಆಂಬ್ಯುಲೆನ್ಸ್‍ಗಳ ಮೂಲಕ ರೋಗಿಗಳ ನೆಪದಲ್ಲಿ ಗೇಟ್ ಪಾಸ್ ಆಗಲು ಪ್ರಯತ್ನಿಸಿ ವಿಫಲವಾದ ಹಲವು ಪ್ರಕರಣಗಳು ಇಲ್ಲಿ ಕಂಡುಬಂದಿತ್ತು.
ರಾಜ್ಯದ ಹತ್ತು ಹಲವು ತಪಾಸಣಾ ಕೇಂದ್ರಗಳನ್ನು ತಪ್ಪಿಸಿಕೊಂಡು ಬಂದ ಹಲವಾರು ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಕುಶಾಲನಗರ ಕೋವಿಡ್-19 ತಪಾಸಣಾ ಕೇಂದ್ರ ದಿನದ 24 ಗಂಟೆ ಕಾರ್ಯನಿರ್ವಹಿಸುವುದರೊಂದಿಗೆ ಕೊಡಗಿಗೆ ಒಂದೇ ಒಂದು ಸೋಂಕು ತಗುಲಿದ ವ್ಯಕ್ತಿಯನ್ನು ಒಳನುಸುಳದಂತೆ ನೋಡಿಕೊಂಡಿದ್ದು ನಿಜಕ್ಕೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಂದರ್ಭ ನೆರೆಯ ಕುಶಾಲನಗರ ಕೊಪ್ಪ ಗಡಿಭಾಗದ ಜನತೆಗೆ ಸೇರಿದಂತೆ ಅನವಶ್ಯಕವಾಗಿ ಓಡಾಡುತ್ತಿದ್ದ ವ್ಯಕ್ತಿಗಳಿಗೆ ಮಾತ್ರ ಈ ಕೇಂದ್ರದ ಕಟ್ಟುನಿಟ್ಟಿನ ನಿಯಮ ಕಹಿಯಾದರೂ ನಂತರ ಅದು ಅರ್ಥೈಸಿಕೊಳ್ಳುವಂತಿತ್ತು.
60 ದಿನಗಳ ಕಾಲ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದ ಮೂರು ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಕಾರ್ಯವೈಖರಿ ಕುರಿತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ನಡುವೆ ದಿನದ 12 ಗಂಟೆಗಳ ಕಾಲ ಸತತವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಅವರ ಸಂಕಷ್ಟದ ಬಗ್ಗೆ ‘ಶಕ್ತಿ’ ವರದಿ ಮಾಡಿದ ಬೆನ್ನಲ್ಲೇ ಅವರುಗಳಿಗೆ ದಿನದಲ್ಲಿ 8 ಗಂಟೆಗಳ ಕೆಲಸ ಮಾಡುವ ಮೂಲಕ ಮೂರು ಪಾಳಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶ ನೀಡಿದ್ದನ್ನು ಗಮನಿಸಬಹುದು.
ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಸಮಯ ಸಂದರ್ಭಕ್ಕೆ ತಕ್ಕಂತೆ ಈ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡುವ ಮೂಲಕ ಅಧಿಕಾರಿ, ಸಿಬ್ಬಂದಿಗಳು ತಮಗೆ ನೀಡಿದ ಕರ್ತವ್ಯವನ್ನು ನಿಭಾಯಿಸುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರವಾಗಿದ್ದಾರೆ ಎಂದರೆ ತಪ್ಪಾಗಲಾರದು.
- ಚಂದ್ರಮೋಹನ್