ಗೋಣಿಕೊಪ್ಪಲು, ಮೇ 27: ರೈತರ ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಮೂಲಕ ಮುಖ್ಯ ಮಂತ್ರಿಗಳಿಗೆ ಹಾಗೂ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮಾತನಾಡಿ, ಎ.ಪಿ.ಎಂ.ಸಿ. ಕಾಯ್ದೆಯನ್ನು ಖಾಸಗೀಕರಣ ಮಾಡುವುದರಿಂದ ದೊಡ್ಡ ದೊಡ್ಡ ಉದ್ದಿಮೆದಾರರು ಇವುಗಳ ಮೇಲೆ ತಮ್ಮ ಕದಂಬ ಬಾಹು ಬೀರಲಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಖಾಸಗೀಕರಣಕ್ಕೆ ಒಪ್ಪಲು ಸಾಧ್ಯವಿಲ್ಲ. ಮುಂದೆಯೂ ರೈತರು ಇದರ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಎಂದ ಅವರು ರೈತರ ಸಾಲ ಮರುಪಾವತಿ ವಿಸ್ತರಣೆ ಮತ್ತು ಸಾಲ ಮನ್ನಾ ವಿಷಯವಾಗಿ, ದೇಶದೆಲ್ಲೆಡೆ ಏಕಕಾಲದಲ್ಲಿ ರೈತರು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಹೋರಾಟವು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ನಡೆಯುತ್ತಿದೆ. ದೇಶದ 300ಕ್ಕೂ ಅಧಿಕ ರೈತ ಸಂಘಟನೆಗಳು ಈ ಹೋರಾಟಕ್ಕೆ ಕೈ ಜೋಡಿಸಿವೆ ಎಂದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೊಡಗು ಜಿಲ್ಲಾಧಿಕಾರಿಗಳಾದ ಅನೀಸ್ ಕಣ್ಮಣಿ ಜಾಯ್ ಅವರು ರೈತರ ಸಮಸ್ಯೆಗಳನ್ನು ಆಲಿಸಿದರು. ಸರ್ಕಾರದೊಂದಿಗೆ ಮಾತುಕತೆ ನಡೆಸುವ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.

ಸರ್ಕಾರಗಳು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ರೈತ ಮುಖಂಡರು ಗಳಾದ ವಕೀಲ ಹೇಮಚಂದ್ರ, ಶ್ರೀಮಂಗಲದ ಅಪ್ಪಚಂಗಡ ಮೋಟಯ್ಯ, ಸುಜಯ್ ಬೋಪಯ್ಯ ಮುಂತಾದವರು ಒತ್ತಾಯಿಸಿದರು.

ರೈತರ ಬೇಡಿಕೆಗಳು: ಕೊಡಗು ಜಿಲ್ಲೆಯಲ್ಲಿ ಸತತವಾಗಿ 2 ವರ್ಷ ಪ್ರಕೃತಿ ವಿಕೋಪದಿಂದ ಭೂ ಕುಸಿತ, ಜಲಪ್ರಳಯದಿಂದ ಪ್ರಕೃತಿ ನಾಶವಾಗಿದ್ದು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಣೆ ಮಾಡಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಪ್ರಕಾರವಾಗಿ ಜಿಲ್ಲೆಯ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು.

ರೈತ ವಿರೋಧಿ ನೀತಿಯಾದ ಎ.ಪಿ.ಸಿ.ಎಂ.ಎಸ್ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದ ಸುಗ್ರಿವಾಜ್ಞೆಯನ್ನು ಹಿಂದಕ್ಕೆ ಪಡೆಯಬೇಕು. ಡಾ. ಸ್ವಾಮಿನಾಥನ್ ವರದಿ ಅನ್ವಯ ಉತ್ಪಾದನಾ ವೆಚ್ಚದ ಜೊತೆಯಲ್ಲಿ ಶೇಕಡಾ 50 ರಷ್ಟು ಲಾಭವನ್ನು ಸೇರಿಸಿ ಎಲ್ಲಾ ಕೃಷಿ ಉತ್ಪನ್ನಗಳನ್ನು ಸರ್ಕಾರ ಖರೀದಿಸಬೇಕು. ಸರ್ಕಾರದ ಆದೇಶದಂತೆ ಸಹಕಾರ ಸಂಘಗಳಲ್ಲಿ ರೈತರು ಪಡೆದ ಸಾಲದ ಮರು ಪಾವತಿಯ ಗಡುವಿನ ಗೊಂದಲವನ್ನು ಶೀಘ್ರವೆ ಬಗೆಹರಿಸಬೇಕು. ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪೌತಿ ಖಾತೆ ಆಂದೋಲನವನ್ನು ಕೊಡಗು ಜಿಲ್ಲೆಯ ಕಂದಾಯ ಇಲಾಖೆ ಯಲ್ಲಿ ಶೀಘ್ರವಾಗಿ ಜಾರಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ತಾಲೂಕು ಅಧ್ಯಕ್ಷರಾದ ಬಾಚಮಾಡ ಭವಿ ಕುಮಾರ್, ವಿವಿಧ ಹೋಬಳಿಯ ಅಧ್ಯಕ್ಷರುಗಳಾದ ಆಲೆಮಾಡ ಮಂಜುನಾಥ್, ಮಂಡೇಪಂಡ ಪ್ರವೀಣ್, ಚಂಗುಲಂಡ ಸೂರಜ್, ತಾಣಚ್ಚೀರ ಲೆಹರ್ ಬಿದ್ದಪ್ಪ, ಮೇಚಂಡ ಕಿಶ,ಹಿರಿಯ ವಕೀಲ ಹೇಮಚಂದ್ರ, ರೈತ ಮುಖಂಡರು ಗಳಾದ ಅಪ್ಪಚಂಗಡ ಮೋಟಯ್ಯ, ಪುಚ್ಚಿಮಾಡ ರಾಯ್ ಮಾದಪ್ಪ, ಹಳೆಗದ್ದೆ ಮಾದಪ್ಪ, ಮಂಡೇಪಂಡ ಸೋನಾಲಿ ಪೊನ್ನಪ್ಪ, ಕುಪ್ಪಂಡ ಬಿಂದು ಅಯ್ಯಪ್ಪ, ಕರಡಿಗೋಡು ಲಿಖಿತ್, ಸೂರಜ್, ಚಟ್ಟಂಗಡ ಚಿಮ್ಮಿ ರವಿ, ಕೊಂಗಂಡ ಪಂಚು ದೇವಯ್ಯ, ಕಿರುಗೂರು ಅಶೋಕ್, ಎ.ಸಿ. ಅಯ್ಯಪ್ಪ, ಕಂಡ್ರಂತಂಡ ರಾಯ್ ಕರುಂಬಯ್ಯ, ಮಂಡೇಪಂಡ ಅರ್ಜುನ್, ಎಸ್.ಎಸ್. ಸುರೇಶ್, ಸೇರಿದಂತೆ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.