ಮುಳ್ಳೂರು, ಮೇ 26: ಪಕ್ಕದ ಹಾಸನ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಗಡಿಭಾಗದ ಶನಿವಾರಸಂತೆ ಹೋಬಳಿಯ ಆಲೂರುಸಿದ್ದಾಪುರ ಗ್ರಾ.ಪಂ.ವತಿಯಿಂದ ಮಾಸ್ಕ್ ಧರಿಸದೆ ಆಲೂರುಸಿದ್ದಾಪುರದಲ್ಲಿ ಓಡಾಡುತ್ತಿದ್ದ ಜನರಿಗೆ, ವಾಹನ ಸವಾರರಿಗೆ, ಅಂಗಡಿಗಳಲ್ಲಿ ಮಾಸ್ಕ್ ಧರಿಸದೆ ಬಂದ ಗ್ರಾಹಕರು ಮತ್ತು ವರ್ತಕರಿಗೆ ಮಂಗಳವಾರ ದಂಡ ವಸೂಲಾತಿ ಕಾರ್ಯಾಚರಣೆ ನಡೆಸಲಾಯಿತು. ಆಲೂರುಸಿದ್ದಾಪುರ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಗಡಿಭಾಗದಲ್ಲಿರುವುದರಿಂದ ದಿನನಿತ್ಯ ಅಧಿಕ ಸಂಖ್ಯೆಯಲ್ಲಿ ಜನರು ಆಲೂರುಸಿದ್ದಾಪುರಕ್ಕೆ ಆಗಮಿಸುತ್ತಾರೆ. ಅಂಗಡಿ, ಪೆಟ್ರೋಲ್ ಬಂಕ್, ಬ್ಯಾಂಕ್ ವ್ಯವಹಾರ, ಔಷಧಿ ಅಂಗಡಿ, ಮದ್ಯದ ಅಂಗಡಿ, ಹಾರ್ಡ್‍ವೇರ್ ಅಂಗಡಿಗಳಿಗೆ ಬಂದು ವ್ಯವಹಾರ ನಡೆಸುತ್ತಾರೆ. ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇಲ್ಲಿಗೆ ತಂಡೋಪತಂಡವಾಗಿ ಬೈಕ್, ಕಾರು, ಜೀಪು, ಟ್ರ್ಯಾಕ್ಟರ್‍ಗಳಲ್ಲಿ ಬರುವುದರಿಂದ ಆಲೂರುಸಿದ್ದಾಪುರ ಭಾಗದ ಸ್ಥಳೀಯರಿಗೆ ಕೊರೊನಾ ವೈರಸ್ ಹರಡಬಹುದೆಂಬ ಭೀತಿ ಶುರುವಾಗಿದ್ದು, ಆಲೂರುಸಿದ್ದಾಪುರ ಗ್ರಾ.ಪಂ. ವತಿಯಿಂದ ಕಟ್ಟೆಚ್ಚರ ವಹಿಸಲಾಗಿದೆ.

ಆಲೂರುಸಿದ್ದಾಪುರ ಗ್ರಾ.ಪಂ. ಅಧಿಕಾರಿಗಳು, ಆಶಾ ಕಾರ್ಯಕರ್ತೆ ಯರು ಮತ್ತು ಕೊರೊನಾ ವಾರಿಯರ್ಸ್ ತಂಡ ಕಾರ್ಯಾಚರಣೆ ನಡೆಸಿ ಮಾಸ್ಕ್ ಧರಿಸದೆ ಅನಗತ್ಯವಾಗಿ ಓಡಾಡುತ್ತಿದ್ದ ಹಾಸನ ಭಾಗದ ಜನರು ಮತ್ತು ಸ್ಥಳೀಯ ಜನರಿಗೆ ಮಾಸ್ಕ್ ಧರಿಸದ ವಾಹನ ಸವಾರರಿಗೆ ರೂ. 100 ಡಂಡ ವಿಧಿಸಲಾಯಿತು. ಈ ಹಿಂದೆ ಅಂಗಡಿ ಮಾಲೀಕರಿಗೆ ಮಾಸ್ಕ್ ಧರಿಸದೆ ಬರುವ ಗ್ರಾಹಕರೊಂದಿಗೆ ವ್ಯವಹಾರ ನಡೆಸದಂತೆ ಎಚ್ಚರಿಕೆ ನೀಡಿದ್ದರೂ ಮತ್ತೆ ಪುನಾವರ್ತನೆಯಾದ ಹಿನ್ನೆಲೆಯಲ್ಲಿ ರೂ. 300 ದಂಡ ವಿಧಿಸಲಾಯಿತು.

ದಂಡ ವಸೂಲಾತಿ ಕಾರ್ಯಾ ಚರಣೆ ತಂಡದಲ್ಲಿ ಆಲೂರುಸಿದ್ದಾಪುರ ಪಿಡಿಒ ಪೂರ್ಣಿಮಾ, ಕಾರ್ಯದರ್ಶಿ ಚಂದ್ರೇಗೌಡ, ಹಿರಿಯ ಆಶಾ ಕಾರ್ಯಕರ್ತೆ ಶುಭ, ವಾರಿಯರ್ಸ್ ಸಿ.ಕೆ. ಸುರೇಶ್ ಇದ್ದರು.

-ಭಾಸ್ಕರ್ ಮುಳ್ಳೂರು